Header Ads
Header Ads
Breaking News

ಮುತ್ತುಗಳ ದ್ವೀಪದಲ್ಲಿ ಹರಡಿದ ಕಸ್ತೂರಿ ಕನ್ನಡದ ಕಂಪು

ಬಹರೇನ್: ಕನ್ನಡ ಸಾಹಿತ್ಯ ಪರಿಷತ್ತು ಬೆಂಗಳೂರು ಆಯೋಜಿಸಿರುವ ಪರಿಷತ್ತಿನ 104 ವರುಷಗಳ ಇತಿಹಾಸದಲ್ಲಿಯೇ ಪ್ರಥಮ ಬಾರಿಗೆ ಆಯೋಜಿಸಿದ್ದ ಪ್ರಪ್ರಥಮ ಅಂತಾರಾಷ್ಟ್ರೀಯ ಕನ್ನಡ ಸಾಹಿತ್ಯ ಸಮ್ಮೇಳನವು ಬಹರೈನ್ ದ್ವೀಪ ರಾಷ್ಟ್ರದ ಮನಾಮದಲ್ಲಿರುವ ಇಂಡಿಯನ್ ಕ್ಲಬ್ಬಿನ ’ಸಂಸ್ಕಾರ್ ’ ಸಭಾಂಗಣದಲ್ಲಿ ಎರಡು ದಿನಗಳ ಕಾಲ ಯಶಸ್ವಿಯಾಗಿ ಜರುಗಿತು.ಇಲ್ಲಿನ ರಾಜ್ಯ ಪ್ರಶಸ್ತಿ ವಿಜೇತ ಕನ್ನಡ ಸಂಘ ಹಾಗು ಹಂಪಿ ಕನ್ನಡ ವಿಶ್ವ ವಿದ್ಯಾನಿಲಯದ ಜಂಟಿ ಸಹಯೋಗದೊಂದಿಗೆ ಕನ್ನಡ ಸಾಹಿತ್ಯ ಪರಿಷತ್ ಆಯೋಜಿಸಿರುವ ಸಮ್ಮೇಳನಕ್ಕೆ ನಾಡಿನಿಂದ 100ಕ್ಕೂ ಹೆಚ್ಚು ಸಾಹಿತಿಗಳು,ಕವಿಗಳು,ಲೇಖಕರು ,ಬರಹಗಾರರು ,ಚಿಂತಕರು ಆಗಮಿಸಿದ್ದು , ಈ ಎರಡು ದಿನಗಳ ಸಮ್ಮೇಳನದಲ್ಲಿ ಕವಿ ಗೋಷ್ಠಿ ,ವಿಚಾರ ಗೋಷ್ಠಿ, ವಿವಿಧ ಸಂವಾದಗಳು ,ಕಮ್ಮಟಗಳಲ್ಲಿ ಭಾಗವಹಿಸಿ ತಮ್ಮ ವಿಚಾರಗಳನ್ನು ಮಂಡಿಸಿದರು . ಈ ಎರಡು ದಿನಗಳ ಸಾಹಿತ್ಯ ಸಮ್ಮೇಳನಕ್ಕೆ ನಾಡಿನ ಹೆಸರಾಂತ ಕಲಾವಿದ ಅರುಣ್ ಸಾಗರ್ ಹಾಗು ಬಹರೈನ್ ಕಲಾವಿದರುಗಳ ವೈವಿಧ್ಯಮಯ ಸಾಂಸ್ಕ್ರತಿಕ ಕಾರ್ಯಕ್ರಮಗಳ ವರ್ಣರಂಜಿತ ಸಮಾರೋಪ ಸಮಾರಂಭದೊಂದಿಗೆ ತೆರೆ ಬಿದ್ದಿತು .ಅಕ್ಟೋಬರ್  5ರ ಅಪರಾಹ್ನ 2ಕ್ಕೆ ಸರಿಯಾಗಿ ಕನ್ನಡ ಮತ್ತು ಸಂಸ್ಕ್ರತಿ ಸಚಿವೆಯವರಾದ ಡಾ ಜಯಮಾಲರವರು ದೀಪ ಬೆಳಗಿಸಿ ಸಮ್ಮೇಳನಕ್ಕೆ ವಿದ್ಯುಕ ಚಾಲನೆ ನೀಡಿ ಉದ್ಘಾಟಿಸಿದರು . ಸಭಾಂಗಣದ ಒಳಾಂಗಣ ಹಾಗು ಹೊರಾಂಗಣವನ್ನು ನಾಡ ಧ್ವಜಗಳಿಂದ ,ಕನ್ನಡದ ಭಿತ್ತಿ ಚಿತ್ರಗಳಿಂದ ಅಂದವಾಗಿ ಅಲಂಕರಿಸಲಾಗಿದ್ದು ಇಡೀ ಇಂಡಿಯನ್ ಕ್ಲಬ್ಬಿನ ಪರಿಸರ ಸಂಪೂರ್ಣ ಕನ್ನಡಮಯವಾಗಿ ಕನ್ನಡಿಗರ ಭಾಷಾಭಿಮಾನ ಉತ್ತುಂಗಕ್ಕೇರಿತ್ತು . ಡಾ ಜಯಮಾಲಾ ಹಾಗು ಇನ್ನಿತರ ಗಣ್ಯರುಗಳನ್ನು ಇಂಡಿಯನ್ ಕ್ಲಬ್ಬಿನ ಮುಖ್ಯ ದ್ವಾರದ್ಲಲಿಯೇ ಸ್ವಾಗತಿಸಿ ಚೆಂಡೆ ವಾದನ ಹಾಗು ಪೂರ್ಣ ಕುಂಭ ಸ್ವಾಗತದೊಂದಿಗೆ ಸಭಾಂಗಣಕ್ಕೆ ಕರೆದುಕೊಂಡು ಹೋಗಲಾಯಿತು.ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶ್ರೀ ಮನು ಬಳೆಗಾರ್ ಮುಖ್ಯ ಅತಿಥಿಗಳಾಗಿ ಕವಿ ಡಾ .ಎಚ್ .ಎಸ್ .ವೆಂಕಟೇಶ ಮೂರ್ತಿ,ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊಫೆಸರ್ ಎಸ್ .ಜಿ .ಸಿದ್ಧರಾಮಯ್ಯ ,ಹಂಪಿ ವಿ ವಿ ಕುಲಪತಿ ಡಾ ಮಲ್ಲಿಕಾ ಘಂಟಿ ಯವರ ಜೊತೆಗೆ ಬಹರೈನ್ ಕನ್ನಡ ಸಂಘದ ಅಧ್ಯಕ್ಷರಾದ ಶ್ರೀ ಪ್ರದೀಪ್ ಶೆಟ್ಟಿ ಯವರು ವೇದಿಕೆಯಲ್ಲಿ ಉಪಸ್ಥಿತರಿದ್ದು ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡರು . ಈ ಎರಡು ದಿನಗಳ ಸಮ್ಮೇಳನದಲ್ಲಿ ವಿವಿಧ ರೀತಿಯ ಗೋಷ್ಠಿಯ ಜೊತೆಗೆ ಸಂವಾದ ಕಾರ್ಯಕ್ರಮಗಳು ಅತ್ಯಂತಹ ಯಶಸ್ವಿಯಾಗಿ ಜರುಗಿತು. ಗಲ್ಫ್ ಕನ್ನಡಿಗರ ಸ್ಥಿತಿಗತಿ ಕುರಿತಾದ ವಿಚಾರ ಗೋಷ್ಠಿಯು ಪ್ರೊ ಮಲ್ಲೇಪುರಂ ವೆಂಕಟೇಶ್ ಅಧ್ಯಕ್ಷತೆಯಲ್ಲಿ ಜರುಗಿದರೆ , ಕವಿಗೋಷ್ಠಿಯ ಪದ್ಮಶ್ರೀ ದೊಡ್ಡರಂಗೇಗೌಡರವರ ಅಧ್ಯಕ್ಷತೆಯಲ್ಲಿ ನಡೆಯಿತು . ಕನ್ನಡ ಸಾಹಿತ್ಯದಲ್ಲಿ ಹಾಸ್ಯ ಈ ಗೋಷ್ಠಿಯು ಸಾಹಿತಿ ಡಾ ಸಿದ್ದಲಿಂಗಯ್ಯ ಇವರ ಅಧ್ಯಕ್ಷತೆಯಲ್ಲಿ ಜರುಗಿದರೆ ಇನ್ನು ಹಿರಿಯ ಸಾಹಿತಿಗಳೊಂದಿಗಿನ ಸಂವಾದ ಕಾರ್ಯಕ್ರಮ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ ಮನು ಬಳಿಗಾರ್ ರವರ ಅಧ್ಯಕ್ಷತೆಯಲ್ಲಿ ಜರುಗಿತು ,ವಿಶ್ವ ಬಾರತಿಗೆ ಕನ್ನಡದಾರತಿ ವಿಚಾರ ಗೋಷ್ಠಿ ಡಾ ಸರಜೂ ಕಾಟ್ಕರ್ ರವರ ಅಧ್ಯಕ್ಷತೆಯಲ್ಲಿ ನಡೆಯಿತು . ಎಲ್ಲರೂ ಅತ್ಯಂತಹ ಪರಿಣಾಮಕಾರಿಯಾಗಿ ತಮ್ಮ ತಮ್ಮ ವಿಚಾರಗಳನ್ನು ಮಂಡಿಸಿ ನೆರೆದ ನೂರಾರು ಕನ್ನಡಿಗರ ಪ್ರಶಂಸೆಗೆ ಪಾತ್ರರಾದರು . ಸಮಾರೋಪ ಸಮಾರಂಭದಲ್ಲಿ ವಸತಿ ಮತ್ತು ನಗರಾಭಿವೃದ್ಧಿ ಸಚಿವ ಯು .ಟಿ .ಖಾದರ್ ರವರು ಮುಖ್ಯ ಅಥಿತಿಗಳಾಗಿ ಪಾಲ್ಗೊಂಡಿದ್ದರು ಮತ್ತು ರಾಜ್ಯ ಸಭಾ ಸದಸ್ಯ ಎಲ್ ಹನುಮಂತಯ್ಯರವರು ಉಪಸ್ಥಿತರಿದ್ದರು . ಈ ಸಂಧರ್ಭದಲ್ಲಿ ನೆರೆದವರನ್ನು ಉದ್ದೇಶಿಸಿ ಮಾತನಾಡುತ್ತಾ ಸಚಿವರಾದ ಯು . ಟಿ . ಖಾದರ್ ರವರು “ಕನ್ನಡ ಭಾವನಾತ್ಮಕವಾಗಿ ಎಲ್ಲರನ್ನೂ ಒಟ್ಟುಗೂಡಿಸುವಂತಹ ಭಾಷೆ ,ಕನ್ನಡ ಸೋದರತೆ ಹಾಗು ಪ್ರೀತಿ ವಿಶ್ವಾಸವನ್ನು ಬಿಂಬಿಸಿ ಕನ್ನಡದ ಒಗ್ಗಟ್ಟು ಹಾಗು ಏಕತೆಗೆ ವಿಶೇಷವಾದ ಶಕ್ತಿ ಕೊಟ್ಟಂತಹ ಭಾಷೆ . ಈ ಭಾಷೆಯ ಬೆಳವಣಿಗೆಗೆ ಸಾಹಿತಿಗಳ ಕೊಡುಗೆ ಅಪಾರ . ಇಂತಹ ಒಂದು ಸಾಹಿತ್ಯ ಸಮ್ಮೇಳನ ಆಯೋಜಿಸಿದ ಪ್ರತಿಯೊಬ್ಬರೂ ಅಭಿನಂದನೆಗೆ ಪಾತ್ರರು ಎಂದರಲ್ಲದೆ ಬಹರೇನ್ ನಲ್ಲಿ ನಿರ್ಮಾಣಗೊಳ್ಳಲಿರುವ “ಕನ್ನಡ ಭವನಕ್ಕೆ ” ಸರ್ಕಾರದಿಂದ ಇನ್ನೂ ಹೆಚ್ಚಿನ ಅನುದಾನವನ್ನು ಕೊಡಿಸಲು ತಮ್ಮಿಂದಾಗುವ ಎಲ್ಲಾ ಪ್ರಯತ್ನಗಳನ್ನು ಮಾಡುವುದಾಗಿ ಭರವಸೆ ನೀಡಿದರು. ಸಚಿವೆ ಡಾ ಜಯಮಾಲಾ ರವರು ಮಾತನಾಡಿ “”ಅಭಿವೃದ್ಧಿಯನ್ನು ನಾವು ಅಳೆಯುವದು ಬರೀ ಹಣದಿಂದಲ್ಲ ಮನಸ್ಸಿಗೆ ಉಲ್ಲಾಸ ಚೈತನ್ಯ ಬೇಕು ,ಅದಕ್ಕೆ ಸಾಹಿತ್ಯ ಬೇಕು, ಅದಕ್ಕೆ ಸಂಗೀತ ಬೇಕು .ಒಂದಂತೂ ಸತ್ಯ ನಾವು ಕಟ್ಟುವ ಕಲೆ ,ನಾವು ಕಟ್ಟುವ ಸಾಹಿತ್ಯ ,ನಾವು ಕಟ್ಟುವ ಎಲ್ಲಾ ಪ್ರಾಕಾರದ ಸಾಂಸ್ಕ್ರತಿಕ ಲೋಕಗಳು ಇವುಗಳು ಮಾತ್ರ ನಮ್ಮ ಈ ಬದುಕನ್ನು ಬೆಳಗಬಲ್ಲುದು . ಮುಂದಿನ ಪೀಳಿಗೆಗೆ ನಾವು ಕೊಡುವಂತಹ ದೊಡ್ಡ ಆಸ್ತಿ ಎಂದರೆ ಸಾಹಿತ್ಯಗಳು,ನಾವು ಬಿಟ್ಟು ಹೋಗುವಂತಹ ಸಾಂಸ್ಕ್ರತಿಕ ಪ್ರಾಕಾರಗಳು ,ನಾವು ಬಿಟ್ಟು ಹೋದಂತಹ ಜೀವನ ಕ್ರಮಗಳು . ನಮ್ಮ ರಾಜ್ಯದ ಆಸ್ತಿ ಎಂದರೆ ಅದು ನಮ್ಮ ಸಾಂಸ್ಕೃತಿಕ ಲೋಕ “ಎಂದರಲ್ಲದೆ ಇಷ್ಟು ಪ್ರೀತಿ ನೀಡುವ ಕನ್ನಡಿಗರನ್ನೂ ನಾನು ಎಲ್ಲೂ ನೋಡಿಲ್ಲ,ನಿಮ್ಮ ಪ್ರೀತಿಯ ಋಣವನ್ನು ನಾನು ಇಂದಿಗೂ ತೀರಿಸಲು ಸಾಧ್ಯವಿಲ್ಲ ಎಂದರು ಇದೆ ಸಂಧರ್ಭದಲ್ಲಿ ಕನ್ನಡ ಸಂಘದ ಅಧ್ಯಕ್ಷರಾದ ಶ್ರೀ ಪ್ರದೀಪ್ ಶೆಟ್ಟಿ ಯವರು ” ಕನ್ನಡ ಭವನ “ದ ನಿರ್ಮಾಣಕ್ಕೆ ನೀಡಿರುವ ಹೆಚ್ಚಿನ ಅನುದಾನಕ್ಕೆ ನೀಡಿರುವ ಮನವಿಗೆ ಉತ್ತರಿಸುತ್ತಾ ” ನಾವು ಬಿದ್ದು ಹೋದ ಮನೆಯನ್ನು ಹಾಗೆಯೇ ಬೀಳಲು ಬಿಡುವುದಿಲ್ಲ ,ಇವತ್ತು ಕನ್ನಡ ಸಂಘದ ಹಳೆ ಕಟ್ಟಡ ನೆಲಸಮವಾಗಿದೆ ಅದನ್ನು ಮತ್ತೆ ಕಟ್ಟುವ ಕೆಲಸ ನಮ್ಮದು ,ಅದಕ್ಕೆ ಬೇಕಾಗುವ ಆರ್ಥಿಕ ಅನುದಾನವನ್ನು ಖಂಡಿತವಾಗಿಯೂ ಸರಕಾರದಿಂದ ಕೊಡಿಸುತ್ತೇವೆ ಎಂದರು. ಸಮಾರಂಭದ ಅಧ್ಯಕ್ಷತೆಯಾನು ವಹಿಸಿದ್ದ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ ಮನು ಬಳೆಗಾರ್ ರವರು ಕೂಡ ಈ ಸಂಧರ್ಭದಲ್ಲಿ ಮಾತನಾಡಿ ತಾವು ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಕೂಡ ಆರ್ಥಿಕ ಅನುದಾನವನ್ನು ನೀಡುವುದಾಗಿ ಭರವಸೆ ನೀಡಿದರು . ಸಚಿವೆ ಡಾ ಜಯಮಾಲಾ ,ಸಚಿವರಾದ ಯು .ಟಿ ಖಾದರ್ ,ಡಾ ಮನುಬಳೆಗಾರ್ ,ಹಂಪಿ ವಿಶ್ವವಿದ್ಯಾಲಯದ ಕುಲಪತಿ ಡಾ ಮಲ್ಲಿಕಾ ಘಂಟಿ ಯವರನ್ನು ಸಮ್ಮಾನಿಸಲಾಯಿತು . ತದನಂತರ ಖ್ಯಾತ ಕಲಾವಿದ ಅರುಣಾ ಸಾಗರ್ ಹಾಗು ಕನ್ನಡ ಸಂಘದ ಕಲಾವಿದರುಗಳಿಂದ ವೈವಿಧ್ಯಮಯವಾದ ಸಾಂಸ್ಕ್ರತಿಕ ಕಾರ್ಯಕ್ರಮಗಳು ಜರುಗಿ ಬಹರೈನ್ ಕನ್ನಡಿಗರ ಇತಿಹಾಸದಲ್ಲಿ ಮೈಲಿಗಲ್ಲಾದ ಎರಡು ದಿನಗಳ ಪ್ರಥಮ ಅಂತಾರಾಷ್ಟ್ರೀಯ ಸಾಹಿತ್ಯ ಸಮ್ಮೇಳನಕ್ಕೆ ತೆರೆಬಿದ್ದಿತು

Related posts

Leave a Reply