Header Ads
Header Ads
Breaking News

ಮರುಕಳಿಸಲಿದೆ ‘ಪಡುಮಲೆ’ಯ ಗತ ವೈಭವ ಭವ್ಯತೆ ತಾಳಿದ ದೈವಸ್ಥಾನದಲ್ಲಿ ಬ್ರಹಕಲಶೋತ್ಸವ ಸಂಭ್ರಮ ಕಾರಣಿಕ ನೆಲೆಬೀಡಿನಲ್ಲಿ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ

ಜೀವಿತಾವಧಿಯಲ್ಲಿ ಅವಳಿ ವೀರ ಪುರುಷರೆಂಬ ಹೆಸರು ಪಡೆದು ಸಾವಿನ ಬಳಿಕ ದೈವತ್ವಕ್ಕೇರಿರುವ ಐತಿಹಾಸಿಕ ಹಿನ್ನಲೆ ಇರುವ ಕೋಟಿ-ಚೆನ್ನಯರ ಜನ್ಮಭೂಮಿಯೇ ಈ ಪಡುಮಲೆ ಕ್ಷೇತ್ರ. .ಕೋಟಿ-ಚೆನ್ನಯರ ಜನ್ಮಸ್ಥಳದ ಪಕ್ಕದಲ್ಲಿಯೇ ಇರುವ ಕಾರಣಿಕ ಕ್ಷೇತ್ರ ಪಡುಮಲೆ ಪೂಮಾಣಿ -ಕಿನ್ನಿಮಾಣಿ ವ್ಯಾಘ್ರಚಾಮುಂಡಿ ದೈವಸ್ಥಾನ. ಈ ಕಾರಣಿಕದ ನೆಲೆಬೀಡುವಿನಲ್ಲಿ ಈಗ ಪುನರ್ ಪ್ರತಿಷ್ಠಾ ಬ್ರಹಕಲಶೋತ್ಸವ ಸಂಭ್ರಮ.ಬಲ್ಲಾಳರ ಆಳ್ವಿಕೆಯ ಕಾಲದಲ್ಲಿ ಬಹಳಷ್ಟು ಹೆಸರುವಾಸಿಯಾದ ಸಮೃದ್ಧ ಕ್ಷೇತ್ರ ಪಡುಮಲೆ. ಪುತ್ತೂರು ತಾಲ್ಲೂಕಿನಲ್ಲಿ ಇರುವ ಈ ಪಡುಮಲೆ ಕ್ಷೇತ್ರದ ವ್ಯಾಪ್ತಿ ವಿಶಾಲವಾಗಿದೆ. ಬಲ್ಲಾಳರ ಆಳ್ವಿಕೆ ಕಾಲದಲ್ಲಿ ಪಡುಮಲೆ ಪುತ್ತೂರು ತಾಲ್ಲೂಕಿನ ಪಡುವನ್ನೂರು, ಬಡಗನ್ನೂರು, ನೆಟ್ಟಣಿಗೆ ಮುಡ್ನೂರು, ಮಾಡ್ನೂರು, ಅರಿಯಡ್ಕ, ಒಳಮೊಗ್ರು, ಬೆಟ್ಟಂಪಾಡಿ, ನಿಡ್ಪಳ್ಳಿ ಹಾಗೂ ಕೇರಳದ ನೆಟ್ಟಣಿಗೆ ಮತ್ತು ಬೊಳ್ಳೂರು ಗ್ರಾಮಗಳು ಸೇರಿದಂತೆ ಒಟ್ಟು 10 ಗ್ರಾಮ ವ್ಯಾಪ್ತಿಯನ್ನು ಒಳಗೊಂಡಿತ್ತು ಎಂಬುವುದು ಇತಿಹಾಸ ದಾಖಲೆಗಳಿಂದ ತಿಳಿದು ಬರುತ್ತದೆ.

ಈ ವ್ಯಾಪ್ತಿಯ ಮಂದಿಯ ಪ್ರಮುಖ ಆರಾಧನಾ ಕ್ಷೇತ್ರ ಇಲ್ಲಿನ ಪೂಮಾಣಿ-ಕಿನ್ನಿಮಾಣಿ ,ವ್ಯಾಘ್ರಚಾಮುಂಡಿ ದೈವಸ್ಥಾನ ಆಗಿತ್ತು, ನಂಬಿದವರಿಗೆ ಅಭಯ ನೀಡುವ ಕಾರಣಿಕದ ದೈವಗಳೆಂಬ ಖ್ಯಾತಿ ಇಲ್ಲಿನ ದೈವಗಳಿಗಿತ್ತು ಎಂಬುವುದನ್ನು ಇಲ್ಲಿನ ಇತಿಹಾಸ ಹೇಳುತ್ತಿದೆ. ಪಡುಮಲೆಯಲ್ಲಿ ಉಳ್ಳಾಕುಲು ದೈವಗಳ ಮತ್ತು ವ್ಯಾಘ್ರಚಾಮುಂಡಿ ಪರಿವಾರ ದೈವಗಳ ವಾರ್ಷಕ ನೇಮೋತ್ಸವ ಜನವರಿ ತಿಂಗಳ 14ರಿಂದ ಮೊದಲ್ಗೊಂಡು 18ರ ತನಕ ನಡೆದು ಬಂದಿರುವುದು ಇಲ್ಲಿನ ಸಂಪ್ರದಾಯ. ಇಲ್ಲಿ ಉಳ್ಳಾಕುಲು ದೈವಗಳಿಗೆ ನೇಮ ನಡಾವಳಿ ನಡೆದ ಬಳಿಕವೇ ತುಳುನಾಡು ಹಾಗೂ ಕೇರಳದ ಕಾಸರಗೋಡು ಭಾಗದಲ್ಲಿನ ಉಳ್ಳಾಕುಲು ದೈವಸ್ಥಾನಗಳಲ್ಲಿ ವರ್ಷಾವಧಿ ನೇಮೋತ್ಸವ ಆರಂಭಗೊಳ್ಳುವ ಸಂಪ್ರದಾಯವಿದೆ. ಈ ಕಾರಣಕ್ಕಾಗಿಯೇ ‘ಆದಿ ಪಡುಮಲೆ’ ಎಂಬ ಹೆಸರು ಇದೆ. ಪಡುಮಲೆ ತುಳುವಿನಲ್ಲಿ ‘ಪರ್ಮಲೆ’ ಎಂದೇ ಖ್ಯಾತಿ . ತುಳುನಾಡಿನ ಅವಳಿ ವೀರಪುರುಷರಾದ ಕೋಟಿ ಚೆನ್ನಯರಿಗೆ ದೈವಾಂಶಸಂಭೂತೆಯಾದ ತಾಯಿ ದೇಯಿ ಬೈದೆತಿ ಜನ್ಮ ನೀಡಿದ ಪುಣ್ಯಭೂಮಿಯಾದ ಬಲ್ಲಾಳರ ಅರಮನೆಯ ಪಕ್ಕದಲ್ಲಿಯೇ ಉಳ್ಳಾಕುಲು, ವ್ಯಾಘ್ರಚಾಮುಂಡಿ ದೈವಸ್ಥಾನವಿದೆ. ಈ ಉಳ್ಳಾಕುಲು ದೈವಸ್ಥಾನದ ನೇರ ಎದುರುಭಾಗದಲ್ಲಿರುವ 12 ಮುಡಿ ವಿಶಾಲತೆಯ ಗುಂಡ್ಯಮಾರು ಗದ್ದೆಯ ಇನ್ನೊಂದು ತುದಿಯಲ್ಲಿ ಬಲ್ಲಾಳರ ಕಾಲದ ಧರ್ಮಚಾವಡಿ ಇದೆ. ಉಳ್ಳಾಕುಲು ದೈವಸ್ಥಾನದಲ್ಲಿ ವಾರ್ಷಿಕ ನೇಮೋತ್ಸವ ನಡೆದು ಕೊಂಡು ಬರುತ್ತಿದ್ದರೆ, ಧರ್ಮ ಚಾವಡಿಯಲ್ಲಿ ದೈವಗಳಿಗೆ ಸೋಣ ನೇಮ (ಸೋಣ ತಿಂಗಳಲ್ಲಿ ದೈವಗಳಿಗೆ ನಡೆಯುವ ನೇಮ ನಡಾವಳಿ) ನಡೆದು ಕೊಂಡು ಬರುತ್ತಿತ್ತು. ಕಾಲಕ್ರಮೇಣ ಬಲ್ಲಾಳರ ಧರ್ಮ ಚಾವಡಿ ಪಾಳುಬಿದ್ದು, ಅಲ್ಲಿ ನಡೆಯುತ್ತಿದ್ದ ಸೋಣ ನೇಮ ಸ್ಥಗಿತಗೊಂಡಿತ್ತು. ಉಳ್ಳಾಕುಲು ದೈವಸ್ಥಾನದ ಪಕ್ಕದ ಬಂಡಿ ಕೊಟ್ಟಿಗೆಯಲ್ಲಿದ್ದ ಉಳ್ಳಾಕುಲು ಬಂಡಿ ಬೆಂಕಿ ಆಕಸ್ಮಿಕಕ್ಕೀಡಾಗಿ ಬೆಂಕಿಹಾಗುತಿಯಾದ ಬಳಿಕ ದೈವಸ್ಥಾನದಲ್ಲಿಯೂ ಕೆಲಕಾಲ ನೇಮೋತ್ಸವ ಸ್ಥಗಿತಗೊಂಡಿತ್ತು,
ಪ್ರಕೃತಿದತ್ತ ಹಸಿರುಮಯ ಪ್ರದೇಶದಲ್ಲಿ ಅನಾದಿ ಕಾಲದಿಂದಲೂ ಭಕ್ತ ಸಮೂಹ ಆರಾಧಿಸಿಕೊಂಡು ಬಂದಿದ್ದ ಈ ದೈವಗಳ ಆಲಯ ಇದೀಗ ಭವ್ಯತೆಯ ರೂಪ ತಾಳಿ ಕಂಗೊಳಿಸುತ್ತಿದೆ. ಪಡುಮಲೆಯ ಗತ ವೈಭವಕ್ಕೆ ಮತ್ತೆ ಮೆರಗು ನೀಡುವ ಕೆಲಸ ಇಲ್ಲಿ ನಡೆದಿದೆ. ಇಲ್ಲಿನ ಅಭಿವೃದ್ಧಿ ಕೆಲಸಗಳಿಗೆ ಪಡುಮಲೆ ಮಸೀದಿ ಕಮಿಟಿಯವರು ಹಾಗೂ ಇಲ್ಲಿನ ಮುಸ್ಲಿಂ ಸಮುದಾಯದ ಕೆಲವು ಮಂದಿ ಆರ್ಥಿಕ ನೆರವು ನೀಡಿದ್ದಾರೆ ಎನ್ನುವುದು ಇಲ್ಲಿನ ದೈವಗಳ ಕಾರಣಿಕ ಏನೆಂಬುವುದಕ್ಕೆ ಸಾಕ್ಷಿ. ದೈವಸ್ಥಾನದ ಪಕ್ಕದಲ್ಲೇ ‘ಪಳ್ಳಿ ದೇವರು ” ಖ್ಯಾತಿಯ ಪಡುಮಲೆ ಜುಮ್ಮಾ ಮಸೀದಿ ಇದ್ದು, ದೈವಸ್ಥಾನ ಮತ್ತು ಈ ಮಸೀದಿಗೆ ಅವಿನಾಭಾವ ಸಂಬಂಧವಿದೆ. ಇದರಿಂದಾಗಿಯೇ ಈ ಕ್ಷೇತ್ರ ಸಾಮರಸ್ಯದ ಸಂಕೇತವಾಗಿ ಉಳಿದುಕೊಂಡಿದೆ.
ನವೀಕರಣಗೊಂಡ ದೈವಸ್ಥಾನದಲ್ಲಿ ಪುನರ್ ಪ್ರತಿಷ್ಠಾಬ್ರಹ್ಮಕಲಶೋತ್ಸವ ಬ್ರಹ್ಮ ಕಲಶೋತ್ಸವ ಫೆ.23ರಿಂದ 25ರ ತನಕ ಬ್ರಹ್ಮಕಲಶೋತ್ಸವ ಸಮಿತಿಯ ಗೌರವಾಧ್ಯಕ್ಷರಾದ ಎಡನೀರು ಮಠದ ಕೇಶವಾನಂದ ಭಾರತೀ ಸ್ವಾಮೀಜಿ ಅವರ ಮಾರ್ಗದರ್ಶನದಲ್ಲಿ ಕೆಮ್ಮಿಂಜೆ ನಾಗೇಶ ತಂತ್ರಿ ಅವರ ನೇತೃತ್ವದಲ್ಲಿ ನಡೆಯಲಿದೆ.ಬ್ರಹ್ಮಕಲಶೋತ್ಸವ ಸಮಿತಿಯ ಗೌರವ ಮಾರ್ಗದರ್ಶಕರಾಗಿ ಶಾಸಕಿ ಶಕುಂತಳಾ ಶೆಟ್ಟಿ, ಅಧ್ಯಕ್ಷರಾಗಿ ಕಾವು ಹೇಮನಾಥ ಶೆಟ್ಟಿ ಅವರು ಬ್ರಹ್ಮಕಲಶೋತ್ಸವ ಕಾರ್ಯವನ್ನು ಮುನ್ನಡೆಸಲಿದ್ದಾರೆ. ಕ್ಷೇತ್ರದಲ್ಲಿ ಮಾರ್ಚ್ 8 ರಿಂದ 12ರ ತನಕ ದೈವಗಳ ನೇಮೋತ್ಸವ ನಡೆಯಲಿದ್ದು, ಇಲ್ಲಿನ ದೈವಗಳ ಕಲೆ ಕಾರಣಿಕ ಮತ್ತೊಮ್ಮೆ ವಿಜ್ರಂಭಿಸಲಿದೆ.
ವರದಿ : ಅನೀಶ್ ಕುಮಾರ್ ಮರೀಲ್ ಪುತ್ತೂರು

Related posts

Leave a Reply