Breaking News

ಮಲೇರಿಯ ಮುಕ್ತ ಮಂಗಳೂರು ಕನಸಿನ ಮಾತು?

ಮಂಗಳೂರು: ಮಲೇರಿಯ ಅತಿ ಹೆಚ್ಚು ಪ್ರಮಾಣದಲ್ಲಿ ಪ್ರಸಾರದಲ್ಲಿರುವ ರಾಜ್ಯದ ಪ್ರಮುಖ ನಗರ ಮಂಗಳೂರು. ಇಂತಹದ್ದೊಂದು ಕಳಂಕವನ್ನು ಕಳೆದ ಎರಡು ದಶಕಗಳಿಂದ ಮಂಗಳೂರಿಗರು ಬೆನ್ನಿಗಂಟಿಸಿಕೊಂಡು ಸಾಗುತ್ತಿದ್ದಾರೆ. ಬುದ್ದಿವಂತರು. ಸ್ವಚ್ಛತೆಗೆ ಆದ್ಯತೆ ನೀಡುವವರು. ಶಿಸ್ತಿನ ಜನ ಎಂದೆಲ್ಲ ಹೊರಗಿನವರಿಂದ ಹೊಗಳಿಸಿಕೊಳ್ಳುವ ಮಂಗಳೂರಿಗರಿಗೆ ಮಲೇರಿಯಾದ ಕಳಂಕದಿಂದ ಮಾತ್ರ ಹೊರಬರಲು ಸಾಧ್ಯವಾಗುತ್ತಲೇ ಇಲ್ಲ.
ಮಂಗಳವಾರ ಮಂಗಳೂರಿನ ಪುರಭವನದಲ್ಲಿ ಮಲೇರಿಯಾ ನಿವಾರಣೆಗಾಗಿ ರೂಪುರೇಷೆ ಮತ್ತು ನೀತಿಗಳ ಅನಾವರಣ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದಲ್ಲಿ ದ.ಕ. ಜಿಲ್ಲಾ ಉಸ್ತುವಾರಿ ಸಚಿವರಾಗಿ ಭಾಗವಹಿಸಿದ್ದ ರಮಾನಾಥ ರೈಯವರು ದ.ಕ. ಜಿಲ್ಲೆಯನ್ನು ಮಲೇರಿಯಾ ಮುಕ್ತ ಜಿಲ್ಲೆಯಾಗಿ ಪಣ ತೊಡಬೇಕು ಮತ್ತು ಇದಕ್ಕೆ ನಾಗರಿಕರು ಮತ್ತು ಸಂಘಟನೆಗಳು ಕೈ ಜೋಡಿಸಬೇಕು ಎಂದು ಸಲಹೆಯನ್ನೂ ನೀಡಿದರು. ವಾಸ್ತವ ಏನೆಂದರೆ ದ.ಕ. ಜಿಲ್ಲೆಯಲ್ಲಿ ಒಲಸೆ ಕಾರ್ಮಿಕರು ಇರುವವರೆಗೆ ಮಲೇರಿಯ ನಿರ್ಮೂಲನೆ ಸಾಧ್ಯವೇ ಇಲ್ಲ. ಈ ವಿಷಯದಲ್ಲಿ ಅಧಿಕಾರಸ್ಥರು ಇಚ್ಛಾ ಶಕ್ತಿ ಪ್ರದರ್ಶಿಸದೇ ಇದ್ದರೆ ನಾಗರಿಕರು, ಸಂಘಟನೆಯವರು ಏನು ಮಾಡಿದರೂ ಪ್ರಯೋಜನವಾಗುವುದಿಲ್ಲ.
ವಲಸೆ ಕಾರ್ಮಿಕರಿಂದ ಮಲೇರಿಯ ಹರಡುತ್ತದೆ ಎಂಬುದು ಎಷ್ಟು ಸತ್ಯವೋ ಅದಕ್ಕಿಂತ ಕಠು ಸತ್ಯ ಇದರ ಹೊಣೆಗಾರರು ನಾವು ಎಂಬುದು. ಆಡಳಿತಗಾರರು ನಿರ್ಮಾಣ ಗುತ್ತಿಗೆದಾರರೊಂದಿಗೆ ಮೃಧು ದೋರಣೆ ಹೊಂದಿರುವವರೆಗೆ ಮಲೇರಿಯಾ ನಿರ್ನಾಮ ಸಾಧ್ಯವೇ ಇಲ್ಲ. ಮಂಗಳೂರು ನಗರ ಮತ್ತು ದ.ಕ. ಜಿಲ್ಲೆಯಲ್ಲಿ ಸೊಳ್ಳೆಗಳ ದೊಡ್ಡ ಪ್ರಮಾಣದ ಉತ್ಪಾದಕರೇ ನಿರ್ಮಾಣ ಕಾಮಗಾರಿ ನಡೆಸುವವರಾಗಿದ್ದಾರೆ. ನೀರು ನಿಲ್ಲದಂತೆ ನಿಂತ ನೀರಿನಲ್ಲಿ ಸೊಳ್ಳೆ ಬೆಳೆಯದಂತೆ ಯಾವ ಮುಂಜಾಗೃತೆಯನ್ನೂ ಕಟ್ಟಡ ನಿರ್ಮಾಪಕರು ವಹಿಸುವುದಿಲ್ಲ. ಕಾರ್ಮಿಕರ ವಾಸಕ್ಕೆ ಶೆಡ್ ನಿರ್ಮಿಸಿರುತ್ತಾರಾದರೂ ಶೆಡ್‌ಗಳ ಸುತ್ತಲಿನ ನೈರ್ಮಲ್ಯದ ವಾತಾವರಣದತ್ತ ಗಮನ ಹರಿಸುವುದೇ ಇಲ್ಲ. ಕಸದ ತೊಟ್ಟಿಯಲ್ಲೇ ಕಾರ್ಮಿಕರಿದ್ದಾರೇನೋ ಎಂಬಂತಹ ವಾತಾವರಣ ಇರುತ್ತದೆ. ಸೊಳ್ಳೆಗಳು ಕಾರ್ಮಿಕರಿಗೆ ಕಚ್ಚದಂತೆ ಮುಂಜಾಗೃತಾ ಕ್ರಮಗಳ್ಯಾವವೂ ಇರುವುದೇ ಇಲ್ಲ. ಇದು ಕಟ್ಟಡ ನಿರ್ಮಾಣ ಮಾಡುವವರ ಜವಾಬ್ದಾರಿಯಾದರೂ ಇಂತಹ ಎಚ್ಚರಿಕೆಯ ಕ್ರಮಗಳನ್ನು ಕೈಗೊಳ್ಳದವರ ವಿರುದ್ಧ ಜಿಲ್ಲಾಡಳಿತವಾಗಲಿ, ಮಂಗಳೂರು ಮಹಾನಗರ ಪಾಲಿಕೆಯ ಆಡಳಿತಗಾರರಾಗಲಿ ಕಟ್ಟಿನಿಟ್ಟಿನ ಕ್ರಮ ಕೈಗೊಳ್ಳುವುದೇ ಇಲ್ಲ. ರಾಜಕಾರಣಿಗಳು ಮತ್ತು ಆಡಳಿತಗಾರರು ಈ ನಿಟ್ಟಿನಲ್ಲಿ ತಮ್ಮ ಇಚ್ಚಾ ಶಕ್ತಿಯನ್ನು ಪ್ರದರ್ಶಿಸದೆ ಮಲೇರಿಯ ಮುಕ್ತ ದ.ಕ. ಜಿಲ್ಲೆ ಬೇಕು ಎಂದು ನಿರೀಕ್ಷಿಸುವುದಾದರೂ ಹೇಗೆ|?
ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಮಲೇರಿಯಾದ ಪ್ರಕರಣಗಳು ಕಡಿಮೆ… ಹೀಗೆಂದು ರಮಾನಾಥ ರೈ ಹೇಳಿದ್ದಾರೆ ಅವರ ಲೆಕ್ಕಾಚಾರದ ಪ್ರಕಾರ ಕಳೆದ ವರ್ಷ ಜಿಲ್ಲೆಯಲ್ಲಿ ೧೭೦೦ ಮಲೇರಿಯಾ ಪ್ರಕರಣಗಳು ಪತ್ತೆಯಾಗಿದ್ದರೆ ಆ ಬಾರಿ ಕೇವಲ ೭೦೦ ಮಾತ್ರ. ಕಳೆದಿರುವುದು ಅರ್ಧ ವರ್ಷ ಮಾತ್ರ ೧೭೦೦ರ ಟಾರ್ಗೆಟ್ ದಾಟಲು ಇನ್ನೂ ೭ ತಿಂಗಳ ಕಾಲಾವಕಾಶ ಇದೆ. ಟಾರ್ಗೆಟ್ ರೀಚ್ ಆಗಿರದಿದ್ದರೆ ಇದಕ್ಕೆ ಆಡಳಿತಗಾರರು ಕೈಗೊಂಡ ಕ್ರಮಕ್ಕಿಂತ ಹೆಚ್ಚಾಗಿ ನೋಟು ಅಪನಗದಿಕರಣದ ಪ್ರಭಾವದ ಕೊಡುಗೆ ದೊಡ್ಡದು ಎಂದು ಹೇಳಬಹುದು. ೫೦೦ ಮತ್ತು ಸಾವಿರ ರೂ. ನೋಟುಗಳ ಅಪನಗದಿ ಕರಣದ ಬಳಿಕ ರಿಯಲ್ ಎಸ್ಟೇಟ್ ವ್ಯವಹಾರ ಪಾತಾಳಕ್ಕೆ ಕುಸಿದಿದೆ. ಇದರ ಪರಿಣಾಮ ಎಂಬಂತೆ ಹಿಂದಿನಂತೆ ಬಹುಮಹಡಿ ಕಟ್ಟಡಗಳ ನಿರ್ಮಾಣ ಕೊಡ ನಡೆಯುತ್ತಿಲ್ಲ ಎಂಬುದನ್ನು ಗಮನಿಸಿದರೆ ಮಲೇರಿಯಾ ಪ್ರಮಾಣ ಈ ವರ್ಷ ಏಕೆ ಕಡಿಮೆ ಆಗಿದೆ ಎಂಬುದನ್ನು ಸುಲಭದಲ್ಲಿ ಹೇಳಿ ಬಿಡಬಹುದು.
ವಾಸ್ತವ ಇಷ್ಟೇ ಕಟ್ಟಡ ನಿರ್ಮಾಣ ಪ್ರದೇಶಗಳೇ ಸೊಳ್ಳೆ ಉತ್ಪತ್ತಿಯ ತಾಣಗಳು, ಇಲ್ಲಿಂದಲೇ ಮಲೇರಿಯ ಹರಡುತ್ತಿದೆ.ಇದನ್ನು ತಡೆಯಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳದೆ ಯಾವ ಭಾಷಣ ಮಾಡಿದರೇನು ಪ್ರಯೋಜನ.

Related posts

Leave a Reply