Header Ads
Header Ads
Header Ads
Breaking News

ಮನೆ ಬಿಟ್ಟು ಹೋದಾತ 30 ವರ್ಷ ಕಳೆದು ಮನೆಗೆ ಬಂದ ಜೀವನೋಪಾಯಕ್ಕೆ ಊರು ಬಿಟ್ಟಾತ ಹೈದರಾಬಾದ್ ಸೇರಿದ ಅದೊಂದು ದಿನ ಇದ್ದಕ್ಕಿದ್ದಂತೆ ಮನೆಗೆ ವಾಪಾಸ್ಸಾದ ಹೆರಿಯ ಮೊಗವೀರ

ಸುಮಾರು ಮೂವತ್ತು ವರ್ಷಗಳ ಕೆಳಗೆ ಕೆಲಸಕ್ಕೆಂದು ಮನೆ ಬಿಟ್ಟು ಹೋದವರು, ಮತ್ತೇ ಮನೆ ಕಡೆ ಬರಲೇ ಇಲ್ಲ.. ಕೊಂಗಾಟದಿಂದ ನೋಡಿಕೊಂಡಿದ್ದ ತಾಯಿ.. ಪ್ರೀತಿಯ ಹೆಂಡತಿ.. ಇಬ್ಬರು ಮುದ್ದಿನ ಹೆಣ್ಮಕ್ಕಳು, ಇನ್ನೂ ಲೋಕವನ್ನೇ ಕಾಣದ ಮಗ ಎಲ್ಲರನ್ನ ಬಿಟ್ಟು ಜೀವನೋಪಾಯಕ್ಕೆಂದು ಊರು ಬಿಟ್ಟು ತೆರಳಿ ಹೈದರಾಬಾದ್ ಸೇರಿಕೊಂಡರು. ಸತತ ಮೂವತ್ತು ವರ್ಷ ಎಲ್ಲರನ್ನ ಮರೆತು ಜೀವನ ಸಾಗಿಸುತ್ತಿದ್ದ ಆದರೆ ಅದೊಂದು ದಿವಸ ಇದ್ದಕ್ಕಿದ್ದಂತೆ ಮನೆಗೆ ವಾಪಾಸ್ ಬಂದ ಯಾರೀತ? ಯಾಕೆ ಮನೆ ಬಿಟ್ಟು ಹೋದ? ಮತ್ಯಾಕೆ ಮನೆಗೆ ವಾಪಾಸ್ ಬಂದ ಈ ಸ್ಟೋರಿಯಲ್ಲಿ ನೋಡಿ.
ಮೂವತ್ತು ವರ್ಷಗಳ ಹಿಂದೆ ಕೆಲಸಕ್ಕೆಂದು ಮನೆ ಬಿಟ್ಟು ಹೋದ ಇವರಿಗೆ ಒಂದೆರಡು ತಿಂಗಳುಗಳ ಕೆಳಗೆ ಒಂದು ಫೋನ್ ಕರೆ ಬರುತ್ತದೆ. ಆ ಕಡೆಯಿಂದ ಕೇಳಿದ ಧ್ವನಿ ತಾಯಿಯದ್ದಾಗಿರುತ್ತದೆ. ಅಂದು ತಾಯಿಯನ್ನು ಕಾಣಬೇಕೆಂಬ ಹಂಬಲ ಮೂಡಿ ತನ್ನೆಲ್ಲ ಕೆಲಸಗಳನ್ನ ಪೂರೈಸಿ ಅನ್ನ ಕೊಟ್ಟ ಊರನ್ನ ಬಿಟ್ಟು ತುತ್ತು ಕೊಟ್ಟ ಊರಿನ ಕಡೆ ಬರುತ್ತಾರೆ. ಪ್ರೀತಿಯಿಂದ ಬೆಳೆಸಿದ ತಾಯಿಯ ಮಡಿಲು ಸೇರುತ್ತಾರೆ. ಈ ಕಥೆಯನ್ನ ನೋಡಿದರೆ ಸಿನಿಮಾ ಕಥೆಯಂತೆ ಕಂಡರೂ ಇದು ಸಿನಿಮಾ ಕಥೆಯಲ್ಲ. ಕುಂದಾಪುರ ತಾಲೂಕಿನ ಕಾವ್ರಾಡಿಯಲ್ಲಿ ನಡೆದ ನೈಜ ಘಟನೆ.


ಕಾವ್ರಾಡಿ ನಿವಾಸಿ ಸೀನ ಮೊಗವೀರ ಮತ್ತು ಲಚ್ಚಿಯವರ ಹಿರಿಯ ಮಗ ಹೆರಿಯ ಮೊಗವೀರ ಮನೆಯಲ್ಲಿನ ಕಷ್ಟ, ಕಡು ಬಡತನ ಕಂಡು ಬೇಸತ್ತ ಇವರು ಊರ ಕೆಲ ಸ್ನೇಹಿತರೊಂದಿಗೆ ಊರು ಬಿಟ್ಟು ಹೈದರಾಬಾದ್ ಸಮೀಪದ ನೆಲಗುಂದದಲ್ಲಿ ಪರಿಚಯಸ್ಥ ಶೆಟ್ಟರ ಹೊಟೇಲ್‌ನಲ್ಲಿ ಅಡುಗೆ ಸಹಾಯಕನಾಗಿ ಸೇರಿಕೊಳ್ಳುತ್ತಾರೆ. ಒಂದು ವರ್ಷ ಕೆಲಸ ಮಾಡಿ ವಾಪಾಸ್ ಬಂದರೂ ಹದಿನೈದು ದಿನ ಬಿಟ್ಟು ಮತ್ತೇ ಅಲ್ಲಿ ಕೆಲಸಕ್ಕೆ ಸೇರುತ್ತಾರೆ. ಅಲ್ಲಿಂದ ಮತ್ತೇ ಊರ ಕಡೆ ತಿರುಗಿಯೂ ನೋಡಲೇ ಇಲ್ಲ. ಹೀಗೇ ಮೂವತ್ತು ವರ್ಷಗಳನ್ನ ದೂಡಿದರು. ಆದರೆ ಅದೊಂದು ದಿನ ಹೆರಿಯನ ಬಗ್ಗೆ ಕಾವ್ರಾಡಿ ಸಮೀಪದ ಕೊಡ್ಲಾಡಿಯ ಅಂಗಡಿಯಲ್ಲಿ ಮಾತನಾಡುತ್ತಿದ್ದರು. ಅದನ್ನು ಕಂಡ ಕೇಳಿದ ಇವರ ತಂಗಿ ಸರೋಜಾರವರ ಪತಿ, ಅವರನ್ನು ಸಂಪರ್ಕಿಸಿ ಹೆರಿಯರವರ ದೂರವಾಣಿ ಸಂಖ್ಯೆಯನ್ನು ಪಡೆದು, ಸಂಪರ್ಕಿಸಿದರು. ಬಹಳ ಪ್ರಯತ್ನದ ಬಳಿಕ ಸಿಕ್ಕ ಇವರು, ಅಮ್ಮ, ತಂಗಿ ಹಾಗೂ ತಂಗಿ ಮಗನೊಂದಿಗೆ ಮಾತನಾಡಿದರು. ಆಗ ಹೆರಿಯ ಮೊಗವೀರರಿಗೆ ತವರಿನ ಕೂಗು ಆಕರ್ಷಿಸಿತು. ಗಣೇಶ ಚತುರ್ಥಿಯ ದಿನ ಹೈದರಾಬಾದ್‌ನಲ್ಲಿ ತನ್ನೆಲ್ಲ ಕೆಲಸವನ್ನ ಪೂರೈಸಿ, ಇನ್ನು ನಾನು ಬರುವುದಿಲ್ಲ. ಇನ್ನು ನನ್ನ ಹುಟ್ಟೂರಿನಲ್ಲೇ ಇರುವೆ ಎಂದು ಹೇಳಿ ವಾಪಾಸಾಗಿದ್ದಾರೆ.

ಸುಮಾರು ೩೦ವರ್ಷ ಪ್ರಾಯದಲ್ಲಿ ಊರು ಬಿಟ್ಟು ಹೋಗಿದ್ದ ಹೆರಿಯ ಮೊಗವೀರರಿಗೆ ಈಗ ಸರಿ ಸುಮಾರು ೬೦ವರ್ಷ ಅವರು ಮನೆ ಬಿಟ್ಟು ಹೋಗಿದ್ದಾಗ ಐದುವರ್ಷ ಪ್ರಾಯದವಳಾಗಿದ್ದ ಮಗಳಿಗೆ ಮದುವೆಯಾಗಿ ಐದು ವರ್ಷದ ಮಗಳಿದ್ದಾಳೆ. ಮಗನ ಆಗಮನದ ನಿರೀಕ್ಷೆಯಲ್ಲಿದ್ದ ತಾಯಿ ಲಚ್ಚಿಗೆ ಮಗನ ಆಗಮನ ಸಂತೋಷ ನೀಡಿದೆ. ಅಣ್ಣನೆಂದರೆ ಪ್ರಾಣವಿಟ್ಟುಕೊಂಡಿದ್ದ ತಂಗಿ ಸರೋಜಾರವರ ಆನಂದಕ್ಕೆ ಪಾರವೇ ಇಲ್ಲ. ಚಿಕ್ಕಂದಿಂನಲ್ಲಿ ಕಂಡ ತನ್ನ ಮಕ್ಕಳು ಈಗ ಎದೆಯೆತ್ತರಕ್ಕೆ ಬೆಳೆದು ನಿಂತಿರುವುದನ್ನ ಕಂಡು ಸಂತೋಷ ದುಃಖ ಎರಡು ಅನುಭವವನ್ನ ಒಟ್ಟಿಗೆ ಅನುಭವಿಸಿದರು. ತನ್ನ ಕುಟುಂಬದವರೊಂದಿಗೆ ಕಳೆಯಬೇಕಾಗಿದ್ದ ಅಮೂಲ್ಯ ಕ್ಷಣಗಳನ್ನ ಕಳೆದುಕೊಂಡೆನೆಂಬ ಬೇಸರ ಹೆರಿಯರಲ್ಲಿದ್ದರೂ, ಅದನ್ನ ಈಗಲಾದರೂ ವಾಪಾಸು ಪಡೆದೆನೆಂಬ ಖುಷಿ ಅವರಲ್ಲಿದೆ.

ಎಷ್ಟೋ ಮಂದಿ ಊರು ಬಿಟ್ಟು ಉದ್ಯೋಗಕ್ಕೆಂದು ಸೇರಿ ಹುಟ್ಟೂರು ತನ್ನವರನ್ನ ಮರೆಯುತ್ತಾರೆ. ಮನೆಯವರಿಗೂ ಗೊತ್ತಿರುವುದಿಲ್ಲ ಅವರು ಎಲ್ಲಿದ್ದಾರೆ ಎಂದು, ಕೆಲವರು ಮಣ್ಣೊಳಗೆ ಮಣ್ಣಾಗಿ ಹೋದರೆ ಇನ್ನೂ ಕೆಲವರು ಎಲ್ಲಿ ಹೋದರೆಂಬುದೆ ನಿಗೂಢವಾಗಿ ಕಾಣುತ್ತದೆ. ಕೆಲವೊಂದು ಪ್ರಕರಣಗಳಲ್ಲಿ ಮಾತ್ರ ಹೀಗೆ ಮನೆಗೆ ವಾಪಾಸಾಗುತ್ತಾರೆ.
ಹರೀಶ್ ಕಿರಣ್ ತುಂಗ,

Related posts

Leave a Reply