Breaking News

ಮೂಡಬಿದ್ರೆಯಲ್ಲಿ ಶುರುವಾಗಿದೆ ಐವನ್‌ರ ಓಡಾಟ

ಮಂಗಳೂರು: ಚುನಾವಣೆ ರಾಜಕಾರಣ ಬಿರುಸಾಗುತ್ತಿದೆ. ಅಭ್ಯರ್ಥಿಗಳಾಗಬಯಸುವವರು ತಮ್ಮ ತಮ್ಮ ಕ್ಷೇತ್ರಗಳನ್ನು ಗಟ್ಟಿಗೊಳಿಸಿಕೊಳ್ಳುವ ಕಾರ್ಯದಲ್ಲಿ ತಲ್ಲೀನರಾಗಿದ್ದಾರೆ. ಇಂತಹದ್ದೇ ಒಂದು ಪ್ರಯತ್ನ ಐವನ ಡಿಸೋಜರಿಂದಲೂ ನಡೆಯುತ್ತಿದೆ. ಅವರೀಗ ತಮ್ಮ ಗಮನವನ್ನು ಮುಲ್ಕಿ-ಮೂಡಬಿದ್ರೆ ಕ್ಷೇತ್ರದತ್ತ ಕೇಂದ್ರಿಕರಿಸಿದ್ದಾರೆ. ಅಲ್ಲಿಯ ಬೆಳವಣಿಗೆಯ ಮೇಲೆ ಹೆಚ್ಚು ಗಮನ ಹರಿಸುತ್ತಿದ್ದಾರೆ.
ಮೂಲ್ಕಿ-ಮೂಡಬಿದ್ರೆ ವಿಧಾನಸಭಾ ಕ್ಷೇತ್ರದಲ್ಲಿ ಮುಂದಿನ ಚುನಾವಣೆಯಲ್ಲಿ ತಾನು ಅಭ್ಯರ್ಥಿಯಾಗಲು ಇಚ್ಚಿಸುವುದಿಲ್ಲ ಎಂದು ಹಾಲಿ ಶಾಸಕ ಅಭಯಚಂದ್ರ ಜೈನ್ ಹೇಳಿದ್ದೇ ತಡ ಈ ಕ್ಷೇತ್ರದಿಂದ ಸ್ಪರ್ಧಿಸಬಯಸುವ ಕಾಂಗ್ರೆಸಿಗರ ಪಟ್ಟಿ ದೊಡ್ಡದಾಗುತ್ತಲೇ ಸಾಗಿದೆ. ಅಭಯರ ಅಭಯ ಪಡೆದಿರುವವರಾಗಿ ಇರುವುದು ಮಿಥುನ್ ರೈ. ಕಳೆದ ಒಂದೂವರೆ ವರ್ಷದಿಂದೀಚೆಗೆ ಮಿಥುನ್ ಈ ಕ್ಷೇತ್ರ ವ್ಯಾಪ್ತಿಯಲ್ಲಿ ಓಡಾಡಿಕೊಂಡಿದ್ದಾರೆ. ಗೋ ಧಾನ, ಆ ಧಾನ ಈ ಧಾನ ಎಂದು ಸಮಾಜ ಸೇವಾ ಕಾರ್ಯಗಳನ್ನೂ ಮಾಡುತ್ತಿದ್ದಾರೆ. ಇದರ ಮಧ್ಯ ಐವನ್ ಡಿಸೋಜಾರ ಓಡಾಟ ಕೂಡ ಆರಂಭವಾಗಿದೆ. ಒಂದು ಅರ್ಥದಲ್ಲಿ ಒಂದು ಕಾಲದ ಗುರು ಶಿಷ್ಯರ ನಡುವೆಯೇ ಪೈಪೋಟಿ ಆರಂಭವಾಗಿದೆ ಎಂದು ಹೇಳಬಹುದು.
ಈಗಾಗಲೇ ಧಾರ್ಮಿಕ ಹಾಗೂ ಸಾಮಾಜಿಕ ಮುಖಂಡರನ್ನು ಭೇಟಿಯಾಗುತ್ತಿರುವ ಐವನ್ ಎರಡು ದಿನಗಳ ಹಿಂದೆಯಷ್ಟೇ ಕ್ಷೇತ್ರದ ಹಿರಿಯ ನಾಯಕ ಗುರುರಾಜ್ ಪೂಜಾರಿಯವರು ಮನೆಗೆ ಹೋಗಿ ಬಂದಿದ್ದಾರೆ. ಗುರುರಾಜ್ ಪೂಜಾರಿ ಕಾಂಗ್ರೆಸ್ ಪಕ್ಷವನ್ನು ತೊರೆಯುತ್ತಿದ್ದಾರೆ ಎಂಬ ಸುದ್ದಿಗಳು ಹಬ್ಬಿದ್ದವು. ಅವರ ಮನವೊಲಿಸುವಲ್ಲಿ ಐವನ್ ಯಶಸ್ವಿಯಾಗಿದ್ದಾರೆ. ಪಕ್ಷದಲ್ಲಿಯೇ ಮುಂದುವರಿದು ಪಕ್ಷದ ಸಂಘಟನೆಗಾಗಿ ದುಡಿಯಲು ಗುರುರಾಜ್ ಒಪ್ಪಿದ್ದಾರೆ ಎಂದು ಹೇಳಲಾಗುತ್ತಿದೆ.
ಈ ಹಿಂದೆ ಮೇಘನಾಥ ಶೆಟ್ಟಿ ಕಾಂಗ್ರೆಸ್ ತೊರೆಯುತ್ತಿದ್ದಾಗ ಮನವೊಲಿಸುವ ಪ್ರಯತ್ನ ಆಗಿದಿದ್ದರೆ ಚೆನ್ನಾಗಿತ್ತು. ಮೇಘನಾಥರನ್ನು ಮತ್ತೆ ಪಕ್ಷಕ್ಕೆ ಕರೆತರಬೇಕು ಎಂದು ಪಕ್ಷದ ಸ್ಥಳೀಯ ಕಾಂಗ್ರೆಸ್ ಕಾರ್ಯಕರ್ತರು ಈಗ ಪ್ರತಿಕ್ರಿಯಿಸುತ್ತಿದ್ದಾರೆ.
ಮುಲ್ಕಿ- ಮುಡಬಿದ್ರೆ ಕ್ಷೇತ್ರದಲ್ಲಿ ಓಡಾಡುತ್ತಿರುವಾಗಲೇ ಐವನ್ ದೆಹಲಿ ಮತ್ತು ಬೆಂಗಲೂರು ಮಟ್ಟದಲ್ಲೂ ಪ್ರಭಾವ ಬೀರುವ ಪ್ರಯತ್ನವನ್ನೂ ಮಾಡುತ್ತಿದ್ದಾರೆ. ಬಲ್ಲ ಮಾಹಿತಿಯಂತೆ ಐವನ್ ಇತ್ತೀಚೆಗೆ ಒಂದು ವಿಮಾನದ ತುಂಬ ತನ್ನದೇ ಜನರನ್ನು ಬೆಂಗಳೂರಿಗೆ ಕರೆದೊಯ್ದಿದ್ದರು. ಇದರಲ್ಲಿ ಕ್ರೈಸ್ತ ಧಾರ್ಮಿಕ ಪಂಡಿತರೆ ಹೆಚ್ಚಿದ್ದರು. ಇವರು ಐವನ್ ಏಕೆ ಮುಂದಿನ ವಿಧಾನಸಭೆ ಚುನಾವಣೆಯ ಅಭ್ಯರ್ಥಿಯಾಗಬೇಕು ಎಂಬ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಸಚಿವ ಡಾ.ಪರಮೇಶ್ವರ ಮತ್ತಿತರ ನಾಯಕರಿಗೆ ಮನವರಿಕೆ ಮಾಡಿ ಬಂದಿದ್ದಾರೆ ಎಂದು ಹೇಳಲಾಗುತ್ತಿದೆ.
ಮುಲ್ಕಿ-ಮೂಡಬಿದ್ರೆ ಕ್ಷೇತ್ರದಲ್ಲಿ ಉಳಿದೆಡೆಗಿಂತ ಹೆಚ್ಚು ಕ್ರೈಸ್ತ ಮತಗಳು ಇವೆ. ಇದರೊಂದಿಗೆ ಮುಸ್ಲಿಮ್ ಮತಗಳು ಸೇರಿದರೆ ಅಲ್ಪಸಂಖ್ಯಾತರ ಮತಗಳ ಪ್ರಮಾಣ ಬಹು ಸಂಖ್ಯೆಗೆ ಏರುತ್ತದೆ. ಕೇವಲ ಜಾತಿವಾರು ಲೆಕ್ಕಾಚಾರದಲ್ಲಿ ನೋಡಿದರೆ ಇಲ್ಲಿ ಬಿಲ್ಲವ ಮತದಾರರ ಸಂಖ್ಯೆಯೇ ದೊಡ್ಡದು. ಅದರ ಬಳಿಕದ ಸ್ಥಾನದಲ್ಲಿರುವವರು ಬಂಟ ಮತದಾರರು.
ಇಂತಹ ಲೆಕ್ಕಾಚಾರಗಳೆಲ್ಲ ಮೀರಿದ ಇನ್ನೊಂದು ಲೆಕ್ಕಾಚಾರ ಒಂದೇ ಜಿಲ್ಲೆಯಲ್ಲಿ ಇಬ್ಬರು ಕ್ರೈಸ್ತರಿಗೆ ಸ್ಪರ್ಧಿಸುವ ಅವಕಾಶ ನೀಡುತ್ತಾರೆಯೇ ಎಂಬುದು. ಐವನ್‌ರ ಮೊದಲ ಅಧ್ಯತೆ ಮಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರ. ಅಲ್ಲೀಗ ಜೆ.ಆರ್. ಲೋಬೊ ಇದ್ದಾರೆ. ಓರ್ವ ಕ್ರೈಸ್ತ ಶಾಸಕರಾಗಿರುವಾಗಲೇ ಅವರದೇ ಪಕ್ಕದ ಕ್ಷೇತ್ರದಲ್ಲಿ ಅದೃಷ್ಟದ ಹುಡುಕಾಟ ಐವನ್ ಮಾಡುತ್ತಿರುವಂತೆ ಗೋಚರಿಸುತ್ತಿದೆ.

Related posts

Leave a Reply