Header Ads
Header Ads
Breaking News

ಮನೆ ಒಡೆದರೆ ಸಾಮೂಹಿಕ ಆತ್ಮಹತ್ಯೆಯ ಎಚ್ಚರಿಕೆ

ಇವರಿಗೆ ಇರಲು ಸ್ವಂತ ಮನೆಯಿಲ್ಲ. ಜಾಗ ಮೊದಲೇ ಇಲ್ಲ. ಸರ್ಕಾರಿ ಜಾಗದಲ್ಲಿ ಕೂತು ಅಕ್ರಮ-ಸಕ್ರಮದಡಿ ಅರ್ಜಿ ಹಾಕಿದರೆ ಆಡಳಿತ ಕಣ್ಣು ತೆರೆಯುತ್ತಿಲ್ಲ. ಚಿನ್ನಾಭರಣಗಳನ್ನೆಲ್ಲಾ ಅಡವಿಟ್ಟು ಕಷ್ಟಪಟ್ಟು ಲಕ್ಷಾಂತರ ರೂಪಾಯಿ ವ್ಯಯಿಸಿ ಸಣ್ಣದೊಂದು ಸೂರು ಕಟ್ಟಿಕೊಂಡರೆ ಅದರ ನಿರ್ನಾಮಕ್ಕೂ ಮುಂದಾಗಿದೆ. ಎಂದು ಮನೆ ಕೆಡವುತ್ತಾರೋ ಎಂದು ಮನೆಯ ಮೂಲೆಯಲ್ಲಿ ಕೂತು ಕಣ್ಣೀರು ಸುರಿಸುತ್ತಿರುವ ಬಡ ಜೀವಗಳು ಒಂದೆಡೆಯಾದರೆ, ದಿನನಿತ್ಯ ಊಟ, ನಿದ್ದೆಯಿಲ್ಲದ ಕಷ್ಟಪಟ್ಟು ಕಟ್ಟಿರುವ ಮನೆಯನ್ನು ಉಳಿಸಿಕೊಳ್ಳಲು ಸರರ್ಕಾರಿ ಕಚೇರಿ, ಜನಪ್ರತಿನಿಧಿಗಳ ಮನೆ ಅಲೆದಾಡುತ್ತಿರುವ ಮಹಿಳೆಯರು ಇನ್ನೊಂದೆಡೆ. ಇವರ ಕಣ್ಣೀರ ಕಥೆ ನೋಡಿದರೆ ಎಂತವರ ಹೃದಯವಾದರೂ ಕರಗದೆ ಇರದು. ಈ ಕುಟುಂಬಗಳ ಕರುಣಾಜಕನ ಸ್ಟೋರಿ ಇಲ್ಲಿದೆ.


ಕಳೆದ ಐದಾರು ವರ್ಷಗಳಿಂದ ಇಲ್ಲಿನ ಕಾಳಾವರ ಗ್ರಾಮಪಂಚಾಯತ್ ವ್ಯಾಪ್ತಿಯ ದೇವಸ್ಥಾನ ಬೆಟ್ಟು ಸಮೀಪದಲ್ಲಿರುವ ಸರ್ಕಾರಿ ಜಾಗದಲ್ಲಿ ಮನೆ ಕಟ್ಟಿಕೊಂಡು ವಾಸಿಸುತ್ತಿರುವ ಕುಟುಂಬಗಳಿಗೆ ಇದೀಗ ಮನೆ ತೆರವುಗೊಳಿಸಲು ಆದೇಶಿಸಿ ತಹಸೀಲ್ದಾರ್ ನೋಟೀಸ್ ನೀಡಿದ್ದಾರೆ. ಈ ದಿಢೀರ್ ಆದೇಶದಿಂದಾಗಿ ಬಡ ಕುಟುಂಬಗಳು ದಿಕ್ಕೇ ತೋಚದೆ ಕಣ್ಣೀರ ಕಡಲಲ್ಲಿ ಮುಳುಗಿವೆ. ಹೌದು, ಐದಾರು ವರ್ಷಗಳಿಂದ ಸರ್ಕಾರಿ ಭೂಮಿಯಲ್ಲಿ ವಾಸವಿದ್ದರೂ ತಾಲೂಕು ಆಡಳಿತ ಮಾತ್ರ ಇವರಿಗೆ ಅಕ್ರಮ ಸಕ್ರಮದಡಿಯಲ್ಲಿ ಜಾಗ ಮಂಜೂರು ಮಾಡಲು ಹಿಂದೇಟು ಹಾಕುತ್ತಿದೆ. ವಾಸ್ತವ್ಯ ದೃಢೀಕರಣ ನೀಡಿದ್ದರೂ ಬೇರೆ ಬೇರೆ ನೆವಗಳನ್ನು ಹೇಳಿ ಸತಾಯಿಸುತ್ತಿದ್ದು, ಇದೀಗ ಮೂರು ದಿನಗಳ ಗಡುವು ನೀಡಿ ಮನೆ ತೆರವಿನ ಆದೇಶಕ್ಕೆ ಮುಂದಾಗಿದೆ.


ಸೋದರ ಸಂಬಂಧಿಯ ಮನೆಯಲ್ಲಿ ತನ್ನ ಮಕ್ಕಳೊಂದಿಗೆ ವಾಸವಿದ್ದ ಕಾಳಾವರ ನಿವಾಸಿ ಅಮ್ಮಣ್ಣಿ ಶೆಡ್ತಿ ಐದಾರು ವರ್ಷಗಳ ಹಿಂದೆ ತಮ್ಮ ಮಕ್ಕಳು ಹಾಗೂ ಸಂಬಂಧಿಗಳಾದ ಸರ್ಕಾರಿ ಭೂಮಿಯಲ್ಲಿ ಬೇರೆ ಬೇರೆ ಗುಡಿಸಲು ಕಟ್ಟಿಕೊಂಡು ವಾಸವಾಗಿದ್ದರು. ಮಳೆಗಾಲದಲ್ಲಿ ಪುಟ್ಟ ಮಕ್ಕಳೊಂದಿಗೆ ವಾಸಿಸುತ್ತಿದ್ದ ಇವರಿಗೆ ಸರ್ಕಾರ ಯಾವುದೇ ಅನುದಾನವಿರಲಿ ಜಾಗವಿರಲಿ ಇದುವರೆಗೂ ಮಂಜೂರು ಮಾಡಿಲ್ಲ. ಸರ್ಕಾರಿ ಜಾಗದಲ್ಲಿ ಕೂತ ಏಳು ಮನೆಯವರಿಗೂ ಸ್ವಂತ ಜಾಗವಾಗಲಿ, ಮನೆಯಾಗಲಿ ಇಲ್ಲ. ಸರ್ಕಾರಿ ಜಾಗದಲ್ಲಿ ನಿರ್ಮಿಸಿಕೊಂಡಿರುವ ಮನೆಯನ್ನೇ ನಂಬಿಕೊಂಡಿರುವ ಇವರಿಗೆ ತಹಸೀಲ್ದಾರ್ ಆದೇಶ ಇದೀಗ ಬರಸಿಡಿಲು ಎರಗಿದಂತಾಗಿದೆ. ವಸಂತಿ, ಸುಗಂಧಿ, ಶ್ರೀಮತಿ, ಶ್ಯಾಮಲಾ, ಜ್ಯೋತಿ, ಗೀತಾ, ಅಕ್ಷತಾ ಒಟ್ಟು ಏಳು ಕುಟುಂಬಗಳು ತಮ್ಮ ಮಕ್ಕಳೊಂದಿಗೆ ಕೂಲಿ ಕೆಲಸ ಮಾಡಿ ಇದೇ ಮನೆಗಳಲ್ಲಿ ವಾಸಿಸುತ್ತಿದ್ದಾರೆ.

ಐದಾರು ವರ್ಷಗಳಿಂದ ಮಳೆಗಾಲ ಚಳಿಗಾಲವೆನ್ನದೆ ಪುಟ್ಟ ಮಕ್ಕಳೊಂದಿಗೆ ಜೀವನ ಸಾಗಿಸುತ್ತಿದ್ದ ಇವರು ಒಂದು ವರ್ಷಗಳ ಹಿಂದೆ ಚಿನ್ನಾಭರಣಗಳನ್ನೆಲ್ಲಾ ಅಡವಿಟ್ಟು ಚಿಕ್ಕದಾದ ಮನೆಯನ್ನು ಕಟ್ಟಿಕೊಂಡಿದ್ದರು. ಸುಮಾರು ೨ ಲಕ್ಷದವರೆಗೂ ವೆಚ್ಚ ಮಾಡಿದ್ದ ಮನೆಗಳು ಕಣ್ಣೆದುರೆ ನೆಲಸಮವಾಗುತ್ತದೆ ಎನ್ನುವ ಆತಂಕದಲ್ಲೇ ದಿನ ದೂಡುತ್ತಿರುವ ಇವರ ನೋವಿಗೆ ಇದುವರೆಗೂ ಬೆರಳೆಣಿಕೆಯ ರಾಜಕಾರಣಿಗಳು ಬಿಟ್ಟರೆ ಬೇರಾರು ಸ್ಪಂದಿಸಿಲ್ಲ.ನಾವು ಐದಾರು ವರ್ಷಗಳಿಂದ ಗುಡಿಸಲಲ್ಲೇ ವಾಸವಿದ್ದೇವೆ. ಕಳೆದ ವರ್ಷಗಳಿಂದೀಚೆಗೆ ಪುಟ್ಟದೊಂದು ಮನೆ ಕಟ್ಟಿಕೊಂಡಿದ್ದೇವೆ. ಇದುವರೆಗೂ ನಮಗೆ ವಿದ್ಯುತ್ ಆಗಲಿ, ನೀರಿನ ಸೌಲಭ್ಯವಾಗಲಿ ಸಿಕ್ಕಿಲ್ಲ. ನಾಲ್ಕೈದು ದಿನಗಳಿಂದ ಊಟ ಮಾಡದೆ ಸರ್ಕಾರಿ ಕಚೇರಿಗಳಿಗೆ, ಜನಪ್ರತಿನಿಧಿಗಳ ಮನೆಗೆ ಅಲೆಯುತ್ತಿದ್ದೇವೆ. ಒಂದು ವೇಳೆ ನಮ್ಮ ಮನೆಗಳನ್ನು ನೆಲಸಮಗೊಳಿಸಲು ಮುಂದಾದರೆ ನಾವೆಲ್ಲರೂ ವಿಷವುಂಡು ಸಾಮೂಹಿಕವಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ ಎನ್ನುತ್ತಾರೆ ನೊಂದವರು.

ಐದು ಹೆಣ್ಣುಮಕ್ಕಳನ್ನು ಬೇರೊಬ್ಬರ ಮನೆಯಲ್ಲಿ ಸಾಕಿ ಕಷ್ಟಪಟ್ಟು ಮದುವೆ ಮಾಡಿಸಿದ್ದೇನೆ. ನನ್ನದು ಎನ್ನುವ ಆಸ್ತಿ ನನ್ನ ಐವರು ಮಕ್ಕಳು ಬಿಟ್ಟರೆ ಬೇರಾವುದು ಇಲ್ಲ. ಸರ್ಕಾರಿ ಜಾಗದಲ್ಲಿ ಈಗ ಕೂತಿರುವ ಜಾಗ ಬಿಟ್ಟರೆ ಬೇರಾವುದೆ ಜಾಗ ನಮ್ಮ ಬಳಿ ಇಲ್ಲ. ಇದೀಗ ಏಕಾಏಕಿಯಾಗಿ ಮನೆ ತೆರವಿಗೆ ಆದೇಶ ನೀಡಿದ್ದಾರೆ. ಮನೆ ತೆರವುಗೊಳಿಸಿದರೆ ನಾವೆಲ್ಲರೂ ಬೀದಿಗೆ ಬೀಳುತ್ತೇವೆ. ಸತ್ತ ಮೇಲೆ ಇಲ್ಲೇ ಮಣ್ಣಾಗಬೇಕೆಂಬ ಕೊನೆ ಆಸೆ ನನ್ನದು ಎಂದು ವೃದ್ದೆ ಅಮ್ಮಣ್ಣಿ ಶೆಡ್ತಿ ಮಾಧ್ಯಮದ ಮುಂದೆ ಕಣ್ಣೀರಿಟ್ಟರು.

ದೇವಸ್ಥಾನ ಬೆಟ್ಟು ಸರ್ಕಾರಿ ಜಾಗದಲ್ಲಿ ಕೂತವರಿಗೆ ವಾಸ್ತವ್ಯ ದೃಢೀಕರಣ ನೀಡಲು ಎಲ್ಲಾ ಸದಸ್ಯರು ಸರ್ವಾನುಮತದಿಂದ ನಿರ್ಣಯ ಕೈಕೊಂಡಿದ್ದಾರೆ. ಸ್ಥಳೀಯಾಡಳಿತದ ನಿರ್ಣಯಕ್ಕೆ ಬೆಲೆ ಇಲ್ಲ ಅಂತಾದ ಮೇಲೆ ೯೪ಸಿ ಗೆ ಅರ್ಜಿ ನೀಡುವಾಗ ಪಂಚಾಯತ್ ದೃಢೀಕರಣ ಏಕೆ ಕೇಳಬೇಕು. ನಾವು ಕೊಟ್ಟಿರುವ ದೃಢೀಕರಣಕ್ಕೆ ಈಗಲೂ ಬದ್ದರಿದ್ದೇವೆ.

ಈ ಕುರಿತು ವಿ4 ವಾಹಿನಿಯೊಂದಿಗೆ ಪ್ರತಿಕ್ರಿಯಿಸಿದ ವಿಧಾನ ಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ, ಮನೆ ತೆರವಿನ ಆದೇಶ ಹಿಂಪಡೆಯಲು ಉಸ್ತುವಾರಿ ಸಚಿವರಲ್ಲಿ ಮಾತನಾಡಿದ್ದೇನೆ. ಬಳಿಕ ಸಚಿವರು ಜಿಲ್ಲಾಧಿಕಾರಿಯವರಲ್ಲಿ ಹಿಂಪಡೆಯಲು ಆದೇಶ ನೀಡಿದ್ದಾರೆ. ಅದರ ಮೇಲೂ ಮನೆ ತೆರವುಗೊಳಿಸಲು ಆದೇಶ ನೀಡಿರುವುದು ಸರಿಯಾದ ಕ್ರಮವಲ್ಲ. ಇದನ್ನೆಲ್ಲಾ ಗಮನಿಸಿದರೆ ಜಿಲ್ಲೆಯಲ್ಲಿ ಸರ್ಕಾರ ಆಡಳಿತ ನಡೆಸುತ್ತದೋ ಅಥವಾ ಅಧಿಕಾರಿಗಳು ಆಡಳಿತ ನಡೆಸುತ್ತಾರೋ ಎಂಬ ಪ್ರಶ್ನೆ ಎದುರಾಗಿದೆ. ನೊಂದವರು ಧರಣಿ ಮಾಡುವುದಾದರೆ ನಾನು ಅವರೊಂದಿಗೆ ಧರಣಿ ಕೂರುವೆ.
ಜಿಲ್ಲೆಯಲ್ಲಿ ಕಾಡುತ್ತಿರುವ ಮರಳು ಸಮಸ್ಯೆಯನ್ನು ನೀಗಿಸಲು ನೀತಿ ಸಂಹಿತೆಯ ನೆಪವೊಡ್ಡುವ ಜಿಲ್ಲಾಡಳಿತಕ್ಕೆ ಬಡವನ ಮನೆಯೊಡೆಯಲು ನೀತಿ ಸಂಹಿತೆ ಅಡ್ಡಿ ಬರುವುದಿಲ್ಲವೇ ಎಂದು ಕೋಟ ಪ್ರಶ್ನಿಸಿದ್ದಾರೆ.

ಒಟ್ಟಿನಲ್ಲಿ ನಿರ್ಗತಿಕ ಕುಟುಂಬಗಳು ಅತಂತ್ರರಾಗಿದ್ದು, ಇದೀಗ ಆತ್ಮಹತ್ಯೆ ಯೋಚನೆಗೆ ಮುಂದಾಗಿದ್ದಾರೆ. ಈ ಗಂಭೀರ ವಿಚಾರವನ್ನು ಆಡಳಿತ ವ್ಯವಸ್ಥೆ ಹೇಗೆ ನಿಭಾಯಿಸುತ್ತದೆ ಎಂಬುವುದನ್ನು ಕಾದುನೋಡಬೇಕಿದೆ.

ಶ್ರೀಕಾಂತ ಹೆಮ್ಮಾಡಿ ಕುಂದಾಪುರ

Related posts

Leave a Reply