

ಪುತ್ತೂರು: ಒಂದು ಕಾಲದಲ್ಲಿ ಹತ್ತೂರಿನ ಮಕ್ಕಳಿಗೆ ಶಿಕ್ಷಣ ಜ್ಯೋತಿಯನ್ನು ಹಂಚಿ, ಕಾಲ ಕ್ರಮೇಣ ಆಧುನಿಕ ಇಂಗ್ಲೀಷ್ ಶಿಕ್ಷಣದ ಪ್ರಭಾವ ಮತ್ತು ಖಾಸಗಿ ಶಾಲೆಗಳ ಪ್ರಭಾವದ ಪರಿಣಾಮ ಮಕ್ಕಳ ಸಂಖ್ಯೆ ಇಳಿಮುಖವಾಗುತ್ತಾ ಮುಚ್ಚುವ ಸ್ಥಿತಿಗೆ ತಲುಪುತ್ತಿರುವ ಪುತ್ತೂರಿನ ಪರ್ಲಡ್ಕದ ದ.ಕ. ಜಿ.ಪಂ. ಹಿರಿಯ ಪ್ರಾಥಮಿಕ ಶಾಲೆಯನ್ನು ಸಂರಕ್ಷಿಸಲು ಇದೀಗ ಶಿಕ್ಷಣ ಪ್ರೇಮಿಗಳೇ ಟೊಂಕ ಕಟ್ಟಿ ನಿಂತಿದ್ದಾರೆ.
2 ತಿಂಗಳ ಹಿಂದಷ್ಟೇ ಪುತ್ತೂರಿನ ಕೊಂಬೆಟ್ಟುವಿನಲ್ಲಿರುವ 106 ವರ್ಷಗಳ ಇತಿಹಾಸದ ಬೋರ್ಡ್ ಹೈಸ್ಕೂಲ್ ಕಟ್ಟಡವನ್ನು ಶಿಕ್ಷಣ ಪ್ರೇಮಿಗಳ ಸೇರಿ ದೇಣಿಗೆ ಸಂಗ್ರಹಿಸಿ ಪುನರುಜ್ಜೀವನಗೊಳಿಸಿದ ಮಾದರಿಯಲ್ಲೇ ಇದೀಗ ಪರ್ಲಡ್ಕ ಶಾಲೆಯ ಕಟ್ಟಡಕ್ಕೆ ಪುನರುತ್ಥಾನದ ಭಾಗ್ಯ ಒದಗುತ್ತಿದೆ.
1956ರಲ್ಲಿ ಸ್ಥಾಪನೆಯಾದ ಪರ್ಲಡ್ಕ ಸರಕಾರಿ ಶಾಲೆ ಕೆಲಕಾಲ ಪುಟ್ಟ ಕಟ್ಟಡದಲ್ಲಿ ಕಾರ್ಯಾಚರಿಸಿದ ಬಳಿಕ ಸುಂದರವಾದ ಕಟ್ಟಡವನ್ನು ಸರಕಾರ ಒದಗಿಸಿತು. ಇತ್ತೀಚಿಗೆ ಮಾಡು ಶಿಥಿಲಾವಸ್ಥೆಗೆ ಬರಲಾರಂಭಿಸಿದ್ದು, 2 ವರ್ಷಗಳಿಂದೀಚೆಗೆ ಕುಸಿಯುವ ಹಂತ ಮುಟ್ಟಿತ್ತು. ಕೊರೊನಾ ಅವಧಿಯಲ್ಲಿ ದೀರ್ಘ ಕಾಲ ಶಾಲೆ ಮುಚ್ಚಿದ್ದ ಕಾರಣವೋ ಏನೊ ಕಟ್ಟಡದ ಶಿಥಿಲತೆ ಇನ್ನಷ್ಟು ಹೆಚ್ಚಾಯಿತು.
ಶಾಲೆ ಆರಂಭದ ದಿನದಲ್ಲಿ ಮಕ್ಕಳಿಂದ ತುಂಬಿ ತುಳುಕುತ್ತಿದ್ದ ಈ ಶಾಲೆ ಇದೀಗ ಮಕ್ಕಳ ಕೊರತೆ ಎದುರಿಸುತ್ತಿದೆ. ಇದಕ್ಕೆ ಮುಖ್ಯ ಕಾರಣ ಶಾಲೆಯ ಕಟ್ಟಡದ ನಾದುರಸ್ತಿ ಮತ್ತು ಸುತ್ತಮುತ್ತ ಆರಂಭಗೊಂಡ ಆಂಗ್ಲ ಶಾಲಾಗಳಾಗಿವೆ. ಈ ಶಾಲೆಗೆ ಬಡ ಕುಟುಂಬಕ್ಕೆ ಸೇರಿದ ಮಕ್ಕಳೇ ಆಗಿದ್ದು, ಹಿರಿಯ ವಿದ್ಯಾರ್ಥಿಗಳು ಇದೀಗ ಶಾಲೆಯ ಕಟ್ಟಡಕ್ಕೆ ಮರುರೂಪ ನೀಡಲು ಹೊರಟಿರುವುದು ಸಂತಸ ತಂದಿದೆ ಎಂದು ಶಾಲೆಯ ನಿವೃತ್ತ ಹಿರಿಯ ಶಿಕ್ಷಕಿ ಯಶೋಧ ಟೀಚರ್ ಅಭಿಪ್ರಾಯಪಡುತ್ತಾರೆ.
ಶಾಲಾ ಕಟ್ಟಡ ದುರಸ್ತಿ ಬಗ್ಗೆ ಸರಕಾರಕ್ಕೆ ಮನವಿ ಸಲ್ಲಿಸಲಾಗಿತ್ತು. ಈ ಭಾಗದ ಕೌನ್ಸಿಲರ್ ಮತ್ತು ಪ್ರಸ್ತುತ ನರಸಭೆಯ ಉಪಾಧ್ಯಕ್ಷೆಯಾಗಿರುವ ವಿದ್ಯಾ ಗೌರಿ ಅವರು ಪರಿಸ್ಥಿತಿ ಮನಗಂಡು ಮುಂದಾಳುತ್ವ ವಹಿಸಿದರು. ಇದರ ಫಲವಾಗಿ ಈಗ ಸಾರ್ವಜನಿಕರಿಂದಲೇ ದೇಣಿಗೆ ಸಂಗ್ರಹಿಸಿ ದುರಸ್ತಿ ಕಾರ್ಯಕ್ಕೆ ಇಳಿಯಲಾಗಿದೆ.
ಜನವರಿ 26ರಂದು ಎಸ್ಡಿಎಂಸಿ ಸಭೆ ನಡೆಸಿ ಕಟ್ಟಡದ ಕಾಯಕಲ್ಪಕ್ಕೆ ಪಣ ತೊಟ್ಟಿತು. ಜ. 31ರಂದು ಹಿರಿಯ ವಿದ್ಯಾರ್ಥಿಗಳ ಸಮ್ಮಿಲ ಕಾರ್ಯಕ್ರಮ ನಡೆಸಲಾಯಿತು. ಪ್ರಸನ್ನ ಎನ್. ಭಟ್ ಅಧ್ಯಕ್ಷತೆಯಲ್ಲಿ ಹಿರಿಯ ವಿದ್ಯಾರ್ಥಿಗಳ ಸಂಘ ರಚಿಸಲಾಯಿತು. ಕಟ್ಟಡ ದುರಸ್ತಿಗೆಂದೇ ಶಿಕ್ಷಣ ಇಲಾಖೆಯ ಅನುಮತಿ ಪಡೆದು ವಿದ್ಯಾ ಗೌರಿ ಅಧ್ಯಕ್ಷತೆಯಲ್ಲಿ ಪರ್ಲಡ್ಕ ಶಾಲಾ ಕಟ್ಟಡ ಕಾಮಗಾರಿ ಸಮಿತಿ ರಚಿಸಿ, ಪ್ರತ್ಯೇಕ ಬ್ಯಾಂಕ್ ಖಾತೆ ತೆರೆಯಲಾಯಿತು. ಸಾಮಾಜಿಕ ಮುಖಂಡರಾದ ಚನಿಲ ತಿಮ್ಮಪ್ಪ ಶೆಟ್ಟಿ ಅವರನ್ನು ಗೌರವಾಧ್ಯಕ್ಷರನ್ನಾಗಿ ಮಾಡಲಾಯಿತು.
ನಂತರ ನಡೆದಿದ್ದೆಲ್ಲವೂ ಇತಿಹಾಸ. ಎಲ್ಲರೂ ಸೇರಿಕೊಂಡು ಶಾಲೆಗಾಗಿ ದೇಣಿಗೆ ಸಂಗ್ರಹಿಸಲಾರಂಭಿಸಿದರು. ಶಿಕ್ಷಣ ಪ್ರೇಮಿಗಳು ಮನಃಪೂರ್ವಕವಾಗಿ ದೇಣಿಗೆ ನೀಡುತ್ತಿದ್ದು, ಯೋಜನೆ ಮುಂದುವರಿದೆ. ಮಾರ್ಚ್ 8ರಂದು ಮಾಡಿನ ದುರಸ್ತಿ ಕಾರ್ಯ ಅರಂಭಗೊಂಡಿದ್ದು, ಏ. 8ರಂದು ಮುಗಿಸುವ ಗುರಿ ಇಟ್ಟುಕೊಳ್ಳಲಾಗಿದೆ. ನಂತರ ಮುಂದಿನ ಯೋಜನೆಗಳು ಆರಂಭಗೊಳ್ಳಲಿವೆ.
ಒಟ್ಟಿನಲ್ಲಿ ಸ್ಥಳೀಯ ಕೌನ್ಸಿಲರ್, ಶಿಕ್ಷಕರು ಮತ್ತು ಶಿಕ್ಷಣ ಪ್ರೇಮಿಗಳು ಈ ಶಾಲೆಯಲ್ಲಿನ ಅಭಿಮಾನದಿಂದ ದುರಸ್ತಿ ಅಭಿಯಾನಕ್ಕೆ ಇಳಿದಿದ್ದಾರೆ. ಮಕ್ಕಳಿಲ್ಲದೆ ಮುಚ್ಚುವ ಹಂತದಲ್ಲಿದ್ದ ಸರಕಾರಿ ಶಾಲೆಗಳನ್ನು ಉಳಿಸುವ ಕೆಲಸ ಆಗಬೇಕು. ಆ ನಿಟ್ಟಿನಲ್ಲಿ ಶಿಕ್ಷಣ ಪ್ರೇಮಿಗಳ ಈ ಕಾರ್ಯ ಸಮಾಜಕ್ಕೆ ಮಾದರಿಯಾಗಿದೆ.