Header Ads
Header Ads
Breaking News

ಮೂಡುಬಿದಿರೆಯಲ್ಲಿ ರಾಜ್ಯಮಟ್ಟದ “ಆಳ್ವಾಸ್ ಮೀಡಿಯಾ ಬಝ್-2018” ಸ್ವಯಂಕೃತ ಅಪರಾಧದಿಂದ ನೀರಿನ ಸಮಸ್ಯೆ : ಪತ್ರಕರ್ತ ರಾಧಾಕೃಷ್ಣ ಭಡ್ತಿ

ಪತ್ರಿಕೋದ್ಯಮದಲ್ಲಿ ಪ್ರತಿಯೊಂದು ವಿಷಯದ ಬಗ್ಗೆ ಅಧ್ಯಯನ ಮಾಡಲು ಸಾಧ್ಯವಿರುವುದರಿಂದ ಪತ್ರಕರ್ತರು ಪ್ರತಿಯೊಂದು ವಿಷಯದ ಬಗ್ಗೆಯೂ ಜ್ಞಾನವನ್ನು ಪಡೆದುಕೊಳ್ಳಬೇಕು. ಇಂದು ನಮ್ಮ ದೇಶದಲ್ಲಿ ಮಳೆಯ ಪ್ರಮಾಣ ಕಡಿಮೆಯಾಗಿಲ್ಲ. ಆದರೆ ಅದರಲ್ಲಿ ಬದಲಾವಣೆಗಳಾಗಿವೆ. 100 ದಿನಗಳಷ್ಟು ಸಮೃದ್ಧ ಮಳೆಯಾಗುವುದರಿಂದ ನೀರಿನ ಕೊರತೆಯಿಲ್ಲ. ಜಗತ್ತು ನೀರಿನ ದಾಹಕ್ಕೆ ಒಳಗಾಗಿದೆಯೆಂದರೆ ಅದು ಸ್ವಯಂಕೃತ ಅಪರಾಧ. ನಾವು ನೀರಿನ ನಿರ್ವಹಣೆ ಮಾಡುವುದರಲ್ಲಿರುವ ಲೋಪವೇ ನೀರಿನ ಕೊರತೆಗೆ ಕಾರಣವಾಗಿದೆ ಎಂದು ಪರಿಸರವಾದಿ, ಪತ್ರಕರ್ತ ರಾಧಾಕೃಷ್ಣ ಭಡ್ತಿ ಹೇಳಿದರು.ಅವರು ಆಳ್ವಾಸ್ ಪತ್ರಿಕೋದ್ಯಮ ವಿಭಾಗ ಮತ್ತು ಸ್ನಾತಕೋತ್ತರ ಪತ್ರಿಕೋದ್ಯಮ ವಿಭಾಗದ ವತಿಯಿಂದ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ಶುಕ್ರವಾರ ನಡೆದ ರಾಜ್ಯಮಟ್ಟದ ಪರಿಸರ ದಿನಾಚರಣೆ ನಮ್ಮ ಹೆಜ್ಜೆ “ಆಳ್ವಾಸ್ ಮೀಡಿಯಾ ಬಝ್-2018” ಮಾಧ್ಯಮ ಉತ್ಸಹವನ್ನು ಗಿಡಕ್ಕೆ ನೀರು ಹಾಕುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ಕೋಲಾರದಂತಹ ಜಿಲ್ಲೆಯಲ್ಲಿರುವ ಕೆರೆಗಳನ್ನು ಹೂಳೆತ್ತಿ ನೀರು ಸಂಗ್ರಹಿಸಿದರೆ ಅಲ್ಲಿನ ನೀರಿನ ಸಮಸ್ಯೆಯನ್ನು ಬಗೆಹರಿಸಬಹುದು. ಬೆಂಗಳೂರಿನಲ್ಲಿರುವ ಕೆರೆಗಳನ್ನು ಅಭಿವೃದ್ಧಿಪಡಿಸಿ ನೀರು ಸಂಗ್ರಹಿಸಿದರೂ ಕಾವೇರಿ ನೀರು ಬೇಕಾಗಿಲ್ಲ. ಆದರೆ ಇದೆಲ್ಲವೂ ಅರ್ಥವಾಗದ ರಾಜಕಾರಣಿಗಳು ನದಿ ತಿರುವನಂತಹ ಪರಿಸರಕ್ಕೆ ಮಾರಕವಾದ ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿದ್ದಾರೆ ಎಂದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ ಟಿವಿ ನಿರೂಪಕ ಅಮರ್‌ಪ್ರಸಾದ್ ಮಾತನಾಡಿ ಈ ಭೂಮಿಯಲ್ಲಿ ಅಪಾರ ಜೀವರಾಶಿಗಳಿದ್ದರೂ ನಾವೇ ಒಡೆಯರು ಎಂಬ ರೀತಿಯಲ್ಲಿ ಭೂಮಿಯನ್ನು ನಾವು ಬಳಸುತ್ತಿದ್ದೇವೆ. ಅನ್ಯ ಜೀವರಾಶಿಗಳಿಗೂ ಬದುಕುವ ಹಕ್ಕಿದೆ ಎಂಬುದನ್ನು ಮರೆತಿದ್ದೇವೆ. ಪರಿಸರದ ಕುರಿತ ಆಳವಾದ ಅಧ್ಯಯನವನ್ನು ನಾವು ಮಾಡಬೇಕು. ಮಾಧ್ಯಮಗಳು ಸಮಾಜದ ಸಮತೋಲನವನ್ನು ಕಾಪಾಡಿಕೊಳ್ಳಬೇಕು. ದೃಶ್ಯ ಮಾಧ್ಯಮಗಳು ಸಮಾಜದ ಸಮಸ್ಯೆಗಳನ್ನು ಬಿಂಬಿಸುವ ವರದಿಗಳನ್ನು ಪ್ರಸಾರ ಮಾಡಿದರೆ ಅದಕ್ಕೆ ವೀಕ್ಷಕರ ಕೊರತೆಯಿದೆ. ಆದರೆ ಮಸಾಲೆ ಕಾರ್‍ಯಕ್ರಮಗಳಿಗೆ ವೀಕ್ಷಕರ ಸಂಖ್ಯೆ ಹೆಚ್ಚುತ್ತದೆ. ಸಮಾಜದ ಜನರ ಮನಸ್ಥಿತಿಯೂ ಬದಲಾಗಬೇಕು.ಮಾನವೀಯತೆ ಎಲ್ಲಿಯವರೆಗೆ ಇರುತ್ತದೋ ಅಲ್ಲಿಯವರೆಗೆ ಪತ್ರಿಕೋದ್ಯಮ ಇರುತ್ತದೆ ಎಂದು ಅಭಿಪ್ರಾಯಪಟ್ಟರು.
ಆಳ್ವಾಸ್ ಕಾಲೇಜಿನ ಪ್ರಾಂಶುಪಾಲ ಪ್ರೊ. ಕುರಿಯನ್ ಮಾತನಾಡಿದರು. ಇದೇ ಸಂದರ್ಭದಲ್ಲಿ ಆಳ್ವಾಸ್ ಪತ್ರಿಕೋದ್ಯಮ ವಿಭಾಗವು ರಚಿಸಿದ “ಶತಮಾನದ ನೆಲ ಸಂತ ಮಿಜಾರುಗುತ್ತು ಆನಂದ ಆಳ್ವ” ಸಾಕ್ಷ್ಯ ಚಿತ್ವವನ್ನು ಬಿಡುಗಡೆಗೊಳಿಸಲಾಯಿತು. ಹಾಗೂ ಪತ್ರಿಕೋದ್ಯಮ ವಿದ್ಯಾರ್ಥಿಗಳು ಹೊರ ತಂದಿರುವ ಆಳ್ವಾಸ್ ಮಾಧ್ಯಮ, ಆಳ್ವಾಸ್ ವಾರ್ಷಿಕ ಸಂಚಿಕೆ, ಆಳ್ವಾಸ್ ವಿಜನ್, ಆಳ್ವಾಸ್ ಮಿರರ್ ಮತ್ತು ಸುದ್ದಿಮನೆ ಸಂಚಿಕೆಗಳನ್ನು ಬಿಡುಗಡೆಗೊಳಿಸಲಾಯಿತು.
ಪತ್ರಿಕೋದ್ಯಮ ಸ್ನಾತಕೋತ್ತರ ವಿಭಾಗದಲ್ಲಿ ರ್‍ಯಾಂಕ್‌ಗಳಿಸಿದ ದಿವಿತ್ ಎಸ್.ಕೋಟ್ಯಾನ್, ಶ್ರೀ ಗೌರಿ ಜೋಶಿ, ರಚನಾ, ಮೇಘನಾ, ರಕ್ಷಿತಾ ಅವರನ್ನು ಸನ್ಮಾನಿಸಲಾಯಿತು. ವಿದ್ಯಾರ್ಥಿ ಮಂಜುನಾಥ್ ಹೊರತಂದ “ಮೌನ ಮೌನ” ಧ್ವನಿ ಸುರುಳಿಯನ್ನು ಬಿಡುಗಡೆಗೊಳಿಸಲಾಯಿತು. ಮಿಜಾರು ಗುತ್ತು ಆನಂದ ಆಳ್ವ, ಟ್ರಸ್ಟಿಗಳಾದ ವಿವೇಕ್ ಆಳ್ವ, ಮಾಜಿ ಸಚಿವ ಕೆ. ಅಮರನಾಥ ಶೆಟ್ಟಿ, ಜಯಶ್ರೀ ಅಮರನಾಥ ಶೆಟ್ಟಿ, ಉದ್ಯಮಿ ಕೆ. ಶ್ರೀಪತಿ ಭಟ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ವಿಭಾ ಸ್ವಾಗತಿಸಿದರು. ಪತ್ರಿಕೋದ್ಯಮ ಸ್ನಾತಕೋತ್ತರ ವಿಭಾಗದ ಮುಖ್ಯಸ್ಥೆ ಡಾ. ಮೌಲ್ಯ ಜೀವನ್‌ರಾಮ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಶ್ವಿನಿ ಜೈನ್ ಕಾರ್ಯಕ್ರಮ ನಿರ್ವಹಿಸಿದರು.

Related posts

Leave a Reply