Header Ads
Header Ads
Breaking News

ಮುಂದುವರಿದ ಎನ್.ಪಿ.ಎಸ್ ನೌಕರರ ಹೋರಾಟ : ಡಿ.12ರಂದು ಬೃಹತ್ ಪಾದಯಾತ್ರೆ

ಪುತ್ತೂರು: ಎನ್.ಪಿ.ಎಸ್ (ಹೊಸ ಪಿಂಚಣಿ) ಯೋಜನೆ ರದ್ದುಗೊಳಿಸಿ ಹಳೆ ಪಿಂಚಣಿ ಯೋಜನೆ ತರುವ ನಿಟ್ಟಿನಲ್ಲಿ ಈಗಾಗಲೇ ಹಲವು ಹೋರಾಟದ ಮೂಲಕ ಯಶಸ್ಸಿನ ಹಂತಕ್ಕೆ ತಲುಪಿದ ಕರ್ನಾಟಕ ರಾಜ್ಯ ಸರಕಾರಿ ಎನ್‌ಪಿಎಸ್ ನೌಕರರ ಸಂಘದ ವತಿಯಿಂದ ಹೋರಾಟದ ಮುಂದಿನ ಭಾಗವಾಗಿ ದ.12ರಂದು ರಾಜ್ಯದ ಪ್ರತಿಯೊಬ್ಬ ಎನ್.ಪಿ.ಎಸ್ ನೌಕರರು ತಮ್ಮ ಕುಟುಂಬ ಸಮೇತರಾಗಿ ಬೆಳಾಗವಿಯಲ್ಲಿ ನಡೆಯುವ ಚಳಿಗಾಲದ ಅಧಿವೇಶನಕ್ಕೆ ತೆರಳಿ ಅಲ್ಲಿ ಬೆಳಗಾವಿ ಚಲೋ ಬೃಹತ್ ಪಾದಯಾತ್ರೆ ಮತ್ತು ಅಹೋರಾತ್ರಿ ಸತ್ಯಾಗ್ರಹ ಮಾಡಲಿದ್ದಾರೆ. 

ಎನ್‌ಪಿಎಸ್ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಇಬ್ರಾಹಿಂ ಎಮ್‌ರವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಹಳೆ ಪಿಂಚಣಿ ಯೋಜನೆ ತರುವ ನಿಟ್ಟಿನಲ್ಲಿ ನಿರಂತರವಾಗಿ ಕಳೆದ ನಾಲ್ಕು ವರ್ಷಗಳಿಂದ ಹೋರಾಟ ಮಾಡುತ್ತಾ ಬಂದಿದ್ದೇವೆ. ಕಪ್ಪು ಪಟ್ಟಿ ಧರಿಸುವ ಮೂಲಕ, ಪತ್ರ ಚಳುವಳಿ, ರಾಜ್ಯ ಸಮಾವೇಶ, ಜಿಲ್ಲಾ ಸಮಾವೇಶದ ಮೂಲಕ ಜಾಗೃತಿ ಮೂಡಿಸುವ ಕೆಲಸ ಮಾಡಿದ್ದೇವೆ. ಕಳೆದ ಜನವರಿಯಲ್ಲಿ ಪ್ರೀಡಂ ಪಾರ್ಕ್‌ನಲ್ಲೂ ಹೋರಾಟ, ಕಳೆದ ಸಾಲಿನಲ್ಲಿ ವಿಶೇಷವಾದ ರಕ್ತ ಕೊಟ್ಟೆವು ಪಿಂಚಣಿ ಬಿಡೆವು ಹೋರಾಟವೂ ಅತ್ಯಂತ ಯಶಸ್ವಿಯಾಗಿದೆ. ಇದೀಗ ಹೋರಾಟದ ಮುಂದಿನ ಭಾಗವಾಗಿ ಎನ್‌ಪಿಎಸ್ ನೌಕರರು ತಮ್ಮ ಕುಟುಂಬ ಸಮೇತವಾಗಿ ಬೆಳಗಾವಿ ಚಲೋ ಹೋರಾಟದಲ್ಲಿ ಭಾಗವಹಿಸಲಿದ್ದಾರೆ. ರಾಜ್ಯದ ಸುಮಾರು 1ಲಕ್ಷಕ್ಕಿಂತ ಅಧಿಕ ನೌಕರರು ಧರಣಿಯಲ್ಲಿ ಭಾಗವಹಿಸಲಿದ್ದು, ಜಿಲ್ಲೆಯಿಂದ ೨೦ ಸಾವಿರದಷ್ಟು ಮತ್ತು ಪುತ್ತೂರಿನಿಂದ ೬೦೦ ಮಂದಿಯಷ್ಟು ಎನ್.ಪಿ.ಎಸ್ ನೌಕರರು ಧರಣಿಯಲ್ಲಿ ಭಾಗವಹಿಸಲಿದ್ದಾರೆ ಎಂದು ಅವರು ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಪ್ರತಿನಿಧಿಗಳಾದ ಗ್ರಾಮೀಣಾಭಿವೃದ್ಧಿ ಪಂಚಾಯತ್‌ರಾಜ್‌ನ ರಾಘವೇಂದ್ರ ಗೌಡ, ಕಂದಾಯ ಇಲಾಖೆಯ ಚಂದ್ರು ನಾಯಕ್, ತಾಲೂಕು ಪ್ರತಿನಿಧಿಯಾದ ಕಂದಾಯ ಇಲಾಖೆಯ ಮಲ್ಲಿಕ್ ಕುಮಾರ್, ರಾಜ್ಯ ಸಮಿತಿ pಸದಸ್ಯ ವಿದ್ಯಾಧರ ರೈ ಎಂ.ಆರ್ ಉಪಸ್ಥಿತರಿದ್ದರು.

Related posts

Leave a Reply