Breaking News

ಮುಂಬಯಿ ಶೇರುಪೇಟೆ ಸಂವೇದಿ ಸೂಚ್ಯಂಕ, ಮೂವತ್ತೆರಡು ಸಾವಿರ ಗಡಿ ದಾಟಿ ದಾಖಲೆ

ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕವು ಗುರುವಾರದ ವಹಿವಾಟಿನಲ್ಲಿ ಇದೇ ಮೊದಲ ಬಾರಿಗೆ ೩೨ ಸಾವಿರ ಅಂಶಗಳ ಗಡಿಯನ್ನು ದಾಟಿ ಹೊಸ ಮೈಲುಗಲ್ಲು ಸಾಧಿಸಿದೆ.
೩೩ ದಿನಗಳ ವಹಿವಾಟಿನಲ್ಲಿ ಸೂಚ್ಯಂಕವು ೧,೦೦೦ ಅಂಶಗಳಷ್ಟು ಏರಿಕೆ ಕಂಡು ಈ ದಾಖಲೆ ಮಾಡಿದೆ. ಮಾರುಕಟ್ಟೆಯಲ್ಲಿ ನಗದು ಗಮನಾರ್ಹ ಪ್ರಮಾಣದಲ್ಲಿ ಇರುವುದರಿಂದ, ಸೂಚ್ಯಂಕ ದಾಖಲೆ ಮಟ್ಟದ ಏರುಗತಿಯಲ್ಲಿ ಇದೆ. ಪ್ರಮುಖ ಸಂಸ್ಥೆಗಳ ವರಮಾನ ಹೆಚ್ಚಳಗೊಳ್ಳುವ ಆಶಾವಾದವೂ ಗೂಳಿ ನಾಗಾಲೋಟಕ್ಕೆ ಭರ್ಜರಿ ಉತ್ತೇಜನ ನೀಡುತ್ತಿದೆ.
ಹಂತ ಹಂತವಾಗಿ ಬಡ್ಡಿ ದರಗಳನ್ನು ಹೆಚ್ಚಿಸುವುದಾಗಿ ಅಮೆರಿಕದ ಫೆಡರಲ್ ರಿಸರ್ವ್ ಮುಖ್ಯಸ್ಥೆ ಪ್ರಕಟಿಸಿದ್ದಾರೆ. ಇದರಿಂದಲೂ ಹೂಡಿಕೆದಾರರಲ್ಲಿ ಷೇರು ಖರೀದಿ ಉತ್ಸಾಹ ಕಂಡು ಬರುತ್ತಿದೆ. ದೇಶಿ ಮಾರುಕಟ್ಟೆಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ಹಣ ಹೂಡಿಕೆ ಮಾಡುತ್ತಿರುವ ವಿದೇಶಿ ಹೂಡಿಕೆದಾರರೂ ಬಂಡವಾಳ ಪೇಟೆಯಲ್ಲಿ ಖರೀದಿ ಉತ್ಸಾಹ ಗರಿಗೆದರಲು ನೆರವಾಗುತ್ತಿದ್ದಾರೆ. ಗೃಹೋಪಯೋಗಿ ಸಲಕರಣೆ ತಯಾರಿಕೆ ಮತ್ತು ಬ್ಯಾಂಕ್ ಷೇರುಗಳ ಬೆಲೆಗಳು ಉತ್ತಮ ಏರಿಕೆ ಕಂಡಿವೆ. ದಿನದ ವಹಿವಾಟಿನಲ್ಲಿ ಸೂಚ್ಯಂಕವು ೨೩೨.೫೬ ಅಂಶಗಳಷ್ಟು ಏರಿಕೆ ದಾಖಲಿಸಿ ೩೨,೦೩೭.೩೮ ಅಂಶಗಳಿಗೆ ತಲುಪಿತು. ರಾಷ್ಟ್ರೀಯ ನಿಫ್ಟಿ ಕೂಡ ೭೫.೬೦ ಅಂಶಗಳಷ್ಟು ಹೆಚ್ಚಳ ಕಂಡು ೯,೮೯೧.೭೦ ಅಂಶಗಳ ಹೊಸ ದಾಖಲೆ ಬರೆಯಿತು.

Related posts

Leave a Reply