Header Ads
Header Ads
Breaking News

ಮುನ್ನೂರು ಗ್ರಾಮ ಪಂಚಾಯತ್ ಗ್ರಾಮ ಸಭೆ, ಪ್ಲಾಸ್ಟಿಕ್ ವಿಲೇವಾರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಲು ಒತ್ತಾಯ


ತ್ಯಾಜ್ಯ ಸಂಗ್ರಹಣಾ ಘಟಕದಲ್ಲಿ ಪ್ಲಾಸ್ಟಿಕ್ ವಿಲೇವಾರಿಗೆ ಸೂಕ್ತ ವ್ಯವಸ್ಥೆಯಿಲ್ಲದೆ ಗ್ರಾಮಸ್ಥರು ವಾರಕ್ಕೊಮ್ಮೆ ಪ್ಲಾಸ್ಟಿಕ್ ಕಸವನ್ನು ನೀಡುವಂತೆಯೂ, ಗ್ರಾಮದಲ್ಲಿ ಇತ್ತೀಚೆಗೆ ಅಹಿತಕರ ಘಟನೆಗಳು ಹೆಚ್ಚಾಗಿ ನಡೆಯುತ್ತಿದ್ದು ಪೊಲೀಸರು ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ ಎಂದು ಸೋಮೇಶ್ವರ ಜಿಲ್ಲಾ ಪಂಚಾಯಿತಿ ಸದಸ್ಯೆ ಧನಲಕ್ಷ್ಮೀ ಗಟ್ಟಿ ಒತ್ತಾಯಿಸಿದರು.
ಅವರು ಸುಭಾಷನಗರದ ಸಮುದಾಯ ಭವನದಲ್ಲಿ ಮುನ್ನೂರು ಗ್ರಾಮ ಪಂಚಾಯಿತಿನ ೨೦೧೭-೧೮ರ ಪ್ರಥಮ ಸಾಲಿನ ಗ್ರಾಮಸಭೆಯಲ್ಲಿ ಭಾಗವಹಿಸಿ ಮಾತನಾಡಿದರು. ಜಿಲ್ಲೆಯಲ್ಲೇ ಪ್ರಥಮ ಎಂಬಂತೆ ಮುನ್ನೂರು ಗ್ರಾಮದಲ್ಲಿನ ತ್ಯಾಜ್ಯ ಸಂಗ್ರಹಣಾ ಘಟಕ ಕಾರ್‍ಯಾಚರಿಸುತ್ತಿದೆ. ಮನೆಗಳಿಂದ ಕಸ ಸಂಗ್ರಹಣೆಗೆ ಎರಡು ವಾಹನಗಳನ್ನು ಇಡಲಾಗಿದೆ. ಆದರೆ ಪ್ಲಾಸ್ಟಿಕ್ ತ್ಯಾಜ್ಯವನ್ನು ಸಂಗ್ರಹಣಾ ಘಟಕದಲ್ಲಿ ಇಡಲು ತೊಂದರೆಯಾಗುತ್ತಿದ್ದು, ವಾರಕ್ಕೊಮ್ಮೆ ಮಹಾನಗರ ಪಾಲಿಕೆ ವ್ಯಾಪ್ತಿಗೆ ಲಾರಿಯಲ್ಲಿ ಕೊಂಡೊಯ್ಯುವ ಪ್ರಯತ್ನ ಮಾಡಲಾಗುತ್ತಿದೆ. ಅದಕ್ಕಾಗಿ ಗ್ರಾಮಸ್ಥರು ಪ್ಲಾಸ್ಟಿಕ್ ತ್ಯಾಜ್ಯವನ್ನು ವಾರದಲ್ಲಿ ಒಂದು ಬಾರಿ ನೀಡಿದಲ್ಲಿ ವಿಲೇವಾರಿ ಸುಲಭವಾಗುತ್ತದೆ ಎಂದರು. ತ್ಯಾಜ್ಯ ಘಟಕ ಇದ್ದರೂ, ಕಸ ವಿಲೇವಾರಿಗೆ ಪ್ರತಿ ತಿಂಗಳು ಸುಂಕ ಪಡೆಯುತ್ತಿದ್ದರೂ ಪ್ಲಾಸ್ಟಿಕ್ ತ್ಯಾಜ್ಯವನ್ನು ಕೊಂಡೊಯ್ಯುತ್ತಿಲ್ಲ ಅನ್ನುವ ಗ್ರಾಮಸ್ಥರ ಆರೋಪಕ್ಕೆ ಜಿ.ಪಂ ಸದಸ್ಯೆ ಪ್ರತಿಕ್ರಿಯಿಸಿದರು.
ಮುನ್ನೂರು ಪಂಚಾಯಿತಿ ವ್ಯಾಪ್ತಿಯಲ್ಲಿ ಎರಡು ಕೊಲೆಯತ್ನ ಪ್ರಕರಣಗಳು ನಡೆದಿವೆ. ಆದರೆ ಆರೋಪಿಗಳ ಬಂಧನವಾಗಿಲ್ಲ. ಅಹಿತಕರ ಘಟನೆಗಳು ಮರುಕಳಿಸುತ್ತಲೇ ಇವೆ. ಪೊಲೀಸರು ಕಟ್ಟುನಿಟ್ಟಾದ ಕ್ರಮಕೈಗೊಳ್ಳಬೇಕಿದೆ. ಜನರೊಂದಿಗೆ ವಿಶ್ವಾಸ ಹೊಂದುವ ಜನಸ್ನೇಹಿ ಕಾರ್ಯಕ್ರಮವನ್ನು ಪೊಲೀಸರು ನಡೆಸದೆ ಹಲವು ಸಮಯಗಳೇ ನಡೆದಿವೆ. ಇದರಿಂದ ಜನರ ಸಹಕಾರವೂ ಪೊಲೀಸರಿಗೆ ಸಿಗುತ್ತಿಲ್ಲ. ಗ್ರಾಮದ ಜನ ಭೀತಿಯಿಂದಲೇ ರಸ್ತೆಯಲ್ಲಿ ನಡೆದುಕೊಂಡು ಹೋಗಬೇಕಾಗಿದೆ. ಗ್ರಾಮಸ್ಥರಲ್ಲಿ ವಿಶ್ವಾಸ ಮೂಡಿಸುವ ಕೆಲಸ ಪೊಲೀಸರಿಂದ ಆಗಬೇಕಿದೆ ಎಂದು ಒತ್ತಾಯಿಸಿದರು.
ಗ್ರಾಮಸಭೆಯ ಅಧ್ಯಕ್ಷತೆಯನ್ನು ಮುನ್ನೂರು ಗ್ರಾಪಂ ಅಧ್ಯಕ್ಷೆ ರೂಪಾ .ಶೆಟ್ಟಿ ವಹಿಸಿದ್ದರು. ಉಪಾಧ್ಯಕ್ಷ ಹರೀಶ್ ಭಂಡಾರಬೈಲು, ನೋಡೆಲ್ ಅಧಿಕಾರಿಯಾಗಿ ಶಿಕ್ಷಣ ಇಲಾಖೆಯ ಕ್ಷೇತ್ರ ಸಂಪನ್ಮೂಲ ಅಧಿಕಾರಿ ದುರ್ಗಾಲತಾ, ತಾಪಂನ ಆಲ್ಫ್ರೆಡ್ ವಿಲ್ಮಾ ಡಿಸೋಜ ಮೊದಲಾದವರು ಉಪಸ್ಥಿತರಿದ್ದರು.

Related posts

Leave a Reply