
ಮೂಡುಬಿದಿರೆ: ಮಂಗಳೂರು ತಾಲೂಕಿನಿಂದ ಮೂಡುಬಿದಿರೆಯು ಈ ತಿಂಗಳನಿಂದಲೇ ಬೇರ್ಪಟ್ಟು ಮೂಡುಬಿದಿರೆ ತಾಲೂಕು ಆಗಿ ಕಾರ್ಯನಿರ್ವಹಿಸಲಿದೆ ಮತ್ತು ಕಳೆದ ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಯುಜಿಡಿ ವ್ಯವಸ್ಥೆಗೆ ಈ ವರ್ಷದ ಬಜೆಟ್ನಲ್ಲಿ ಅನುದಾನ ಘೋಷಣೆ ಮಾಡುತ್ತೇನೆ ಎಂದು ರಾಜ್ಯದ ಮುಖ್ಯಮಂತ್ರಿ ಸಿದ್ಧರಾಮಯ್ಯವರು ಹೇಳುವ ಮೂಲಕ ಮೂಡುಬಿದಿರೆಗೆ ಭಾನುವಾರ ಎರಡು ಉತ್ತಮ “ಭಾಗ್ಯ”ಗಳನ್ನು ಕರುಣಿಸಿದ್ದಾರೆ.
ಅವರು ಭಾನುವಾರದಂದು ದಕ್ಷಿಣ ಕನ್ನಡ ಜಿಲ್ಲೆಗೆ ಅಧಿಕೃತವಾಗಿ ಭೇಟಿ ನೀಡಿ ಮೂಡುಬಿದಿರೆಯಲ್ಲಿ ಸುಮಾರು 80 ಕೋಟಿ ವೆಚ್ಚದ 13 ಕಾಮಗಾರಿಗಳಿಗೆ ಶಿಲಾನ್ಯಾಸ ಮತ್ತು 18 ಕಾಮಗಾರಿಗಳನ್ನು ಸ್ವರಾಜ್ಯ ಮೈದಾನದಲ್ಲಿ ರಿಮೋಟ್ ಕಂಟ್ರೋಲ್ ಮೂಲಕ ಉದ್ಘಾಟಿಸಿ ಮಾತನಾಡಿದರು.
ಶಾಸಕ ಕೆ. ಅಭಯಚಂದ್ರ ಜೈನ್ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ ಇಂದು ರಾಜ್ಯದಲ್ಲಿ ಕಾಂಗ್ರೆಸ್ ಉಳಿದಿದ್ದರೆ ಅದು ಸಿದ್ದರಾಮಯ್ಯನವರಿಂದ ಮಾತ್ರ. ಮೂಡುಬಿದಿರೆಯಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಅನುದಾನವನ್ನು ನೀಡುವ ಮೂಲಕ ಸದಾ ಪ್ರೋತ್ಸಾಹವನ್ನು ನೀಡಿದ್ದಾರೆ. ಇದಲ್ಲದೆ ವಿದ್ಯಾಸಿರಿಯ ಮೂಲಕ ರಾಜ್ಯದಲ್ಲೇ ಮೂಡುಬಿದಿರೆಗೆ ಹೆಚ್ಚಿನ ಅನುದಾನವನ್ನು ನೀಡಿರುವುದು ಶ್ಲಾಘನೀಯ ಎಂದು ಹೇಳಿದರು.
ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮನಾಥ ರೈ ಮಾತನಾಡಿ ಜಿಲ್ಲೆಯಲ್ಲಿ ಬಿಜೆಪಿ ಕೋಮುವಾದದ ಮೂಲಕ ಮನುಷ್ಯ-ಮನುಷ್ಯರ ಮಧ್ಯೆ ಅಪನಂಬಿಕೆಯನ್ನು ಮೂಡಿಸುತ್ತಿದೆ. ಹತ್ಯೆ ಮಾಡುವ ಹಕ್ಕು ಯಾರಿಗೂ ಇಲ್ಲ ಎಂದ ಅವರು “ಮನಸ್ಸಿಗೆ ಪ್ರೀತಿಯನ್ನು ಕೊಡುವ ಮನಸುಗಳನ್ನು ನೀಡು ಹೊರತು ಮನಸುಗಳಿಗೆ ಧ್ವೇಷವನ್ನು ನೀಡುವ ಮನಸ್ಸನ್ನು ನೀಡಬೇಡ ದೇವರೇ..” ಪ್ರಾರ್ಥಿಸಿದರು.
ಮಾಜಿ ಕೇಂದ್ರ ಸಚಿವ, ರಾಜ್ಯಸಭಾ ಸದಸ್ಯ ಆಸ್ಕರ್ ಫೆರ್ನಾಂಡಿಸ್, ರಾಜ್ಯ ಸಚಿವರಾದ ಯು.ಟಿ ಖಾದರ್, ಪ್ರಮೋದ್ ಮಧ್ವರಾಜ್, ವಿಧಾನ ಪರಿಷತ್ ಮುಖ್ಯ ಸಚೇತಕ ಐವನ್ ಡಿ’ಸೋಜಾ, ಶಾಸಕ ಮೊಯ್ದಿನ್ ಬಾವ, ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎ.ಸಿ ಭಂಡಾರಿ, ರಾಜ್ಯ ಸಹಕಾರಿ ಮಹಾಮಂಡಳದ ಅಧ್ಯಕ್ಷ ಡಾ.ಎಂ.ಎನ್ ರಾಜೇಂದ್ರ ಕುಮಾರ್, ಉಪಸ್ಥಿತರಿದ್ದರು.