Breaking News

ಮಳೆ ಬಂತು ಭತ್ತದ ಕಾಯಕ ಶುರುವಾಯ್ತು, ಪುತ್ತೂರಿನಲ್ಲಿ ಕಾಲದ ಚಲನೆಗೆ ಬದಲಾದ ಕೃಷಿಕ


ಮಳೆಗಾಲ ಆರಂಭವಾಗಿದೆ. ರೈತನ ಕೃಷಿ ಚಟುವಟಿಕೆಗೆ ಚಾಲನೆ ಸಿಕ್ಕಿದೆ. ಮನೆಯಂಗಳದಿಂದ ಹಿಡಿದು ಗದ್ದೆಯತನಕ ರೈತ ಭತ್ತ ಬೆಳೆಯಲು ಪ್ರಾರಂಭ ಮಾಡುವ ಉತ್ಸಾಹದಲ್ಲಿದ್ದಾನೆ. ಭತ್ತದ ಕೃಷಿಯಲ್ಲಿ ಹಿಂದಿನ ವೈಭವ ಇಲ್ಲದಿದ್ದರೂ ತಾನು ಉಳಿಸಿಕೊಂಡಿರುವ ಅಲ್ಪಸ್ವಲ್ಪ ಗದ್ದೆಯನ್ನು ಹದ ಮಾಡುವ ಕಾಯಕ ಜಿಲ್ಲೆಯಲ್ಲಿ ಈಗಾಗಲೇ ನಡೆಯುತ್ತಿದೆ. ಉಳುಮೆ ಮಾಡಲು ಎತ್ತುಗಳು ಈಗ ಇಲ್ಲ. ಆದರೆ ಯಂತ್ರಗಳು ಪ್ರಸ್ತುತ ರೈತನ ಎತ್ತುಗಳಾಗಿ ಬದಲಾಗಿವೆ. ಕಾಲದ ಚಲನೆಗೆ ಕೃಷಿಕನೂ ತನ್ನನ್ನು ಬದಲಾಯಿಸಿಕೊಳ್ಳುತ್ತಾ ನಡೆದಿದ್ದಾನೆ.
ಜಿಲ್ಲೆಯಲ್ಲಿ ವಾಣಿಜ್ಯ ಬೆಳೆಯತ್ತ ಬಹುಪಾಲು ರೈತರು ಆಕರ್ಷಿತರಾಗಿದ್ದರೂ ಇನ್ನೂ ಕೆಲವು ಮಂದಿ ತಮ್ಮ ಸಾಂಪ್ರದಾಯಿಕ ಬೆಳೆಯಾದ ಭತ್ತದ ಕೃಷಿಯನ್ನು ನಡೆಸುತ್ತಿದ್ದಾರೆ. ಮಳೆಯನ್ನೇ ನಂಬಿ ಭತ್ತ ಬೆಳೆಯುವ ಇವರು ತಮ್ಮ ಕುಟುಂಬಕ್ಕೆ ಬೇಕಾದ ಅಕ್ಕಿಯನ್ನು ತಾವೇ ಮಾಡಿಕೊಳ್ಳುತ್ತಿದ್ದಾರೆ. ಅದಕ್ಕಾಗಿ ಎಷ್ಟೇ ಕಷ್ಟವಾದರೂ ಇದು ತಮ್ಮ ವೃತ್ತಿ ಎಂಬ ನೆಲೆಯಲ್ಲಿ ಭತ್ತದ ಬೆಳೆಯ ಕೃಷಿಯನ್ನು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ. ಆ ಮೂಲಕ ರೈತ ವರ್ಗ ಸ್ವಾವಲಂಬಿ ಬದುಕಿಗೆ ಅರ್ಥ ಹುಡುಕುವ ಪ್ರಯತ್ನ ನಡೆಸುತ್ತಲೇ ಇದೆ. ಆದರೆ ವರ್ಷದಿಂದ ವರ್ಷಕ್ಕೆ ಭತ್ತ ಬೇಸಾಯ ಕಷ್ಟವಾಗುತ್ತಿದೆ. ಇದಕ್ಕೆ ಅನಿಯಮಿತವಾಗಿ ಸುರಿಯುವ ಮಳೆ ಮೊದಲ ಕಾರಣವಾದರೆ, ಭತ್ತದ ಕೃಷಿಗೆ ಕೂಲಿಯಾಳುಗಳ ಕೊರತೆ ಇನ್ನೊಂದು ಪ್ರಮುಖ ಕಾರಣ. ಯಂತ್ರಗಳನ್ನೇ ನಂಬಿ ರೈತರು ಭತ್ತದ ಬೆಳೆಯನ್ನು ಮುಂದುವರಿಸಲು ಹೋರಾಟ ನಡೆಸುತ್ತಲೇ ಇದ್ದಾರೆ. ಉಳುಮೆ, ಭತ್ತ ಕಟಾವು, ನೇಜಿ ನಾಟಿ, ಭತ್ತ ಬೇರ್ಪಡಿಸುವಿಕೆ ಹೀಗೆ ಎಲ್ಲಾ ಹಂತದಲ್ಲೂ ಈಗ ಯಂತ್ರಗಳದ್ದೇ ಕಾರುಬಾರು.
ಸಾಮಾನ್ಯವಾಗಿ ಎಪ್ರಿಲ್ ತಿಂಗಳ ಅಂತ್ಯಕ್ಕೆ ಭತ್ತದ ಗದ್ದೆಗಳನ್ನು ಹದ ಮಾಡಲು ಬೇಕಾದಷ್ಟು ಮಳೆಯಾಗುತ್ತಿತ್ತು. ಮೇ ತಿಂಗಳ ಮಳೆ ಇಳೆಗೆ ಬೀಳುತ್ತಿದ್ದಂತೆ ಬಿತ್ತನೆ ಕಾರ್ಯ ಆರಂಭ. ಮುಂದಿನ ೨೦ರಿಂದ ೨೫ ದಿನಗಳಲ್ಲಿ ಮೊಳಕೆ ಬರುವ ಗಿಡವನ್ನು ತೆಗೆದು ನೇಜಿ ನೆಡಲಾಗುತ್ತಿತ್ತು. ಸಾಧಾರಣ ಸೆಪ್ಟಂಬರ ಅಕ್ಟೋಬರ್ ಹೊತ್ತಿಗೆ ಮೊದಲ ಹಂತದ ಕೊಯ್ಲು ಮುಗಿಯುತ್ತದೆ. ಅನಂತರ ಮುಂದಿನ ಬೆಳೆಗೆ ಮುನ್ನುಡಿ. ಇದೀಗ ಬದಲಾವಣೆಯ ಗಾಳಿಗೆ ರೈತನೂ ಸ್ಪಂಧಿಸುತ್ತಿದ್ದಾನೆ. ನೇಜಿ ನಾಟಿ ಮಾಡಲು ಯಂತ್ರದ ಬಳಕೆಗೆ ಮನ ಮಾಡಿದ್ದಾನೆ. ಇಲ್ಲವೇ ಸಾಲು ನೇಜಿ ನಾಟಿ ಮಾಡಿ ಹೆಚ್ಚಿನ ಶ್ರಮವನ್ನು ತಪ್ಪಿಸುತ್ತಿದ್ದಾನೆ.

Related posts

Leave a Reply