Header Ads
Header Ads
Header Ads
Breaking News

ಮುಡಿಪು-ಸಜಿಪ ಸಾರ್ವಜನಿಕರ ಬೇಡಿಕೆ ಬಿ.ಸಿ.ರೋಡ್ ಟು ಕಾಸರಗೋಡು ಕೆ‌ಎಸ್‌ಆರ್‌ಟಿಸಿ ಬಸ್ಸುಗಳಿಂದ ಈಡೇರಿತು

ಉಳ್ಳಾಲ: ಮೆಲ್ಕಾರ್-ಸಜಿಪ-ಮುಡಿಪು ಮಾರ್ಗವಾಗಿ ಕರ್ನಾಟಕ ಸಾರಿಗೆ ಬಸ್ಸುಗಳನ್ನು ಹಾಕುವಂತೆ ಒತ್ತಾಯಿಸಿ ಸಾರ್ವಜನಿಕರ ಬೇಡಿಕೆ ಹಲವು ವರ್ಷಗಳಿಂದ ಈಡೇರಿದ್ದರೂ, ಇದೀಗ ಖಾಸಗಿ ಬಸ್ಸು ಮಾಲೀಕರು ತಡೆ ತರುವ ಸಾಧ್ಯತೆಯಿಂದ ಆತಂಕಕ್ಕೊಳಗಾಗಿದ್ದಾರೆ.

ಕಳೆದ 30 ವರ್ಷಗಳಿಂದ ಬಿ.ಸಿ.ರೋಡಿನಿಂದ ಸಜಿಪ -ಮುಡಿಪು ಭಾಗಕ್ಕೆ ಖಾಸಗಿ ಬಸ್ಸುಗಳ ಸಂಚಾರ ಮಾತ್ರವಿತ್ತು. ಈ ಕುರಿತು ಚೇಳೂರು, ಪಾನೇಲ, ಸಜಿಪ, ಬೋಳಿಯಾರು ಗ್ರಾಮಸ್ಥರು ಸಾರಿಗೆ ಇಲಾಖೆ ಉಪಸ್ಥಿತಿಯಲ್ಲಿ ಹಮ್ಮಿಕೊಳ್ಳುತ್ತಿದ್ದ ಸಾರ್ವಜನಿಕ ಸಭೆಯಲ್ಲಿ ಸರಕಾರಿ ಬಸ್ಸುಗಳ ಬೇಡಿಕೆಗಳನ್ನು ಇಡುತ್ತಾ ಬಂದಿದ್ದರು. ಆದರೂ ಖಾಸಗಿ ಬಸ್ಸುಗಳ ಪೈಪೋಟಿಯಿಂದ ಈ ಭಾಗದಲ್ಲಿ ಸರಕಾರಿ ಬಸ್ಸುಗಳ ಓಡಾಟ ಮರೀಚಿಕೆಯೇ ಆಗಿತ್ತು. ಇದೀಗ ನೂತನ ಅಂತರಾಜ್ಯ ಪರ್ಮಿಟ್‌ನಲ್ಲಿ ಆರಂಭಗೊಂಡ ಐದು ಸರಕಾರಿ ಬಸ್ಸುಗಳ ಓಡಾಟ ಜನರ ಬೇಡಿಕೆಯನ್ನು ಈಡೇರಿಸಿದೆ. ಆದರೆ ಬಿ.ಸಿ.ರೋಡ್ ಮಂಗಳೂರು ನಡುವೆ ೪೦ ರಷ್ಟು ಖಾಸಗಿ ಬಸ್ಸುಗಳು ಓಡಾಟ ನಡೆಸುತ್ತಿದ್ದು, ಅದರ ಮಾಲೀಕರು ಸರಕಾರಿ ಬಸ್ಸುಗಳಿಗೆ ತಡೆ ತರುವ ಸಾಧ್ಯತೆಗಳಿವೆ ಅನ್ನುವ ಆರೋಪಗಳು ಸಾರ್ವಜನಿಕ ವಲಯದಿಂದ ಕೇಳಿಬರುತ್ತಿದೆ. ಈ ಹಿಂದೆ ಕಿನ್ಯಾ , ಬೋಳಿಯಾರು ಮಾರ್ಗಕ್ಕೆ ನರ್ಮ್ ಯೋಜನೆಯಡಿ ಮಂಜೂರಾದ ಬಸ್ಸುಗಳಿಗೆ ತಡೆಯಾಜ್ಞೆ ತಂದಿರುವ ಹಿನ್ನೆಲೆಯಲ್ಲಿ ಓಡಾಟವೇ ಸ್ಥಗತಿಗೊಂಡಿದೆ. ಅದರಂತೆ ಹೊಸ ಮಾರ್ಗದಲ್ಲಿ ಆರಂಭ ಕಂಡ ಬಸ್ಸುಗಳು ಇದೇ ರೀತಿ ಏಕಾ‌ಏಕಿ ಓಡಾಟ ನಿಲ್ಲಿಸಲಿವೆಯೇ ಅನ್ನುವ ಆತಂಕ ಸಾರ್ವಜನಿಕ ವಲಯದಿಂದ ಕೇಳಿಬಂದಿದೆ.

30 ವರ್ಷಗಳ ಹಿಂದೆ ಒಂದೇ ಬಸ್ಸು : 25 ವರ್ಷಗಳ ಹಿಂದೆ ಪಾವೂರು, ಇನೋಳಿ, ಬೋಳಿಯಾರು, ಪಾನೇಲ, ಪಜೀರು, ಚೇಳೂರು, ಸಜಿಪದ ಗ್ರಾಮಸ್ಥರು ಮೆಲ್ಕಾರ್ ಬಿ.ಸಿ.ರೋಡ್ ಹೋಗಬೇಕಾದರೆ ದೋಣಿ ಮೂಲಕ ಅಥವಾ ನಡೆದುಕೊಂಡೇ ತೆರಳಿ ಅತ್ತ ಕಡೆ ಸೇರಬೇಕಿತ್ತು. ಮುಡಿಪು -ಮೆಲ್ಕಾರ್ ಗೆ ಯಾವುದೇ ರಸ್ತೆಯೂ ಇರಲಿಲ್ಲ. ಮಂಗಳೂರಿನಿಂದ ಮುಡಿಪು ಬಾಕ್ರಬೈಲ್, ವಿಟ್ಲ ಮಾರ್ಗಕ್ಕೆ ಒಂದು ಖಾಸಗಿ ಬಸ್ಸಿನ ಸಂಚಾರವಿತ್ತು. ಮುಡಿಪುವಿನಲ್ಲಿ ಇಳಿದು ಮೆಲ್ಕಾರ್ ವರೆಗು ನಡೆದುಕೊಂಡೇ ಹೋಗುವ ಸ್ಥಿತಿಯಿತ್ತು. ಪ್ರದೇಶದಲ್ಲಿ ರಸ್ತೆ ನಿರ್ಮಾಣವಾಗಿ ಅಭಿವೃದ್ಧಿಗೊಳ್ಳುತ್ತಿದ್ದಂತೆ , ೩೦ಕ್ಕೂ ಅಧಿಕ ಖಾಸಗಿ ಸರ್ವಿಸ್ ಬಸ್ಸುಗಳು ಸಂಚಾರ ಆರಂಭಿಸಿತು. ಆದರೆ ಈವರೆಗೂ ಸರಕಾರಿ ಬಸ್ಸು ಸಂಚಾರ ನಡೆಸಿರಲಿಲ್ಲ ಅನ್ನುವುದು ಹಿರಿಯ ವೃದ್ಧರೊಬ್ಬರ ಅಭಿಪ್ರಾಯ.

ಐದು ಬಸ್ಸುಗಳ 24 ಟ್ರಿಪ್‌ಗಳು : ಬಿ.ಸಿ.ರೋಡಿನಿಂದ ಬೆಳಿಗ್ಗೆ 7 ಗಂಟೆಯಿಂದ ಒಂದು ಗಂಟೆಯ ಅಂತರದಲ್ಲಿ ಕಾಸರಗೋಡಿಗೆ ತೆರಳುವ ಬಸ್ಸು ಅಲ್ಲಿಂದ ವಾಪಸ್ಸು ಬಿ.ಸಿ.ರೋಡಿಗೆ ಒಂದು ಗಂಟೆ ಅವಧಿಯಲ್ಲಿ ಮರಳಿ ವಾಪಸ್ಸಾಗುತ್ತದೆ. ಒಟ್ಟು ದಿನದಲ್ಲಿ ಆರು ಬಸ್ಸುಗಳು ೨೪ ಟ್ರಿಪ್ ಗಳನ್ನು ಮಾಡುತ್ತಿವೆ. ಅ.22 ಮಧ್ಯಾಹ್ನ ನಂತರ ಆರಂಭಗೊಂಡಿರುವ ಬಸ್ಸುಗಳು ಸಜಿಪ, ಬೋಳಿಯಾರು, ಮುಡಿಪುವಿನಿಂದ ತೊಕ್ಕೊಟ್ಟು ಮಾರ್ಗವಾಗಿ ಕಾಸರಗೋಡು ತಲುಪುತ್ತಿವೆ. ಹೊಸ ಬಸ್ಸುಗಳಾಗಿರುವುದರಿಂದ ಮೆಲ್ಕಾರ್ ನಿಂದ ತೊಕ್ಕೊಟ್ಟುವರೆಗೆ ಜನ ಕಡಿಮೆಯಿದ್ದರೂ, ತೊಕ್ಕೊಟ್ಟುವಿನಿಂದ ಕಾಸರಗೋಡು ಮಾರ್ಗವಾಗಿ ತೆರಳುವಾಗ ಪ್ರಯಾಣಿಕರ ಸಂಖ್ಯೆ ಹೆಚ್ಚಿದೆ ಅನ್ನುವುದು ಬಸ್ಸು ಸಿಬ್ಬಂದಿ ಅಭಿಪ್ರಾಯ.

ಸಜಿಪ, ಬೋಳಿಯಾರು, ಚೇಳೂರು ಭಾಗದ ವರ್ಷಗಳ ಬೇಡಿಕೆ ಈಡೇರಿದರೂ ಮಂಜನಾಡಿ, ಮೊಂಟೆಪದವು, ಕಲ್ಕಟ್ಟ ಭಾಗದ ಜನರ ಬೇಡಿಕೆ ಈಡೇರಲಿಲ್ಲ. ಮಂಜನಾಡಿ, ಹೂಹಾಕುವಕಲ್ಲು, ಮೊಂಟೆಪದವು, ಕಲ್ಕಟ್ಟ ಮಾರ್ಗವಾಗಿ ಮುಡಿಪುವಿಗೆ ನಿಯಮಿತ ಖಾಸಗಿ ಬಸ್ಸುಗಳು ಮಾತ್ರವಿದೆ. ಇದರಿಂದ ಬೆಳಿಗ್ಗೆ ಹಾಗೂ ಸಂಜೆಯ ಸಮಯ ಪ್ರಯಾಣಿಕರ ಕಷ್ಟ ಹೇಳುವಂತಿಲ್ಲ. ಬಿ.ಸಿ.ರೋಡು ಕಾಸರಗೋಡು ತೆರಳುವ ಐದು ಬಸ್ಸುಗಳ ಪೈಕಿ ಎರಡು ಬಸ್ಸುಗಳನ್ನು ಈ ಮಾರ್ಗದಲ್ಲಿ ಚಲಿಸುವಂತೆ ಮಾಡಬಹುದಿತ್ತು ಅನ್ನುವ ಅಭಿಪ್ರಾಯ ಕೇಳಿಬಂದಿದೆ. ಆದರೆ ಖಾಸಗಿ ಬಸ್ಸಿನವರ ಲಾಭಿಗೆ ಮಣಿದು ಐದು ಬಸ್ಸುಗಳನ್ನು ಮುಡಿಪು ಕೊಣಾಜೆ ಮಾರ್ಗವಾಗಿ ಕಳುಹಿಸಲಾಗುತ್ತದೆ ಅನ್ನುವ ಆರೋಪವೂ ಕೇಳಿಬಂದಿದೆ. ಶೀಘ್ರವೇ ಕನಿಷ್ಟ ಎರಡು ಬಸ್ಸುಗಳನ್ನಾದರೂ ಮಂಜನಾಡಿ ಮಾರ್ಗದಲ್ಲಿ ಚಲಿಸುವಂತೆ ಮಾಡಬೇಕು ಅನ್ನುವ ಬೇಡಿಕೆ ಇದೆ.

ಕಾಸರಗೋಡು ಭಾಗದಿಂದ ದೇರಳಕಟ್ಟೆಯ ಆಸ್ಪತ್ರೆಗಳಿಗೆ ರೋಗಿಗಳು ಭೇಟಿ ನೀಡುತ್ತಿರುತ್ತಾರೆ. ರೈಲನ್ನೇ ಆಶ್ರಯಿಸಿ ಬರುತ್ತಿದ್ದ ಕಾಸರಗೋಡು ನಿವಾಸಿಗಳು, ಉಳ್ಳಾಲ ರೈಲ್ವೇ ನಿಲ್ದಾಣದಲ್ಲಿ ಇಳಿದು ರಿಕ್ಷಾ ಮತ್ತು ಟೂರಿಸ್ಟ್ ಬಸ್ಸುಗಳನ್ನು ಆಶ್ರಯಿಸಿ ಆಸ್ಪತ್ರೆ ತಲುಪಬೇಕಿತ್ತು. ಆದರೆ ಇದೀಗ ಕಾಸರಗೋಡು ಬಿಸಿರೋಡು ಬಸ್ಸು ದೇರಳಕಟ್ಟೆ ಹಾದುಹೋಗುವುದರಿಂದ ಈ ಭಾಗದಲ್ಲಿರುವ ಮೂರು ಆಸ್ಪತ್ರೆಗಳಿಗೆ ದಿನನಿತ್ಯ ಬರುವ ರೋಗಿಗಳಿಗೆ ಹಾಗೂ ಅವರ ಸಂಬಂಧಿಕರಿಗೆ ಬಸ್ಸಿನಿಂದ ಅನುಕೂಲವಾಗಲಿದೆ.


ರಾಜ್ಯಮಟ್ಟದಲ್ಲಿ ಬಿಡುಗಡೆಯಾದ ಪರ್ಮಿಟ್ ಆಗಿದೆ. ಬೆಂಗಳೂರು ಮತ್ತು ತಿರುವನಂತಪುರದಲ್ಲಿರುವ ಕರ್ನಾಟಕ ಮತ್ತು ಕೇರಳ ಭಾಗದ ಸೆಕ್ರೆಟರಿ ಆಫ್ ಟ್ರಾನ್ಸ್‌ಪೋರ್ಟ್ ಒಪ್ಪಂದದ ಮೇರೆಗೆ ಐದು ಪರ್ಮಿಟ್ ಮಂಜೂರಾಗಿದೆ. ಮಾರ್ಗಸೂಚಿಯ ಮಾಹಿತಿಯನ್ನು ಕೆ‌ಎಸ್‌ಆರ್‌ಟಿಸಿಯ ಕೇಂದ್ರ ಕಚೇರಿ ವಿಭಾಗವನ್ನು ಸಂಪರ್ಕಿಸಿದ್ದು, ಅವರು ವಿಭಾಗೀಯ ಕಚೇರಿಯಿಂದ ಮಾಹಿತಿ ಪಡೆದು ಬಸ್ಸು ಚಲಿಸುವ ಮಾರ್ಗ ರೂಪಿಸಿದ್ದಾರೆ. ಐದು ವರ್ಷಗಳ ಕಾಲ ಅಂತರಾಜ್ಯ ಒಪ್ಪಂದದ ಅನುಸಾರ ಪರ್ಮಿಟ್ ಕೊಡಲಾಗುತ್ತದೆ. ಮತ್ತೆ ಐದು ವರ್ಷಗಳ ನಂತರ ಪರ್ಮಿಟ್ ನವೀಕರಣಗೊಳ್ಳುತ್ತದೆ. ಸ್ಟೇಟ್ ಟ್ರಾನ್ಸ್ ಪೋರ್ಟ್ ಅಥಾರಿಟಿ ಪ್ರತಿವರ್ಷವೂ ಅಂತರಾಜ್ಯ ಅಗ್ರಿಮೆಂಟ್ ಅನುಸಾರ ಪರ್ಮಿಟ್ ನೀಡುತ್ತಿದೆ. ಅದರಂತೆ ವಿಟ್ಲ-ಕಾಸರಗೋಡು, ಪುತ್ತೂರು-ಕಾಸರಗೋಡು, ಮಣಿಪಾಲ-ಕಾಸರಗೋಡು, ಕೇರಳ -ಕೊಲ್ಲೂರು ಹೀಗೆ ಬಸ್ಸುಗಳು ಚಲಿಸುತ್ತಿವೆ. ಈ ಬಾರಿ ಬಿಡುಗಡೆಗೊಳಿಸಿದ ಪರ್ಮಿಟ್ ಮಾತ್ರ ಖಾಸಗಿ ಬಸ್ಸುಗಳೇ ಇರುವ ರಸ್ತೆಯಲ್ಲಿ ಬಿಡುಗಡೆಗೊಳಿಸಿರುವುದರಿಂದ ಬಸ್ಸುಗಳು ಪ್ರಚಾರದಲ್ಲಿವೆ. ಮೂರು ದಿನಗಳಲ್ಲಿ ಉತ್ತಮ ಕಲೆಕ್ಷನ್ ಲಭ್ಯವಿದ್ದು, ತೊಕ್ಕೊಟ್ಟು-ಕಾಸರಗೋಡು ಮಾರ್ಗ ಅತ್ಯಂತ ಲಾಭದಾಯಕ ಮಾರ್ಗವಾಗಿರುವುದರಿಂದ ಬಿ.ಸಿ.ರೋಡು-ಕಾಸರಗೋಡು ಬಸ್ಸು ಯಶಸ್ವಿ ಸಂಚಾರ ನಡೆಸಲಿದೆ.

Related posts

Leave a Reply