Header Ads
Header Ads
Breaking News

ಮುಚ್ಚುವ ಹಂತದಲ್ಲಿದ್ದ ಕನ್ನಡ ಮಾಧ್ಯಮ ಶಾಲೆಗೆ ಮರುಜೀವ

ಸಾಲು ಸಾಲು ಕನ್ನಡ ಮಾಧ್ಯಮ ಶಾಲೆಗಳು ಮುಚ್ಚುತ್ತಿರುವ ಕಾಲಘಟ್ಟದಲ್ಲಿ ಇಲ್ಲೊಂದು ಕನ್ನಡ ಮಾಧ್ಯಮ ಶಾಲೆಯೂ ವಿದ್ಯಾರ್ಥಿಗಳ ಹಾಗೂ ಶಿಕ್ಷಕರ ಕೊರತೆಯಿಂದ ಮುಚ್ಚುವ ಹಂತದಲ್ಲಿದ್ದ ಶಾಲೆಯನ್ನು ಊರಿನ ಗ್ರಾಮಸ್ಥರು, ಹಳೆ ವಿದ್ಯಾರ್ಥಿಗಳು, ಸ್ಥಳೀಯ ಸಂಘಟನೆ ಶಾಲೆಗೆ ಎಲ್ಲಾ ವ್ಯವಸ್ಥೆಗಳನ್ನು ಕಲ್ಪಿಸಿ ಶಾಲೆಯನ್ನು ಉಳಿಸುವುದರ ಜತೆಗೆ ಇದೀಗ ಶಾಲಾ ಮಕ್ಕಳಿಗೆ ವಾಹನದ ವ್ಯವಸ್ಥೆ ನೀಡುವುದರ ಮೂಲಕ ಮಾದರಿಯಾಗಿದ್ದಾರೆ.ಬಂಟ್ವಾಳ ತಾಲೂಕಿನ ಕೊಳ್ನಾಡು ಗ್ರಾಮದ ಬೆಟ್ಟಗುಡ್ಡಗಳ ನಡುವೆ ಇರುವ ಕುಳಾಲು ಸರ್ಕಾರಿ ಮಾದರಿ ಹಿರಿಯ ಪ್ರಾಥಮಿ ಶಾಲೆಯೂ ೧೯೩೦ರಲ್ಲಿ ಸ್ವಾತಂತ್ರ್ಯ ಹೋರಾಟಗಾರ ಅಣ್ಣಪ್ಪ ಭಂಡಾರಿ ಅವರ ಮುಂದಾಳತ್ವದಲ್ಲಿ ಗುಡಿಸಲಿನಲ್ಲಿ ಪ್ರಾರಂಭಗೊಂಡಿತ್ತು. ಈ ಭಾಗದಲ್ಲಿ ಸಾವಿರಕ್ಕಿಂತಲೂ ಅಧಿಕ ಮನೆಗಳಿವೆ. ಈ ಭಾಗದ ಅದೇಷ್ಟೋ ವಿದ್ಯಾರ್ಥಿಗಳು ಈ ಶಾಲೆಯನ್ನೇ ಅವಲಂಭಿಸಿದ್ದರು. ಶಾಲಾ ವಜ್ರ ಮಹೋತ್ಸವ ಸವಿನೆನಪಿಗಾಗಿ ಹಾಲ್ತೋಟ ನಾರಾಯಣ ಭಟ್ ಅವರು ಕಲಾ ಮಂದಿರವನ್ನು ಸ್ಥಾಪಿಸಿದ್ದರು. ದಿನ ಕಳೆದಂತೆ ಖಾಸಗಿ ಶಾಲೆಗಳ ಪೈಪೋಟಿಯಿಂದಾಗಿ 300ಕ್ಕಿಂತಲೂ ಅಧಿಕ ವಿದ್ಯಾರ್ಥಿಗಳ ಸಂಖ್ಯೆ ಕುಸಿಯುವ ಜತೆಗೆ ಶಿಕ್ಷಕರ ಸಂಖ್ಯೆಯೂ ಕುಸಿಯಲಾರಂಭಿಸಿದೆ

.2015-16 ಸಾಲಿನಲ್ಲಿ 1ರಿಂದ 8ನೇ ತರಗತಿ ವರೆಗೆ ವಿದ್ಯಾರ್ಥಿಗಳ ಸಂಖ್ಯೆ ೭೫ಕ್ಕೆ ಇಳಿಯ ತೊಡಗಿದೆ. ಈ ಸಂದರ್ಭ ಉದಯಕುಮಾರ್ ಒಬ್ಬರೇ ಶಿಕ್ಷಕರು ಶಾಲೆಯನ್ನು ನಡೆಸಿಕೊಂಡು ಬರುತ್ತಿದ್ದರು. ಮಕ್ಕಳ ಹಾಗೂ ಶಿಕ್ಷಕರ ಕೊರತೆಯಿಂದ ಶಾಲಾ ವಾರ್ಷಿಕೋತ್ಸವ ಕೂಡ ಸ್ಥಗಿತಗೊಂಡಿತ್ತು. ಕೆಲವೇ ದಿನದಲ್ಲಿ ಶಾಲೆ ಸಂಪೂರ್ಣವಾಗಿ ಬಾಗಿಲು ಹಾಕುವ ಹಂತದಲ್ಲಿತ್ತು. ಇದರಿಂದ ಆತಂಕಕ್ಕೀಡಾದ ಮಕ್ಕಳ ಪೋಷಕರು ತಮ್ಮ ಮಕ್ಕಳನ್ನು ಶಾಲೆಯಿಂದ ಬಿಡಿಸಿ ಬೇರೆ ಶಾಲೆಗೆ ಸೇರಿಸಲು ಮುಂದಾಗಿದ್ದರು. ಈ ಬಗ್ಗೆ ಗಮನ ಹರಿಸಿದ ಊರಿನ ಗ್ರಾಮಸ್ಥರು ಹಾಗೂ ವಾರಾಹಿ ಯುವ ಯುವ ವೃಂದ ಸಂಘಟನೆಯವರು ಶಾಲೆಯ ಉಳಿವಿಗಾಗಿ ಶ್ರಮಪಟ್ಟರು.ಮೊದಲಿಗೆ ಸರ್ಕಾರದಿಂದ ನಾಲ್ವರು ಸರ್ಕಾರಿ ಶಿಕ್ಷಕರನ್ನು ಹಾಗೂ ಮೂವರು ಗೌರವ ಶಿಕ್ಷಕರನ್ನು ನೇಮಿಸಲಾಗಿದೆ. ಬಳಿಕ ಇಲಾಖೆಯ ಹಾಗೂ ಊರವರ ಸಹಕಾರದಲ್ಲಿ ಶಾಲೆಗೆ ಮೂಲಭೂತ ಸೌಕರ್ಯವನ್ನು ಒದಗಿಸುವಲ್ಲಿ ಯಶಸ್ಸಿಯಾಗಿದ್ದಾರೆ. ಮಕ್ಕಳಿಗೆ ಕಂಪ್ಯೂಟರ್ ಶಿಕ್ಷಣ, ಸ್ಪೋಕನ್ ಇಂಗ್ಲೀಷ್, ಯುಕೆಜಿ ತರಗತಿ ಪ್ರಾರಂಭಿಸಲಾಗಿದೆ. ನಿಂತು ಹೋಗಿದ್ದ ಶಾಲಾ ವಾರ್ಷಿಕೋತ್ಸವವನ್ನು ಪುನರಾರಂಭಿಸಲಾಗಿದೆ. ಇದೀಗ ವಿದ್ಯಾರ್ಥಿಗಳ ಸಂಖ್ಯೆ91 ದಾಟಿದೆ. ವಾರಾಹಿ ಯುವ ವೃಂದದ ನೇತೃತ್ವದಲ್ಲಿ 3.80 ಲಕ್ಷ ರೂ. ವೆಚ್ಚದಲ್ಲಿ ಮಹೇಂದ್ರ ಜೀಟೊ ವಾಹನವನ್ನು ಖರೀದಿಸಿ ಶಾಲೆಗೆ ಹಸ್ತಾಂತರ ಮಾಡಿದ್ದಾರೆ.

ಮೂರು ಶಿಕ್ಷಕರ ಹುದ್ದೆ ಖಾಲಿ ಇದ್ದು, ಅದನ್ನು ತುಂಬಿಸುವ ಕಾರ್ಯಗಳು ನಡೆಯುತ್ತಿದೆ. ಜಿಲ್ಲಾ ಪಂಚಾಯಿತಿ ಸದಸ್ಯ ಎಂ.ಎಸ್ ಮಹಮ್ಮದ್, ತಾಲೂಕು ಪಂಚಾಯಿತಿ ಸದಸ್ಯ ಕುಳ್ಯಾರು ನಾರಾಯಣ ರೈ, ಕೊಳ್ನಾಡು ಗ್ರಾಮ ಪಂಚಾಯಿತಿ ಅಧ್ಯಕ್ಷ, ವಾರಾಹಿ ಯುವ ವೃಂದದ ಗೌರವಾಧ್ಯಕ್ಷ ಸುಭಾಶ್ಚಂದ್ರ ಶೆಟ್ಟಿ ಕುಳಾಲು, ಅಧ್ಯಕ್ಷ ಜನಾರ್ಧನ ನಾಯ್ಕ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಶರೀಫ್ ಕೆ.ಎಚ್ ಹಾಗೂ ಹಳೆ ವಿದ್ಯಾರ್ಥಿಗಳು, ಗ್ರಾಮಸ್ಥರ ಸಹಕಾರದಲ್ಲಿ ಶಾಲೆ ಮುನ್ನಡೆಯುತ್ತಿದೆ.ಸತ್ಯಸಾಯಿ ಲೋಕಸೇವಾ ಸಂಸ್ಥೆಯಿಂದ ಉಪಾಹಾರದ ವ್ಯವಸ್ಥೆಗೆ ಮನವಿ ಸಲ್ಲಿಸಲಾಗಿದೆ. ಶಾಲಾ ಹಳೆ ವಿದ್ಯಾರ್ಥಿ ಸಂಘ ಸ್ಥಾಪಿಸಲಾಗಿದೆ. ಶಾಲಾ ಹಿತಾರಕ್ಷಣಾ ಸಮಿತಿ ನಿರ್ಮಿಸುವ ಮೂಲಕ ಈ ಶಾಲೆಯನ್ನು ಇನ್ನಷ್ಟು ಅಭಿವೃದ್ಧಿ ಪಡಿಸಲು ತೀರ್ಮಾನಿಸಲಾಗಿದೆ. ಹಳೆ ಕಟ್ಟಡದಲ್ಲಿ ತರಗತಿಗಳು ನಡೆಯುತ್ತಿದ್ದು, ನೂತನ ಕಟ್ಟಡಕ್ಕೆ ಬೇಡಿಕೆ ಸಲ್ಲಿಸಲಾಗಿದೆ.

ಈ ಶಾಲೆಯಲ್ಲಿ ಕಲಿತು ಸಮಾಜದ ಉನ್ನತ ಸ್ಥಾನದಲ್ಲಿರುವ ಹಳೆ ವಿದ್ಯಾರ್ಥಿಗಳು ಇನ್ನಷ್ಟು ಪ್ರೋತ್ಸಾಹ ನೀಡಿದರೆ ಈ ಶಾಲೆಯೂ ಇನ್ನಷ್ಟು ಅಭಿವೃದ್ಧಿ ಹೊಂದಲಿದೆ ಎಂಬ ನಿರೀಕ್ಷೆಯಲ್ಲಿ ಶಾಲಾಭಿವೃದ್ಧಿ ಸಮಿತಿ ಇದೆ.ಶಾಲಾ ವಾಹನ ಹಸ್ತಾಂತರ ಸಮಾರಂಭಕ್ಕೆ ಹಿರಿಯ ಶಿಕ್ಷಕ ಕೆ.ಪಿ ಮೂಲ್ಯ ಚಾಲನೆ ನೀಡಿದರು. ಈ ಸಂದರ್ಭ ಶಾಲಾ ಮುಖ್ಯ ಶಿಕ್ಷಕಿ ತಿಮ್ಮು, ಕೊಳ್ನಾಡು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸುಧೀರ್ ಕುಮಾರ್, ಸದಸ್ಯ ಗುರುವಪ್ಪ ಮುಗೇರ, ಪುಷ್ಪಾಲತಾ, ಶಿಕ್ಷಕ ಪರಮೇಶ್ವರ ಆಚಾರ್ಯ, ವಿಜಯಕುಮಾರ್, ಹೇಮ ಎಂ.ಟಿ ಧರ್ಮೇಂದ್ರ, ಶಮೀರ್, ಹರೀಶ್ ಗೌಡ, ಅಬ್ದುಲ್ ಖಾದರ್ ಮೊದಲಾದವರು ಭಾಗವಹಿಸಿ ಶುಭ ಹಾರೈಸಿದರು.

Related posts

Leave a Reply