Header Ads
Breaking News

ಮಲ್ಪೆ ಬೋಟ್ ಸಮೇತ ಮೀನುಗಾರರು ನಾಪತ್ತೆ ವಿಚಾರ: ನೊಂದು ವಿಷ ಸೇವಿಸಿದ್ದ ಮೀನುಗಾರನ ಸಹೋದರ ಸಾವು

ಉಡುಪಿಯ ಮಲ್ಪೆಯ ಏಳು ಮೀನುಗಾರರು ಬೋಟ್ ಸಮೇತ ನಾಪತ್ತೆಯಾಗಿ ನಾಲ್ಕು ತಿಂಗಳುಗಳೇ ಕಳೆದಿವೆ. ಕಣ್ಮರೆಯಾದ ಸುವರ್ಣ ತ್ರಿಭುಜ ಬೋಟ್‌ನ ಅವಶೇಷಗಳು ಎರಡು ವಾರದ ಹಿಂದೆ ಅರಬ್ಬೀ ಸಮುದ್ರದಲ್ಲಿಪತ್ತೆಯಾಗಿದ್ದವು. ಆದರೆ ಈತನಕ ನಾಪತ್ತೆಯಾದ ಮೀನುಗಾರರ ಸುಳಿವೇ ಸಿಕ್ಕಿಲ್ಲ. ರಾಜ್ಯ ಸರಕಾರ ಮೀನುಗಾರರ ಕುಟುಂಬಗಳಿಗೆ ತಲಾ ಹತ್ತು ಲಕ್ಷ ರೂಗಳನ್ನು ಘೋಷಿಸಿದ ಬೆನ್ನಲ್ಲೇ ನಾಪತ್ತೆಯಾದ ಮೀನುಗಾರನೋರ್ವನ ಸಹೋದರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ನಿವಾಸಿ ಚಂದ್ರಶೇಖರ ಮೊಗೇರ ಆತ್ಮಹತ್ಯೆ ಮಾಡಿಕೊಂಡವರು.ಇವರು ನಾಪತ್ತೆಯಾದ ಮೀನುಗಾರ ರಮೇಶ್ ಎಂಬವರ ಸಹೋದರ. ಭಟ್ಜಳದ ಬಂದರು ರಸ್ತೆ ನಿವಾಸಿಯಾಗಿರುವ ಚಂದ್ರಶೇಖರ್ ವಾರದ ಹಿಂದೆ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು.ಬಳಿಕ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.ಸಹೋದರ ಕಣ್ಮರೆಯಾದ ನಂತರ ಖಿನ್ನತೆಗೆ ಒಳಗಾಗಿದ್ದ ಚಂದ್ರಶೇಖರ್ ಮನೆಯವರಿಗೆ ತಿಳಿಯದಂತೆ ಇಲಿಪಾಷಾಣ ಸೇವಿಸಿದ್ದರು.ಬಳಿಕ ಅವರನ್ನು ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇವತ್ತು ಚಿಕಿತ್ಸೆ ಫಲಕಾರಿಯಾಗದೆ ಚಂದ್ರಶೇಖರ್ ಸಾವನ್ನಪ್ಪಿದ್ದಾರೆ. ಇದರೊಂದಿಗೆ ಒಂದೇ ಮನೆಯಲ್ಲಿ ಎರಡು ದುರಂತ ಸಾವು ಸಂಭವಿಸಿದಂತಾಗಿದೆ.ಅಲ್ಲದೆ ,ನೊಂದಿದ್ದ ರಮೇಶ್ ಕುಂಟುಂಬಕ್ಕೆ ಮತ್ತೊಂದು ಆಘಾತ ಎದುರಾಗಿದೆ. ಡಿಸೆಂಬರ್ , 15,2018 ರಂದು ಉಡುಪಿಯ ಸುವರ್ಣ ತ್ರಿಭುಜ ಬೋಟಿನಲ್ಲಿ ಏಳು ಜನ ಮೀನುಗಾರರು ಮೀನುಗಾರಿಕೆಗೆ ತೆರಳಿದ್ದರು.ಈ ಪೈಕಿ ಇಬ್ಬರು ಮೀನುಗಾರರು ಉಡುಪಿಯವರಾದರೆ ,ಉಳಿದ ಐವರು ಉತ್ತರ ಕನ್ನಡದವರಾಗಿದ್ದಾರೆ.ಇದೀಗ ಮತ್ತೊಂದು ಸಾವಿನ ಸುದ್ದಿ ಬಂದ ಬಳಿಕ ಉತ್ತರಕನ್ನಡದ ಚಂದ್ರಶೇಖರ್ ಮನೆಯಲ್ಲಿ ಸೂತಕದ ಛಾಯೆ ಆವರಿಸಿದೆ.

Related posts

Leave a Reply

Your email address will not be published. Required fields are marked *