Header Ads
Breaking News

ಮಾಡ-ಉದ್ಯಾವರ ಅರಸು ದೈವಗಳ ಜಮಾಅತ್ ಭೇಟಿ : ಹಿಂದೂ-ಮುಸ್ಲಿಂ ಭಾವೈಕ್ಯದ ಸಂಕೇತ ಸಾರುವ ಕಾರ್ಯಕ್ರಮ

ಮಂಜೇಶ್ವರ: ಹಿಂದೂ ಮುಸ್ಲಿಂ ಭಾವೈಕ್ಯದ ಸಂಕೇತದೊಂದಿಗೆ ಕಳೆದ 800 ವರ್ಷಗಳಿಂದ ವಾಡಿಕೆಯಲ್ಲಿರುವ ಉದ್ಯಾವರ ಶ್ರೀ ಅರಸು ದೈವಗಳು ವರ್ಷಂಪ್ರತಿಯ ಪದ್ದತಿಯಂತೆ ಶುಕ್ರವಾರ ಮಧ್ಯಾಹ್ನ ಅರಸು ದೈವ ಪಾತ್ರಿಗಳು ಮತ್ತು ದೇವಸ್ಥಾನದ ಪ್ರತಿನಿಧಿಗಳು ಹಾಗೂ ಸಹಸ್ರಾರು ಹಿಂದೂ ಬಾಂಧವರು ಜತೆಯಾಗಿ ಉದ್ಯಾವರ ಸಾವಿರ ಜಮಾಅತ್‌ಗೆ ಭೇಟಿ ನೀಡಿದರು.

ಉದ್ಯಾವರ ಅರಸು ಮಂಜಿಷ್ಣಾರ್ ಕ್ಷೇತ್ರದ ವಾರ್ಷಿಕ ಜಾತ್ರೋತ್ಸವದ ಅಂಗವಾಗಿ ಪ್ರಾಚೀನ ಕಾಲದಿಂದಲೇ ಆಚರಿಸಿಕೊಂಡು ಬರುತ್ತಿರುವ ಅರಸು ದೈವಗಳ ಜಮಾಅತ್ ಭೇಟಿಯು ಇಂದಿಗೂ ಹಿಂದೂ, ಮುಸ್ಲಿಂ ಭಾವೈಕ್ಯದ ಪ್ರತೀಕವಾಗಿದೆ. ಮೇಷ ಸಂಕ್ರಮಣ ಕಳೆದು ಬರುವ ಮೊದಲ ಶುಕ್ರವಾರ ಈ ಅನುಷ್ಠಾನ ವಾಡಿಕೆಯಾಗಿದೆ. ಮಧ್ಯಾಹ್ನ ಉದ್ಯಾವರ ಕ್ಷೇತ್ರದ ಭಂಡಾರ ಮನೆಯಿಂದ ಹೊರಟ ದೈವಗಳು 1.30ರ ಹೊತ್ತಿಗೆ ಜಮಾಅತ್‌ಗೆ ತಲುಪಿದವು. ಈ ವೇಳೆ ಜುಮಾ ನಮಾಜ್ ಮುಗಿಸಿ ಸಜ್ಜಾಗಿ ನಿಂತಿದ್ದ ಮಸೀದಿಯ ಆಡಳಿತ ಸಮಿತಿ ಪ್ರತಿನಿಧಿಗಳು ಹಾಗೂ ಸಹಸ್ರಾರು ಮುಸ್ಲಿಂ ಬಾಂಧವರು ಪರಂಪರಾಗತ ರೀತಿಯಲ್ಲಿ ಉದ್ಯಾವರ ಅರಸು ದೈವ ಪಾತ್ರಿಗಳಿಗೆ ಅದ್ದೂರಿ ಸ್ವಾಗತ ನೀಡಿದರು. ದೈವ ಪಾತ್ರಿಗಳು ಜಮಾಅತಿನೊಳಗೆ ಪ್ರವೇಶಿಸಿ ಮಸೀದಿ ಮುಂಭಾಗದಲ್ಲಿ ಜಮಾಅತಿನ ಸರ್ವ ಮುಸ್ಲಿಂ ಬಾಂಧವರನ್ನು ಕೂಡ ಮಾಡ ಅರಸು ದೈವಗಳ ಜಾತ್ರೋತ್ಸವಕ್ಕೆ ಆಹ್ವಾನವಿತ್ತರು. ಮೇ 9ರಿಂದ 15ರ ತನಕ ಮಾಡ ಕ್ಷೇತ್ರದ ಉತ್ಸವಕ್ಕೆ ಸಾವಿರ ಜಮಾಅತ್ ವ್ಯಾಪ್ತಿಯಲ್ಲಿರುವ ಎಲ್ಲ ಮುಸ್ಲಿಂ ಬಾಂಧವರು ಕೂಡ ಪಾಲ್ಗೊಳ್ಳುವ ಮೂಲಕ ಹಿಂದೂ, ಮುಸ್ಲಿಂ ಭಾವೈಕ್ಯತೆಯ ಕೊಂಡಿಯಾಗಿ ಮುಂದುವರಿದಿದೆ.

ಈ ಕ್ಷೇತ್ರದಲ್ಲಿ ಜಾತ್ರೆ ನಡೆಯುವ ನೇಮೋತ್ಸವದ ದಿನದಂದು ಜಮಾಅತ್‌ನ ಅಧಿಕಾರಿಗಳು ಕೂರಲು ದೇವಸ್ಥಾನದ ಕಟ್ಟೆಯಲ್ಲಿ ವಿಶೇಷವಾದ ಸ್ಥಳವನ್ನು ನೀಡಲಾಗುತ್ತದೆ. ಮಾತ್ರವಲ್ಲದೆ ದೈವಗಳು ಆಶೀರ್ವದಿಸಿದ ಮಲ್ಲಿಗೆ ಹೂವುಗಳನ್ನು ಕೂಡ ಜಮಾಅತ್‌ನವರಿಗೆ ನೀಡಲಾಗುತ್ತದೆ.ಈ ಪವಿತ್ರವಾದ ಮಾಡ ಕ್ಷೇತ್ರದಲ್ಲಿ ನಡೆಯುವ ಜಾತ್ರೋತ್ಸವಕ್ಕೆ ಭೇದ ಭಾವವಿಲ್ಲದೆ ಹಿಂದೂ ಮುಸಲ್ಮಾನರು ಭಾಗವಹಿಸುವುದು ವಿಶೇಷತೆಯಾಗಿದೆ. ಜಮಾಅತ್ ಭೇಟಿಗೆ ಉದ್ಯಾವರ ಸಾವಿರ ಜಮಾಅತ್ ವತಿಯಿಂದ ಸೂಫಿ ಹಾಜಿ, ಮೊಯಿದೀನ್ ಕುಂಞಿ ಹಾಜಿ, ಖಾದರ್ ಫಾರೂಕ್,ಆಹ್ಮದ್ ಬಾವ ಹಾಜಿ, ಅಬೂಬಕ್ಕರ್ ಮಾಹಿನ್ ಹಾಜಿ, ಹನೀಫ್ ಪಿ ಎ ಮೊದಲಾದವರ ನೇತೃತ್ವದಲ್ಲಿ ಬರಮಾಡಿಕೊಳ್ಳಲಾಯಿತು. ಅದೇ ರೀತಿ ಉದ್ಯಾವರ ಅರಸು ದೈವಗಳ ಕ್ಷೇತ್ರದ ಮುಖ್ಯಸ್ಥರಾದ ಜಯಪಾಲ ಶೆಟ್ಟಿ, ಮಂಜು ಭಂಡಾರಿ, ದುಗ್ಗ ಭಂಡಾರಿ, ತಿಮ್ಮ ಭಂಡಾರಿ ಮುಂಡ ಶೆಟ್ಟಿ, ಹಾಗೂ ಎರಡು ವರ್ಣ ಹಾಗೂ ನಾಲ್ಕು ಗ್ರಾಮದವರು ಸೇರಿದಂತೆ ಹಲವರು ಜಮಾಅತ್ ಭೇಟಿಯಲ್ಲಿ ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *