
ಮಂಗಳೂರು: ನಂದಿನಿ ನದಿಯಲ್ಲಿ ನಡೆಯುವಂತಹ ನಂದಿನಿ ನದಿ ಉತ್ಸವ ಕರಾವಳಿಯ ಸಂಸ್ಕೃತಿ, ಕ್ರೀಡೆಯನ್ನು ಪ್ರೋತ್ಸಾಹಿಸುವ ಜೊತೆಗೆ ಪ್ರವಾಸೋದ್ಯಮದ ಅಭಿವೃದ್ಧಿಗೂ ಪೂರಕವಾಗಲಿ ಎಂದು ಮೂಲ್ಕಿ ಮೂಡುಬಿದಿರೆ ಶಾಸಕ ಉಮನಾಥ್ ಕೋಟ್ಯಾನ್ ಹೇಳಿದರು.
ಅವರು ಮಾರ್ಚ್ 20 ಹಾಗೂ 21 ರಂದು ಸಸಿಹಿತ್ಲು ಬಳಿ ನಂದಿನಿ ನದಿಯಲ್ಲಿ ನಡೆಯಲಿರುವ ‘ ನಂದಿನಿ ರಿವರ್ ಫೆಸ್ಟಿವಲ್ ‘ ನ ಲಾಂಛನವನ್ನು ಬಿಡುಗಡೆಗೊಳಿಸಿ ಮಾತನಾಡಿದರು. ಲಾಂಛನ ಬಿಡುಗಡೆ ಕಾರ್ಯಕ್ರಮವನ್ನು ಬೊಕ್ಕಪಟ್ಣದಲ್ಲಿರುವ ಅಬ್ಬಕ್ಕ ಕ್ವೀನ್ ಕ್ರೂಸ್ನಲ್ಲಿ ಆಯೋಜಿಸಲಾಗಿತ್ತು.ನದಿ ಉತ್ಸವವನ್ನು ಸಸಿಹಿತ್ಲು ಆಂಜನೇಯ ವ್ಯಾಯಾಮ ಶಾಲೆಯ ವತಿಯಿಂದ ಆಯೋಜಿಸಲಾಗುತ್ತಿದೆ.
ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ದ.ಕ.ಜಿಲ್ಲಾಧಿಕಾರಿ ಡಾ.ಕೆ.ವಿ ರಾಜೇಂದ್ರ ಅವರು ಮಾತನಾಡಿ, ಕೋವಿಡ್ ಮುನ್ನೆಚ್ಚರಿಕೆಯೊಂದಿಗೆ ನಾವು ಕಾರ್ಯಕ್ರಮಗಳನ್ನು ಆಯೋಜಿಸಬೇಕಾಗಿದೆ. ಮತ್ತೆ ಜನಜೀವನ ಯಥಾಸ್ಥಿತಿಗೆ ಬರುತ್ತಿರುವ ಈ ಸಂದರ್ಭದಲ್ಲಿ ಕೋವಿಡ್ ಮುನ್ನೆಚ್ಚರಿಕೆಯೊಂದಿಗೆ ನಾವು ನಮ್ಮ ಕರಾವಳಿಗೆ ಪ್ರವಾಸಿಗರನ್ನು ಸೆಳೆಯುವಂತಹ ಕೆಲಸ ಮಾಡಬೇಕಾಗಿದೆ, ಈ ನಿಟ್ಟಿನಲ್ಲಿ ಜನತೆಯ ಸಹಕಾರ ಕೂಡ ಅಗತ್ಯ ಎಂದು ಹೇಳಿದರು. ರಿವರ್ ಫೆಸ್ಟಿವಲ್ ಪ್ರತಿ ವರ್ಷದ ಉತ್ಸವ ಆಗಬೇಕು, ಮುಂದಿನ ವರ್ಷದಿಂದ ಜಿಲ್ಲಾಡಳಿತ ನದಿ ಉತ್ಸವ ನಡೆಸುವ ಉದ್ದೇಶವನ್ನು ಹೊಂದಿದೆ ಎಂದು ಜಿಲ್ಲಾಧಿಕಾರಿ ಅವರು ಹೇಳಿದರು.
ಸಮಾರಂಭದಲ್ಲಿ ಮಾತನಾಡಿದ ದ.ಕ.ಜಿಲ್ಲಾ ಹಾಲು ಉತ್ಪಾದಕರ ಒಕ್ಕೂಟ ಕೆ.ಎಂ.ಎಫ್. ಅಧ್ಯಕ್ಷ ರವಿರಾಜ್ ಹೆಗ್ಡೆ ಅವರು ಮಾತನಾಡಿ, ನಂದಿನಿ ನದಿಯಲ್ಲಿ ನಂದಿನಿ ಹೆಸರಿನಲ್ಲಿ ನಡೆಯುವ ಉತ್ಸವಕ್ಕೆ ನಂದಿನಿ ಸಂಸ್ಥೆಯೂ ಪೂರ್ಣ ರೀತಿಯ ಸಹಕಾರ ನೀಡಲಿದೆ ಎಂದು ಹೇಳಿದರು.
ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಉಪ ನಿರ್ದೇಶಕ ಪ್ರದೀಪ್ ಡಿಸೋಜ ಅವರು ಮಾತನಾಡಿ, ಕೋವಿಡ್ ಹಿನ್ನೆಲೆಯಲ್ಲಿ ಯಾವುದೇ ಪ್ರಮುಖ ಉತ್ಸವಗಳು ಆಯೋಜಿಸಲು ಸಾಧ್ಯವಾಗಿರಲಿಲ್ಲ, ಇದೀಗ ಈ ನದಿ ಉತ್ಸವಕ್ಕೆ ಇಲಾಖೆಯು ಸಂಪೂರ್ಣವಾಗಿ ಸಹಕಾರ ನೀಡಲಿದೆ ಎಂದು ಹೇಳಿದರು.
ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮುಕ್ಕ ಸೀ ಫುಡ್ ಸಂಸ್ಥೆಯ ಆಡಳಿತ ನಿರ್ದೇಶಕ ಮಹಮ್ಮದ್ ಆರೀಫ್, ಹಿರಿಯ ನ್ಯಾಯವಾದಿ ಶ್ರೀಮತಿ ಆಶಾ ನಾಯಕ್, ಕೆ.ಎಂ.ಎಫ್ ಸಂಸ್ಥೆಯ ಮಾರುಕಟ್ಟೆ ವಿಭಾಗ ಮುಖ್ಯಸ್ಥ ಜಯದೇವಪ್ಪ, ಪಣಂಬೂರು ಬೀಚ್ ಡೆವಲಪ್ಮೆಂಟ್ ಕಾಪೆರ್Çರೇಷನ್ನ ಸಿ.ಇ.ಒ ಯತೀಶ್ ಬೈಕಂಪಾಡಿ ಉಪಸ್ಥಿತರಿದ್ದರು.
ಸಮಾರಂಭದಲ್ಲಿ ಆಂಜನೇಯ ಗುಡಿ ಮತ್ತು ವ್ಯಾಯಾಮ ಶಾಲೆ ಸಸಿಹಿತ್ಲು ಇದರ ಅಧ್ಯಕ್ಷ ವಿನೋದ್ ಕುಮಾರ್ ಸ್ವಾಗತಿಸಿ, ಕಾರ್ಯಕ್ರಮ ನಿರ್ವಹಿಸಿದರು. ಅನಿಲ್ ಕುಮಾರ್ ವಂದಿಸಿದರು.