Header Ads
Breaking News

ಮಾರ್ಚ್ 15ರಿಂದಲೇ ಒಣಕಸ ವಿಲೇವಾರಿ ಮಾಡಬೇಕು : ಅಡ್ಡಿಪಡಿಸಿದ್ದಲ್ಲಿ ಅಂತವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ

ಬಂಟ್ವಾಳದ ಪುರಸಭಾ ವ್ಯಾಪ್ತಿಯಲ್ಲಿ ಸಂಗ್ರಹವಾಗುವ ಒಣಕಸವನ್ನು ಮಾರ್ಚ್ 15ರಿಂದಲೇ ಸಜೀಪನಡು ಗ್ರಾಮದ ಕಂಚಿನಡ್ಕ ಪದವಿನಲ್ಲಿರುವ ಪುರಸಭೆಯ ತ್ಯಾಜ್ಯ ಸಂಸ್ಕರಣ ಘಟಕದಲ್ಲಿ ವಿಲೇವಾರಿ ಮಾಡಬೇಕು, ಈ ಸಂದರ್ಭ ಯಾರಾದರೂ ಅಡ್ಡಿಪಡಿಸಿದ್ದಲ್ಲಿ ಅಂತವರ ವಿರುದ್ದ ನಿರ್ಧಾಕ್ಷಿಣ್ಯವಾಗಿ ಕಾನೂನು ಕ್ರಮ ಕೈಗೊಳ್ಳುವಂತೆ ಮಂಗಳೂರು ಸಹಾಯಕ ಆಯುಕ್ತ, ಪುರಸಭೆಯ ಆಡಳಿತಾಧಿಕಾರಿ ಮದನ್ ಮೋಹನ್ ಸಿ. ಆದೇಶ ನೀಡಿದ್ದಾರೆ.

ಕಂಚಿನಡ್ಕ ಪದವಿನಲ್ಲಿರುವ ತ್ಯಾಜ್ಯ ಸಂಸ್ಕರಣ ಘಟಕದಲ್ಲಿ ಕಸ ವಿಲೇವಾರಿ ಮಾಡುವ ಬಗ್ಗೆ ಸ್ಥಳೀಯರ ವಿರೋಧದ ಹಿನ್ನಲೆಯಲ್ಲಿ ಬಂಟ್ವಾಳ ಪುರಸಭೆಯ ಸಭಾಭವನದಲ್ಲಿ ಶನಿವಾರ ಕರೆಯಲಾಗಿದ್ದ ಅಧಿಕಾರಿಗಳು ಹಾಗೂ ಸ್ಥಳೀಯ ಮುಖಂಡರ ವಿಶೇಷ ಸಭೆಯಲ್ಲಿ ಅವರು ಅಧಿಕಾರಿಗಳಿಗೆ ಈ ಸೂಚನೆ ನೀಡಿದರು. ಕಂಚಿನಡ್ಕ ತ್ಯಾಜ್ಯ ಸಂಸ್ಕರಣ ಘಟಕದ ನಿರ್ಮಾಣದ ಹಿನ್ನಲೆಯಲ್ಲಿ ಈವರೆಗೆ ಸ್ಥಳೀಯ ಬಹುತೇಕ ಬೇಡಿಕೆಗಳನ್ನು ಈಡೇರಿಸಲಾಗಿದೆ. ಯಾವ ಉದ್ದೇಶಕ್ಕಾಗಿ ಕಂಚಿನಡ್ಕ ಪದವಿನಲ್ಲಿ 8 ಎಕರೆ ಜಮೀನನ್ನು ಮೀಸಲಿಡಲಾಗಿದೆಯೋ ಆ ಉದ್ದೇಶಕ್ಕೆ ಬಳಸಬೇಕು ಎನ್ನುವ ನ್ಯಾಯಾಲಯದ ಆದೇಶವನ್ನು ಪಾಲಿಸಬೇಕು. ಒಂದು ವೇಳೆ ಪಾಲಿಸದೇ ಹೋದರೆ ಅದು ನ್ಯಾಯಾಂಗ ನಿಂದನೆಯಾಗುತ್ತದೆ. ಆದ್ದರಿಂದ ಮಾ.15ರಿಂದಲೇ ಪೊಲೀಸರ ಸಹಕಾರ ಪಡೆದು ಕಂಚಿನಡ್ಕ ಪದವಿನಲ್ಲಿ ಒಣ ಕಸವನ್ನು ವಿಲೇವಾರಿ ಮಾಡಬೇಕು, ಅಲ್ಲಿನ ಆವರಣ ಗೋಡೆಯ ಸುತ್ತ ಅಗತ್ಯವಿರುವಷ್ಟು ಸಿಸಿ ಕ್ಯಾಮರ ಅಳವಡಿಬೇಕು ಜೊತೆಗೆ ಸ್ಥಳೀಯರ ಬೇಡಿಕೆಯನ್ನು ಈಡೇರಿಸಿ ಅವರಿಗೂ ಯಾವುದೇ ತೊಂದರೆಯಾಗದಂತೆ ಎಚ್ಚರವಹಿಸಬೇಕು ಎಂದು ಎಸಿ ಖಡಕ್ ಆದೇಶ ಮಾಡಿದರು. ಒಂದು ವಾರ ಬಿಟ್ಟು ಸ್ವತಃ ಸ್ಥಳ ಪರಿಶೀಲನೆ ನಡೆಸಿ ಸ್ಥಳೀಯರಿಗೂ ಯಾವುದೇ ತೊಂದರೆಯಾಗದಂತೆ ಎಚ್ಚರ ವಹಿಸುವುದಾಗಿ ಎ.ಸಿ. ಸ್ಥಳೀಯ ಮುಖಂಡರಿಗೆ ಭರವಸೆ ನೀಡಿದರು.

ಸ್ಥಳೀಯ ಮುಖಂಡರಾದ ಮಾಜಿ ತಾ.ಪಂ.ಅಧ್ಯಕ್ಷ ಯಶವಂತ ದೇರಾಜೆ ಹಾಗೂ ಅಬೂಬಕ್ಕರ್ ಎಸ್. ಮಾತನಾಡಿ ಕಂಚಿನಡ್ಕ ಪದವಿನ ಘಟಕದಲ್ಲಿ ವೈಜ್ಞಾನಿಕವಾಗಿ ತ್ಯಾಜ್ಯ ಘಟಕ ಆರಂಭಿಸುವುದಕ್ಕೆ ನಮ್ಮ ಅಭ್ಯಂತರವಿಲ್ಲ, ಆದರೆ ಅಲ್ಲಿನ ನಿವಾಸಿಗಳಿಗೆ ಹಾಗೂ ಅಂಗನವಾಡಿ ಕೇಂದ್ರಕ್ಕೆ ಪ್ರತ್ಯೇಕ ಜಮೀನು ಒದಗಿಸ ಬೇಕು, ಪರಿಸರ್ಕಕೆ ತೊಂದರೆಯಾಗದಂತೆ ಮಾಲಿನ್ಯ ನಿಯಂತ್ರಣ ಮಂಡಳಿಯ ನಿಯಮಗಳನ್ನು ಪಾಲಿಸಬೇಕು, ಕೊಳಚೆ ನೀರು ಭೂಮಿಗೆ ಇಂಗದಂತೆ ವ್ಯವಸ್ಥೆ ಕಲ್ಪಿಸಬೇಕು, ಮಳೆ ನೀರು ಬೀಳದಂತೆ ಶೆಲ್ಟರ್ ನಿರ್ಮಿಸಬೇಕು. ಪಂಚಾಯಿತಿಗೆ ಮಾಹಿತಿ ನೀಡದೆ ಏಕಾಏಕಿ ಲಾರಿಯಲ್ಲಿ ಕಸವನ್ನು ತಂದು ಹಾಕುವುದು ಸರಿಯಲ್ಲ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಸಹಾಯಕ ಆಯುಕ್ತರು ವೈಜ್ಞಾನಿಕವಾಗಿ ಕಸ ವಿಲೇವಾರಿ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದರು.

ಕಳೆದ ಬುಧವಾರ ಮುಖ್ಯಾಧಿಕಾರಿಯವರ ಸೂಚನೆಯ ಮೇರೆಗೆ ಸಂಸ್ಕರಣ ಘಟಕಕ್ಕೆ ಕಸ ವಿಲೇವಾರಿ ಮಾಡಲು ತೆರಳಿದ್ದ ಸಿಬ್ಬಂದಿಗಳಿಗೆ ಜೀವ ಬೆದರಿಕೆ ಒಡ್ಡಿ, ಅವಾಚ್ಯ ಶಬ್ದಗಳಿಂದ ಸ್ಥಳೀಯರು ನಿಂದಿಸಿರುವುದನ್ನು ಗಮಭೀರವಾಗಿ ಪರಿಗಣಿಸಿದ ಸಹಾಯಕ ಆಯುಕ್ತರು ಘಟಕದೊಳಗೆ ಪ್ರವೇಶ ಮಾಡಿ ಅಡ್ಡಿಪಡಿಸಿದ್ದಲ್ಲದೆ ಪೌರಕಾರ್ಮಿಕರನ್ನು ನಿಂದಿಸಲು ಅಲ್ಲಿದ್ದವರಿಗೆ ಅಧಿಕಾರ ನೀಡಿದವರು ಯಾರು? ನಮ್ಮ ಸಿಬ್ಬಂದಿಗಳಿಗೆ ಭದ್ರತೆ ಬೇಕು. ಅವರಿಗೆ ತೊಂದರೆಯಾದರೆ ನಾನು ಬಿಡುವುದಿಲ್ಲ ಎಂದು ಖಡಕ್ ಎಚ್ಚರಿಕೆಯನ್ನು ಸ್ಥಳೀಯ ಮುಖಂಡರಿಗೆ ನೀಡಿದರು.

ಸಭೆಯಲ್ಲಿ ಸಹಾಯಕ ಆಯುಕ್ತ ಮದನ್ ಮೋಹನ್ ಸಿ., ತಹಶೀಲ್ದರಾ ರಶ್ಮಿ ಎಸ್.ಎಆರ್. ಪುರಸಭಾ ಮುಖ್ಯಾಧಿಕಾರಿ ಲೀನಾ ಬ್ರಿಟ್ಟೋ, ಪ್ರೊಬೇಷನರಿ ಎಎಸ್ಪಿ ರಂಜಿತ್, ಡಿವೈಎಸ್ಪಿ ವೆಲೆಂಟೈನ್ ಡಿಸೋಜಾ, ಇಂಜಿನಿಯರ್ ಡೊಮೆನಿಕ್ ಡಿಮೆಲ್ಲೋ, ಗ್ರಾಮಾಂತರ ಎಸೈ ಪ್ರಸನ್ನ, ಜಿ.ಪಂ.ಸದಸ್ಯ ರವೀಂದ್ರ ಕಂಬಳಿ, ಪುರಸಭಾ ಸದಸ್ಯ ಗೋವಿಂದ ಪ್ರಭು, ತಾ.ಪಂ.ಮಾಜಿ ಅಧ್ಯಕ್ಷ ಯಶವಂತ ದೇರಾಜೆ, ಪುರಸಭಾ ಅಧಿಕಾರಿಗಳು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *