Breaking News

ಮಾಡಿನಿಂದಲ್ಲದೆ ದಾರಿಯಿಂದಲೂ ನೀರಿಂಗಿಸುವ ಕ್ಲೇರೆನ್ಸ್, ಎಕ್ಕಾರಿನಲ್ಲಿ ನೀರಿನ ಕೊರತೆ ಕಾಡದಂತೆ ಮಾಡಿದ ಕೃಷಿಕ

ಎಕ್ಕಾರು ಗ್ರಾಮ ಪಂಚಾಯತ್ ವ್ಯಾಪ್ತಿಯ ತೆಂಕ ಎಕ್ಕಾರಿನ ಕ್ಲೇರೆನ್ಸ್ ಡಿ’ ಕುನ್ಹಾ ಬರೀ ತಮ್ಮ ಆರ್ಸಿಸಿ ಮನೆ ಛಾವಣಿಯ ನೀರನ್ನಷ್ಟೇ ಇಂಗಿಸು ವುದಿಲ್ಲ. ರಸ್ತೆಯಲ್ಲಿ ಹರಿ ಯುವ ನೀರನ್ನೂ ತಮ್ಮ ಮನೆಯ ಬಾವಿ ಸಮೀಪ ಹೊಂಡ ತೆಗೆದು ಇಂಗಿಸುತ್ತಾರೆ.
ಮನೆಯ ಛಾವಣಿಯ ನೀರನ್ನೇ ರಸ್ತೆಯಲ್ಲಿ ಅಥವಾ ಚರಂಡಿಗೆ ಬಿಟ್ಟು ತಣ್ಣಗೆ ಕುಳಿತು ಟಿವಿ ನೋಡುತ್ತಾ ಕಾಲ ಕಳೆಯುವ ಪರಿಸ್ಥಿತಿ ಇಂದಿನದು. ಅಂಥದ್ದರಲ್ಲಿ ಕೃಷಿಕ ಕ್ಲೇರೆನ್ಸ್ ಡಿ’ಕುನ್ಹಾ ಅವರು ಆರ್ಸಿಸಿ ಛಾವಣಿಯಲ್ಲಿ ಸಂಗ್ರಹವಾಗುವ ಮಳೆನೀರನ್ನು ಪೈಪಿನ ಮೂಲಕ ಒಂದೆಡೆ ಬೀಳುವಂತೆ ಮಾಡುತ್ತಾರೆ. ಅದನ್ನು ಇಂಗು ಗುಂಡಿಗೆ ಹರಿಸಿ ಇಂಗಿಸುತ್ತಾರೆ. ಜತೆಗೆ ಮನೆ ಎದುರಿನ ರಸ್ತೆಯಲ್ಲಿ ಬಿದ್ದು ಸಾಗುವ ನೀರನ್ನೂ ಆ ಹೊಂಡಕ್ಕೆ ಹರಿಸಿ ಇಂಗಿಸುತ್ತಾರೆ. ಅದಕ್ಕಾಗಿ ಒಂದು ಸಣ್ಣ ತೋಡನ್ನು ನಿರ್ಮಿಸಿದ್ದು, ಅದರ ಮೂಲಕ ನೀರು ಹೊಂಡಕ್ಕೆ ಬೀಳುತ್ತದೆ. ೧೯೯೯ರಲ್ಲಿ ಅವರು ೨೫ ಅಡಿಯಷ್ಟು ಆಳದ ಬಾವಿಯನ್ನು ತೋಡಿದ್ದರು. ೨೦೦೨ರಲ್ಲಿ ಮನೆ ಕಟ್ಟಿದರು. ನೀರು ಸಾಕಾಗದು ಎನಿಸತೊಡಗಿತು. ಮತ್ತೆ ೧೦ ಅಡಿ ಆಳ ತೋಡಿದರು. ಆಗಲೂ ನೆಮ್ಮದಿಯಾಗಲಿಲ್ಲ. ಬಳಿಕ ಇಂಗುಗುಂಡಿಯ ಮೊರೆ ಹೋದರು.
ಬಾವಿಯ ಸಮೀಪವೇ ೧೦ ಅಡಿ ಅಳ ಹಾಗೂ ೮ ಅಡಿ ಅಗಲ, ೫ಅಡಿ ಉದ್ದದ ಹೊಂಡ ತೋಡಿದರು. ಅದಕ್ಕೆ ಮೊದಲಿಗೆ ಜಲ್ಲಿ ಹಾಗೂ ಮರಳನ್ನು ಹಾಕಿ ತುಂಬಿಸಿದರು. ಮನೆ ಆರ್ಸಿಸಿ ಆದ ಕಾರಣ ಮಳೆ ನೀರು ಒಂದು ಪೈಪು ಮೂಲಕ ಒಂದೆಡೆ ಬಂದು ಈ ಹೊಂಡಕ್ಕೆ ಬೀಳುವಂತೆ ಮಾಡಿದರು. ಅದು ಸಾಲದೆಂದು ಮಳೆಗಾಲದಲ್ಲಿ ಮನೆಯ ಎದುರಿನಲ್ಲಿರುವ ರಸ್ತೆಯಲ್ಲಿ ಹರಿಯುವ ನೀರಿಗೂ ತೋಡು ಮಾಡಿ ಹರಿಸಿದರು. ಇದೆಲ್ಲದರ ಪರಿಣಾಮ ಇವರ ಬಾವಿಯಲ್ಲಷ್ಟೇ ನೀರು ಬಂದಿಲ್ಲ; ಸುತ್ತಲಿನ ಬಾವಿಗಳಲ್ಲೂ ನೀರಿನ ಮಟ್ಟ ಹೆಚ್ಚಾಗಿದೆ. ಈ ಹೊಂಡ ಮಾಡಿದ ಮೇಲೆ ನನಗೆ ನೀರಿನ ಸಮಸ್ಯೆ ಬಂದಿಲ್ಲ. ರಸ್ತೆ ಹಾಗೂ ಮನೆ ಛಾವಣಿಯ ನೀರು ಪೋಲಾಗದಂತೆ ನೋಡುತ್ತಿದ್ದೇನೆ. ಈ ಬೇಸಗೆಯಲ್ಲೂ ನನಗೆ ನೀರು ಕಡಿಮೆಯಾಗಿಲ್ಲ. ಮಲ್ಲಿಗೆ, ಕರಿಮೆಣಸು, ತೆಂಗು, ಕಂಗು, ವೀಳ್ಯದೆಲೆ ಕೃಷಿಯನ್ನು ಮಾಡುತ್ತಿದ್ದೇನೆ. ವರ್ಷ ವರ್ಷ ಹೊಂಡಕ್ಕೆ ಬಿದ್ದ ಮಣ್ಣು ಮಾತ್ರ ತೆಗೆಯುತ್ತೇನೆ. ಇದರಿಂದ ನೀರು ಇಂಗುತ್ತದೆ. ಸುಲಭ ವಿಧಾನ, ಶುದ್ಧ ನೀರು ಸಿಗುತ್ತದೆ. ಎಲ್ಲರೂ ಮಾಡಿದರೆ ಎಲ್ಲರಿಗೂ ಲಾಭವಿದೆ ಎನ್ನುತ್ತಾರೆ ಕ್ಲೇರೆನ್ಸ್.

Related posts

Leave a Reply