Header Ads
Header Ads
Breaking News

ಮಾಜಿ ಸಚಿವ ಜಾರ್ಜ್ ಫರ್ನಾಂಡಿಸ್ ಇನ್ನಿಲ್ಲ

ಮಾಜಿ ಸಚಿವ ಜಾರ್ಜ್ ಫರ್ನಾಂಡಿಸ್ ಮಂಗಳವಾರ ಬೆಳಗ್ಗೆ ದೆಹಲಿಯಲ್ಲಿ ನಿಧನರಾಗಿದ್ದಾರೆ. ದೀರ್ಘ ಕಾಲದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಜಾರ್ಜ್ ಫರ್ನಾಂಡಿಸ್ ಅವರಿಗೆ ೮೮ ವರ್ಷ ವಯಸ್ಸಾಗಿತ್ತು.

ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಎನ್‌ಡಿಎ ಸರ್ಕಾರದಲ್ಲಿ 1998ರಿಂದ 2004ರವರೆಗೆ ರಕ್ಷಣಾ ಸಚಿವರಾಗಿದ್ದರು. 2010ರವರೆಗೆ ಸಕ್ರಿಯ ರಾಜಕಾರಣದಲ್ಲಿದ್ದ ಅವರು 2009-10ರ ಅವಧಿಯಲ್ಲಿ ರಾಜ್ಯಸಭಾ ಸದಸ್ಯರಾಗಿದ್ದರು. ನಂತರ ಅನಾರೋಗ್ಯದ ಹಿನ್ನಲೆಯಲ್ಲಿ ರಾಜಕೀಯ ಜೀವನದಿಂದ ಹಿಂದೆ ಸರಿದಿದ್ದರು. ವಿ.ವಿ.ಸಿಂಗ್ ಸರಕಾರದಲ್ಲಿ ರೈಲ್ವೆ ಸಚಿವರಾಗಿಯೂ ಸೇವೆ ಸಲ್ಲಿಸಿದ್ದರು. ಅಲ್ಲದೆ ಸಂಪರ್ಕ ಮತ್ತು ಕೈಗಾರಿಕಾ ಸಚಿವ ಹುದ್ದೆಗಳನ್ನು ಕೂಡ ಅಲಂಕರಿಸಿದ್ದರು.
ಮೂಲತಃ ಮಂಗಳೂರಿನವರಾದ ಜಾರ್ಜ್ ಫರ್ನಾಂಡಿಸ್ 1930 ಜೂನ್ 3 ರಂದು ಜನಿಸಿದ್ದರು. ಮಂಗಳೂರಿನ ಸಂತ ಅಲೋಸಿಯಸ್ ಕಾಲೇಜಿನಲ್ಲಿ ತಮ್ಮ ವಿದ್ಯಾಭ್ಯಾಸ ಮುಗಿಸಿದ್ದರು. ಸಮತಾ ಪಕ್ಷದ ಸಂಸ್ಥಾಪಕರು. ತುರ್ತು ಪರಿಸ್ಥಿತಿ ವಿರೋಧಿ ಮತ್ತು ನಾಗರಿಕ ಹಕ್ಕುಗಳ ಹೋರಾಟ, ಸಮಾಜ ಸೇವೆಗಳಿಂದ ರಾಷ್ಟ್ರ ರಾಜಕಾರಣದಲ್ಲಿ ಗುರುತಿಸಿಕೊಂಡಿದ್ದ ಜಾರ್ಜ್ ಫರ್ನಾಂಡಿಸ್ ಮೊರಾರ್ಜಿ ದೇಸಾಯಿ ನೇತೃತ್ವದ ಸರ್ಕಾರ  ಅಧಿಕಾರದಲ್ಲಿದ್ದಾಗ ಸಚಿವರಾಗಿ ಸೇವೆ ಸಲ್ಲಿಸಿದ್ದರು.
2004 ರಲ್ಲಿ ಕಾರ್ಗಿಲ್ ಕಾಫಿನ್ ಗೇಟ್ ಹಗರಣ ವಿಚಾರದಲ್ಲಿ ಆರೋಪ ಕೇಳಿಬಂದ ಹಿನ್ನಲೆಯಲ್ಲಿ ರಕ್ಷಣಾ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ನಂತರ ಆಯೋಗದ ವಿಚಾರಣೆಯಿಂದ ಅವರು ಆರೋಪ ಮುಕ್ತರಾಗಿ ಹೊರಬಂದರು. ಜಾರ್ಜ್ ಫರ್ನಾಂಡಿಸ್ ನಿಧನದಿಂದ ರಾಷ್ಟ್ರ ರಾಜಕಾರಣದಲ್ಲಿ ಹಿರಿಯ ಕೊಂಡಿಯೊಂದು ಕಳಚಿಕೊಂಡಂತಾಗಿದೆ.

Related posts

Leave a Reply