Header Ads
Header Ads
Header Ads
Breaking News

ಮೂಡಬಿದಿರೆಯಲ್ಲಿ ಮಹಿಳೆಯರು ಹಾಗೂ ಕೂಲಿ ಕಾರ್ಮಿಕರ ಸಮ್ಮೇಳನ ಕಾರ್ಮಿಕರು ಸೌಲಭ್ಯಗಳನ್ನು ಪಡೆಯಲು ನೋಂದಣಿ ಅಗತ್ಯ ಮಂಗಳೂರಿನ ಕಾರ್ಮಿಕ ಅಧಿಕಾರಿ ವಿಲ್ಮಾ ಎಲಿಜಬೆತ್ ಹೇಳಿಕೆ

ಮೂಡುಬಿದಿರೆ : ಶೇ.90ರಷ್ಟಿರುವ ಕಟ್ಟಡ ಮತ್ತು ಇತರ ವರ್ಗದ ಕಾರ್ಮಿಕರು ತಮ್ಮ ಹಾಗೂ ತಮ್ಮ ಮನೆಯವರ ಮಕ್ಕಳ ಶಿಕ್ಷಣ, ಮದುವೆ, ಆರೋಗ್ಯ, ಮನೆ ಹೊಂದಲು, ಅಕಸ್ಮಿಕ ಮರಣ, ಅಪಘಾತ ಮುಂತಾದ ಸಂದರ್ಭದಲ್ಲಿ ನ್ಯಾಯಬದ್ಧ ಸೌಲಭ್ಯಗಳನ್ನು ಪಡೆಯಲು ಕಾರ್ಮಿಕ ಇಲಾಖೆಯಲ್ಲಿ ನೋಂದಣಿ ಮಾಡಿಸಿಕೊಳ್ಳಲು ಮುಂದೆ ಬರಬೇಕು ಎಂದು ಮಂಗಳೂರಿನ ಕಾರ್ಮಿಕ ಅಧಿಕಾರಿ ವಿಲ್ಮಾ ಎಲಿಜಬೆತ್ ಹೇಳಿದರು.

ಅವರು ಕಿನ್ನಿಗೋಳಿಯ ಸ್ವಾಮಿ ವಿವೇಕಾನಂದ ಸೇವಾ ಸಂಸ್ಥೆ ಹಾಗೂ ರಾಜ್ಯದ ಭಾರತೀಯ ಮಜ್ದೂರ್ ಸಂಘ ಇವುಗಳ ಸಂಯುಕ್ತ ಆಶ್ರಯದಲ್ಲಿ ಭಾನುವಾರ ಸಮಾಜಮಂದಿರದಲ್ಲಿ ಏರ್ಪಡಿಸಲಾದ ಮಹಿಳೆಯರು ಹಾಗೂ ಕೂಲಿ ಕಾರ್ಮಿಕರ ಮಹಾ ಸಮ್ಮೇಳನದಲ್ಲಿ ಮಾಹಿತಿ ಮತ್ತು ಮಾರ್ಗದರ್ಶನ ನೀಡಿ ಮಾತನಾಡಿದರು.

ಭಾರತೀಯ ಮಜ್ದೂರ್ ಸಂಘದ ರಾಜ್ಯಾಧ್ಯಕ್ಷ ಕೆ. ವಿಶ್ವನಾಥ ಶೆಟ್ಟಿ ಸಮ್ಮೇಳನವನ್ನು ಉದ್ಘಾಟಿಸಿ ಸಂಘಟಿತ ಕಾರ್ಮಿಕರು ಪಡೆಯುವ ಹಾಗೆಯೇ ಅಸಂಘಟಿತ ಕೂಲಿ ಕಾರ್ಮಿಕರು ಸರಕಾರಿ ಆರ್ಥಿಕ ಸೌಲಭ್ಯಗಳನ್ನು ಪಡೆಯುವಲ್ಲಿ ಹಿಂದೆ ಬೀಳಬಾರದು ಎಂದು ಕರೆನೀಡಿದ ಅವರು ಭಾರತೀಯ ಮಜ್ದೂರ್ ಸಂಘವು ಒಂದೂವರೆ ಕೋಟಿ ಸದಸ್ಯರನ್ನು ಹೊಂದಿದ್ದು ವಿಶೇಷವಾಗಿ ಅಸಂಘಟಿತ ಕೂಲಿಕಾರ್ಮಿಕರಿಗೆ ನ್ಯಾಯಬದ್ಧವಾಗಿ ಸಿಗಬೇಕಾದ ಸರಕಾರಿ ಸವಲತ್ತುಗಳನ್ನು ದೊರಕಿಸಲು ಪರಿಶ್ರಮಿಸುತ್ತಿದೆ ಎಂದು ಹೇಳಿದರು.ಸಮ್ಮೇಳನದ ಅಧ್ಯಕ್ಷತೆಯನ್ನು ಸ್ವಾಮಿ ವಿವೇಕಾನಂದ ಸೇವಾ ಸಂಸ್ಥೆಯ ಅಧ್ಯಕ್ಷ ನಿಡ್ಡೋಡಿ ಚಾವಡಿಮನೆ ಜಗನ್ನಾಥ ಶೆಟ್ಟಿ ಅವರು ವಹಿಸಿದ್ದರು.ಧನಲಕ್ಷ್ಮೀ ಗೇರು ಉದ್ಯಮದ ಪ್ರವರ್ತಕ ಕೆ. ಶ್ರೀಪತಿ ಭಟ್, ನಿವೃತ್ತ ಪ್ರಾಧ್ಯಾಪಕ ಎಂ. ವಾಸುದೇವ ಭಟ್, ಕಾರ್ಮಿಕ ನಿರೀಕ್ಷಕಿ ಮೇರಿ ಡಯಾಸ್, ಸಮಾಜ ಮಂದಿರ ಸಭಾದ ಜತೆಕಾರ್ಯದರ್ಶಿ, ಹಿರಿಯ ವಕೀಲ ಕೆ. ಆರ್. ಪಂಡಿತ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ನಿಡ್ಡೋಡಿ ಜಗನ್ನಾಥ ಶೆಟ್ಟಿ ಸ್ವಾಗತಿಸಿದರು. ಸಂಸ್ಥೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಸೀತಾರಾಮ ಶೆಟ್ಟಿ ನಿರೂಪಿಸಿದರು. ಗೌರವ ಸಲಹೆಗಾರ ರಾಜೀವ ಶೆಟ್ಟಿ ವಂದಿಸಿದರು. ಕಾರ್ಯಕ್ರಮದಲ್ಲಿ ಕಾರ್ಮಿಕರ ನೋಂದಣಿಗಾಗಿ ಅರ್ಜಿ ನೀಡಿ, ನಾಲ್ಕು ಭಾವಚಿತ್ರಗಳು, ಅಧಾರ್, ಪಡಿತರ ಚೀಟಿ, ವಯಸ್ಸು , ಬ್ಯಾಂಕ್ ಖಾತೆ ಮೊದಲಾದ ದಾಖಲೆಗಳ ಪ್ರತಿಗಳೊಂದಿಗೆ ನೋಂದಣಿ ನಡೆಸಲಾಯಿತು.

ವರದಿ: ಪ್ರೇಮಶ್ರೀ ಮೂಡಬಿದರೆ

Related posts

Leave a Reply