
ಈ ತಿಂಗಳ ಕೊನೆಯಿಂದ ಈ ವರ್ಷದ ಕಂಬಳ ಋತು ಆರಂಭವಾಗಿಲಿದ್ದು ಅದಕ್ಕಾಗಿ ಮೂಡುಬಿದಿರೆಯ ಕಡಲಕೆರೆ ನಿಸರ್ಗಧಾಮದ ಬಳಿ ಇರುವ ಕೋಟಿ-ಚೆನ್ನಯ ಜೋಡುಕರೆ ಕಂಬಳ ಕ್ರೀಡಾಂಗಣದಲ್ಲಿ ಕುದಿ ಕಂಬಳಗಳು ನಡೆಯುತ್ತಿದ್ದು ಈ ಮೂಲಕ ಕಂಬಳದ ಕೋಣಗಳು ಮತ್ತು ಓಟಗಾರರಿಂದ ಪೂರ್ವ ತಯಾರಿ ಬಿರುಸಿನಿಂದ ನಡೆಯುತ್ತಿದೆ.
ಕಂಬಳ ಋತುಗಳು ಮುಗಿದ ನಂತರ 5-6 ತಿಂಗಳು ಕಾಲ ಕೋಣಗಳಿಗೆ ಬೇಕಾದಷ್ಟು ತಿನ್ನಿಸಿ ಚೆನ್ನಾಗಿ ಪ್ರೀತಿಯಿಂದ ಸಾಕುತ್ತಾರೆ ಇದರಿಂದಾಗಿ ಕೋಣಗಳು ದಪ್ಪ ಆಗಿರುತ್ತವೆ. ನಂತರದ ಕಂಬಳಕ್ಕೆ ಅವುಗಳನ್ನು ಮತ್ತು ಓಟಗಾರರನ್ನು ಮತ್ತೆ ಸಜ್ಜುಗೊಳಿಸಲು, ಎಳೆಯ ಕೋಣಗಳನ್ನು ಓಡಿಸಲು ಹಾಗೂ ಹಲವಾರು ಬದಲಾವಣೆಗಳಿಗೆ ಈ ಕುದಿ ಕಂಬಳಗಳು ಅನಿವಾರ್ಯವಾಗಿದೆ. ಅಲ್ಲದೆ ಯಾವ ಕೋಣವನ್ನು ಯಾವ ಕೋಣದ ಜತೆ ಓಡಿಸಿದರೆ ಉತ್ತಮ ಎಂಬುದನ್ನು ಕಂಡು ಹಿಡಿಯಲು ಇದು ಸಹಕಾರಿಯಾಗುತ್ತದೆ. ಈ ಬಾರಿ ಕೊರೋನಾ ಕಾರಣದಿಂದಾಗಿ ಕಂಬಳಗಳು ನಡೆಯುತ್ತದೋ ಇಲ್ಲವೋ ಎನ್ನುವ ಅನುಮಾನ ಇದ್ದದರಿಂದ ಡಿಸೆಂಬರ್ 15ರವರೆಗೆ ಕುದಿ ಕಂಬಳಗಳು ನಡೆದಿರಲಿಲ್ಲ. ಆದರೆ ಜನವರಿ ಕೊನೆಯ ವಾರದಲ್ಲಿ ತಾವು ಹೊಕ್ಕಾಡಿಗೋಳಿಯಲ್ಲಿ ನಡೆಸುತ್ತೇವೆಂದು ಕಂಬಳ ಸಂಘಟಕ ರಶ್ಮಿತ್ ಶೆಟ್ಟಿ ಕಂಬಳ ಸಮಿತಿಯ ಸಭೆಯಲ್ಲಿ ಹೇಳಿದ್ದೇ ತಡ ಆಗ ಬೇರೆ ಬೇರೆ ಕಡೆಯ ಕಂಬಳ ಸಂಘಟಕರು ತಾವು ಕಂಬಳವನ್ನು ಆಯೋಜಿಸುತ್ತೇವೆಂದು ಹೇಳಿದ್ದರು. ಅದರಂತೆ ಈ ಬಾರಿ 7 ಕಡೆಗಳಲ್ಲಿ ಕಂಬಳವನ್ನು ನಡೆಸುವುದೆಂದು ತೀರ್ಮಾನಿಸಲಾಗಿದ್ದು ಅದಕ್ಕಾಗಿ ವಾರದಲ್ಲಿ 2-3 ದಿನಗಳಲ್ಲಿ ಕುದಿ ಕಂಬಳಗಳು ನಡೆಯುತ್ತಿದೆ.