Header Ads
Header Ads
Breaking News

ಮೂಡಬಿದರೆಯಲ್ಲಿ ಜನಸಂಪರ್ಕ ಸಭೆ

ಮೂಡುಬಿದಿರೆ: ರೈತರು ತಮ್ಮ ಜಮೀನಿನಲ್ಲಿ ಕೊಳವೆ ಬಾವಿ ತೆಗೆಸುವುದಾದರೆ ಒಂದು ಕೊಳವೆ ಬಾವಿ ಅಥವಾ ಬಾವಿಯಿಂದ ಇನ್ನೊಂದು ಕೊಳವೆ ಬಾವಿಗೆ 500 ಮೀಟರ್ ಅಂತರವಿದ್ದಲ್ಲಿ ಮಾತ್ರ ಗ್ರಾಮ ಪಂಚಾಯತಿನಿಂದ ನಿರಾಕ್ಷೇಪಣೆ ಪತ್ರ ಸಿಗುತ್ತದೆ. ಆದರೆ ಸರಕಾರವೆ ಕೊಳವೆ ಬಾವಿ ತೆಗೆಸುವುದಾದರೆ ಅಂತರದ ಮಿತಿ ಇರುವುದಿಲ್ಲ. ಕೊಳವೆ ಬಾವಿ ತೆಗೆಯುವಾಗ ಸರಕಾರಕ್ಕೆ ಒಂದು ಕಾನೂನು ಖಾಸಗಿಯವರಿಗೆ ಇನ್ನೊಂದು ಕಾನೂನು ಇರುವುದರಿಂದ ಖಾಸಗಿಯಾಗಿ ಕೊಳವೆ ಬಾವಿ ತೆಗೆಸುವ ರೈತರಿಗೆ ಅನ್ಯಾಯವಾಗುತ್ತಿದೆ ಈ ತಾರತಮ್ಯ ಸರಿಪಡಿಸಬೇಕು ಎಂದು ಕರ್ನಾಟಕ ಪ್ರಾಂತ ರೈತ ಸಂಘದ ಅಧ್ಯಕ್ಷ ಧನಕೀರ್ತಿ ಬಲಿಪ ಜನಸಂಪರ್ಕ ಸಭೆಯಲ್ಲಿ ಆಗ್ರಹಿಸಿದರು.

ಅವರು ಇಲ್ಲಿನ ಸಮಾಜ ಮಂದಿರದಲ್ಲಿ ಶನಿವಾರ ಮೆಸ್ಕಾಂ ಇಲಾಖೆಯ ವತಿಯಿಂದ ನಡೆದ ಜನ ಸಂಪರ್ಕ ಸಭೆಯಲ್ಲಿ ಈ ಬಗ್ಗೆ ಮೆಸ್ಕಾಂ ಅಧಿಕಾರಿಗಳ ಗಮನಕ್ಕೆ ತಂದರು.
ಇದು ಸರಕಾರದ ನಿಯಮವಾಗಿರುವುದರಿಂದ ಜಿಲ್ಲಾಧಿಕಾರಿಯವರೆ ಇದನ್ನು ಸರಿಪಡಿಸಬೇಕು. ಈ ವಿಷಯವನ್ನು ನಾನು ಜಿಲ್ಲಾಧಿಕಾರಿಯವರ ಗಮನಕ್ಕೆ ತರುತ್ತೇನೆ ಎಂದು ಮಂಗಳೂರಿನ ಮೆಸ್ಕಾಂ ಅಧೀಕ್ಷಕ ಎಂಜಿನಿಯರ್ ಮಂಜಪ್ಪ ಉತ್ತರಿಸಿದರು. ಒಂದು ಕೊಳವೆ ಬಾವಿಯಿಂದ ಇನ್ನೊಂದು ಕೊಳವೆ ಬಾವಿಗೆ ೫೦೦ ಮೀಟರ್‌ಕ್ಕಿಂತ ಹೆಚ್ಚು ಅಂತರವಿದ್ದರು ಪಡುಮಾರ್ನಾಡು ಪಂಚಾಯತಿ ಅಭಿವೃದ್ಧಿ ಅಧಿಕಾರಿ ಜಿಪಿಎಸ್ ಅಳತೆಯ ಕಾರಣ ನೀಡಿ ನಿರಾಕ್ಷೇಪಣೆ ಪತ್ರ ನೀಡಲು ನಿರಾಕರಿಸುತ್ತಿದ್ದಾರೆ ಎಂದು ಬಲಿಪರು ಆರೋಪಿಸಿದರು.
ಕಾವೂರಿನ ಕಾರ್‍ಯನಿವಾಹಕ ಎಂಜಿನಿಯರ್ ದೀಪಕ್, ಮೂಡುಬಿದಿರೆ ಮೆಸ್ಕಾಂನ ಸಹಾಯಕ ಕಾರ್‍ಯನಿರ್ವಾಹಕ ಎಂಜಿನಿಯರ್ ಸತೀಶ್ ಮತ್ತಿತರರು ಉಪಸ್ಥಿತರಿದ್ದರು.