Breaking News

ಮಾಣಿ ಜಂಕ್ಷನ್‌ನಲ್ಲಿ ತುಕ್ಕು ಹಿಡಿದು ನೇತಾಡುತ್ತಿರುವ ಸಿಸಿ ಕ್ಯಾಮರಾ

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನಲ್ಲಿ ನಡೆದ ಅಹಿತಕರ ಘಟನೆ ಬಳಿಕ ಪೊಲೀಸ್ ಇಲಾಖೆ ಎಚ್ಚೆತ್ತು ಹಲವು ಸಿಸಿ ಕ್ಯಾಮಾರಗಳನ್ನು ದುರಸ್ತಿಗೊಳಿಸಿತ್ತು. ಇನ್ನೂ ಕೆಲವೆಡೆ ಹೊಸ ಸಿಸಿ ಕ್ಯಾಮಾರಗಳನ್ನು ಅಳವಡಿಸಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತಾ ಕ್ರಮ ಜರುಗಿಸಿತ್ತು. ಆದ್ರೆ ಅತೀ ಹೆಚ್ಚು ವಾಹನ ಸಂಚಾರ ಇರುವ ವಿಟ್ಲ ಠಾಣಾ ವ್ಯಾಪ್ತಿಯ ಮಾಣಿ ಜಂಕ್ಷನ್‌ನ ಎರಡು ಹೆದ್ದಾರಿಗಳಲ್ಲಿರುವ ಸಿಸಿ ಕ್ಯಾಮಾರಗಳು ತುಕ್ಕು ಹಿಡಿದು ನೇತಾಡುತ್ತಿದ್ದರೂ ಯಾವುದೇ ದುರಸ್ತಿ ಕಾರ್ಯ ನಡೆದಿಲ್ಲ.

ದಕ್ಷಿಣ ಕನ್ನಡ ಜಿಲ್ಲೆಯ ಅತೀ ಹೆಚ್ಚು ವಾಹನ ಸಂಚಾರ ಇರುವ ಏಕೈಕ ಹೆದ್ದಾರಿ ಇದಾಗಿದೆ. ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಹಾಗೂ ಮಾಣಿ-ಮೈಸೂರು ರಾಜ್ಯ ಮಾಣಿ ಮೂಲಕವೇ ಹಾದು ಹೋಗುತ್ತಿದೆ. ಮಂಗಳೂರು, ಬಂಟ್ವಾಳ, ವಿಟ್ಲ ಮದಲಾದ ಕಡೆಗಳಲ್ಲಿ ಕಳ್ಳತನ, ಕೋಮು ಘರ್ಷಣೆ, ಕೊಲೆ ಮೊದಲಾದ ಕೃತ್ಯ ನಡೆಸಿ ಆರೋಪಿಗಳು ಬೆಂಗಳೂರು, ಮೈಸೂರು ಕಡೆಗಳಿಗೆ ಇದೇ ಹೆದ್ದಾರಿ ಮೂಲಕ ಪರಾರಿಯಾಗುತ್ತಾರೆ. ಪ್ರತಿನಿತ್ಯ ಹಲವು ಅಪಘಾತ ಪ್ರಕರಣಗಳು ವರದಿಯಾಗುತ್ತದೆ. ಇಲ್ಲಿಗೆ ವಿಟ್ಲ ಹಾಗೂ ಬಂಟ್ವಾಳ ಪೊಲೀಸ್ ಠಾಣೆ ಸುಮಾರು 10ರಿಂದ 15 ಕಿ.ಮೀ ದೂರದಲ್ಲಿದೆ. ಇಲ್ಲಿ ಯಾವುದೇ ಪೊಲೀಸ್ ಹೊರಠಾಣೆಗಳಿಲ್ಲ.

ಮಾಣಿ ಜಂಕ್ಷನ್‌ನಲ್ಲಿ ಕೆಲವು ವರ್ಷಗಳ ಹಿಂದೆ ಮೂರು ಸಿಸಿ ಕ್ಯಾಮಾರಗಳನ್ನು ಅಳವಡಿಸಲಾಗಿತ್ತು. ಕೆಲವು ತಿಂಗಳ ಹಿಂದೆ ಸಿಸಿ ಕ್ಯಾಮಾರಗಳು ಮುರಿದು ಕಂಬದಲ್ಲಿ ನೇತಾಡುತ್ತಿತ್ತು. ಇದೀಗ ಅದೇ ಸಿಸಿ ಕ್ಯಾಮರಾ ಸಂಪೂರ್ಣವಾಗಿ ಹದಗೆಟ್ಟಿದೆ. ಈ ಬಗ್ಗೆ ಸಂಬಂಧಪಟ್ಟ ಪೊಲೀಸ್ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಇದರಿಂದಾಗಿ ಕಳೆದ ಕೆಲವು ಸಮಯಗಳಿಂದ ಈ ಹೆದ್ದಾರಿಗಳಲ್ಲಿ ಕೆಲವು ಪ್ರಕರಣ ನಡೆದಿರುವ ಬಗ್ಗೆ ವರದಿಯಾಗಿದೆ. ಕೇವಲ ಗಲಭೆ ನಡೆಯುವ ಭಾಗದಲ್ಲಿ ಸಿಸಿ ಕ್ಯಾಮಾರಗಳನ್ನು ಅಳವಡಿಸಲಾಗಿದ್ದರೂ ಕೂಡಾ ರಾಜ್ಯ ಹಾಗೂ ರಾಷ್ಟ್ರೀಯ ಹೆದ್ದಾರಿಗಳಲ್ಲಿಯೂ ಸಿಸಿ ಕ್ಯಾಮಾರ ಅಳವಡಿಸಿದರೆ ಹೆದ್ದಾರಿ ದರೋಡೆ ಪ್ರಕರಣ ಸೇರಿದಂತೆ ಮೊದಲಾದ ಪ್ರಕರಣಗಳನ್ನು ಬೇಧಿಸಲು ಸಹಾಯಕವಾಗಲಿದೆ ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
ವರದಿ: ಮಹಮ್ಮದ್ ಆಲಿ ವಿಟ್ಲ

Related posts

Leave a Reply