Header Ads
Header Ads
Breaking News

ಮೂಡುಬಿದರೆಯ ಪಡುಮಾರ್ನಾಡು ಗ್ರಾಮಸಭೆ ,ವಾರ್ಡ್ ಸದಸ್ಯ ಗೈರು-ಅಭಿವೃದ್ಧಿ ಕಾಮಗಾರಿ ವಿಳಂಬ

ಮೂಡುಬಿದಿರೆ : ತಂಡ್ರಕೆರೆ-ಹೊಪಾಲಬೆಟ್ಟು ರಸ್ತೆ, ಮೋರಿ ವ್ಯವಸ್ಥೆ ಸರಿಯಿಲ್ಲ. ಎರಡು ವರ್ಷಗಳ ಹಿಂದೆ ಮೋರಿ ಹಾಕಲಾಗಿದ್ದರೂ, ಅದರ ಕಾಮಗಾರಿ ಪೂರ್ಣಗೊಂಡಿಲ್ಲ. ಇದರಿಂದಾಗಿ ಮಳೆಗಾಲದಲ್ಲಿ ನೀರು ಚರಂಡಿಗಳಲ್ಲಿ ಹೋಗದೆ ರಸ್ತೆಗಳಲ್ಲಿ ಹರಿಯುತ್ತಿದ್ದು ವಾಹನ ಸಂಚಾರಕ್ಕೆ ತೊಂದರೆಯಾಗುತ್ತಿದೆ. ವಾರ್ಡ್ ಸಭೆಗಳಿಗೆ ಈ ಭಾಗದ ವಾರ್ಡ್ ಸದಸ್ಯ ಭಾಗವಹಿಸದಿರುವುದರಿಂದ ಅವರ ವಿರುದ್ಧ ಕ್ರಮಕೈಗೊಳ್ಳುವಂತೆ ರಾಮ್ ಕುಮಾರ್ ಸಹಿತ ಗ್ರಾಮಸ್ಥರು ಆಗ್ರಹಿಸಿದ ಘಟನೆ ಪಡುಮಾರ್ನಾಡಿನಲ್ಲಿ ನಡೆದಿದೆ.ಪಡುಮಾರ್ನಾಡು ಗ್ರಾ.ಪಂ ಅಧ್ಯಕ್ಷ ಶ್ರೀನಾಥ್ ಸುವರ್ಣ ಅಧ್ಯಕ್ಷತೆಯಲ್ಲಿ ಪಂಚಾಯತ್ ಸಭಾಭವನದಲ್ಲಿ ನಡೆದ ನಡೆದ ಗ್ರಾಮಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆಯಿತು. ಗ್ರಾಮಸ್ಥ ಜಯಪ್ರಕಾಶ್ ಕೂಡಾ ಸದಸ್ಯರ ಗೈರಿನ ಬಗ್ಗೆ ಪ್ರಸ್ತಾಪಿಸಿದರು. ಕೆಲವೊಂದು ಅಭಿವೃದ್ಧಿ ಕಾಮಗಾರಿಗಳು ಈ ಭಾಗದಲ್ಲಿ ನಡೆದಿವೆ. ಕಳೆದ ಗ್ರಾಮಸಭೆಯ ಸಂದರ್ಭ ವಾರ್ಡಿನ ಸದಸ್ಯ ವಾಸುದೇವ ಭಟ್ ಅವರು ಎರಡು ಬಾರಿ ವಾರ್ಡು ಸಭೆಯನ್ನು ಬದಲಾವಣೆ ಮಾಡಿಸಿದ್ದಾರೆ. ಸಾಮಾನ್ಯ ಸಭೆಗಳಿಗೂ ಸರಿಯಾಗಿ ಹಾಜರಾಗುತ್ತಿಲ್ಲ ಮತ್ತು ಇದೀಗ ಈ ಬಾರಿಯ ವಾರ್ಡ್ ಸಭೆಗೆ, ಗ್ರಾಮಸಭೆಗಳಿಗೆ ಭಾಗವಹಿಸದೇ ಇರುವುದರಿಂದ ಅಭಿವೃದ್ಧಿ ಕಾಮಗಾರಿಗಳ ಕ್ರಿಯಾಯೋಜನೆ ಮಾಡಲು ಸಾಧ್ಯವಾಗಿಲ್ಲ. ಆದ್ದರಿಂದ ಸದಸ್ಯರ ವಿರುದ್ಧ ಪಂಚಾಯತ್‌ನಲ್ಲಿ ನಿರ್ಣಯ ಕೈಗೊಂಡು ಕ್ರಮಕೈಗೊಳ್ಳಲು ತಾ.ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಮನವಿ ಮಾಡಲಾಗುವುದು ಎಂದು ಅಧ್ಯಕ್ಷ ಶ್ರೀನಾಥ್ ಸುವರ್ಣ ಉತ್ತರಿಸಿದರು.ಆರೋಗ್ಯ ಸೇವೆ, ತೋಟಗಾರಿಕೆ, ಶುದ್ಧ ಕುಡಿಯುವ ನೀರಿನ ಯೋಜನೆ, ಪಡಿತರ ವಿತರಣೆ ವಿಷಯ ಚರ್ಚೆ ನಡೆಯಿತು. ಗ್ರಾಮಸ್ಥ ನವೀನ್ ಮಾತನಾಡಿ ಪತ್ರಿಕೆಗಳಲ್ಲಿ ಆರೋಗ್ಯ ಸುರಕ್ಷಾ ಯೋಜನೆಯ ಕುರಿತು ಮಾಹಿತಿ, ಪ್ರಕಟಣೆಗಳು ಬರುತ್ತಿವೆ. ಆದರೆ ಗ್ರಾಮೀಣ ಪ್ರದೇಶಗಳಲ್ಲರುವ ಜನರಿಗೆ ಈ ಸೌಲಭ್ಯ ಸಮರ್ಪಕವಾಗಿ ಸಿಗುತ್ತಿಲ್ಲ. ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲೇ ಇಂತಹ ಸೌಲಭ್ಯಗಳ ಸಿಗಬೇಕು ಎಂದು ಒತ್ತಾಯಿಸಿದರು.ವಿಸ್ತರಣಾಧಿಕಾರಿ ದಯಾನಂದ ಶೆಟ್ಟಿ ನೋಡೆಲ್ ಅಧಿಕಾರಿಯಾಗಿ ಭಾಗವಹಿಸಿದರು. ಗ್ರಾಪಂ ಉಪಾಧ್ಯಕ್ಷೆ ಅರುಣಾ ಹೆಗ್ಡೆ, ಪಿಡಿಒ ರವಿ.ಬಿ ಸಹಿತ ವಿವಿಧ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದು, ಚರ್ಚೆಯಲ್ಲಿ ಪಾಲ್ಗೊಂಡರು.

Related posts

Leave a Reply