
ಮೂಡುಬಿದಿರೆ ತಾಲೂಕಿನ ಶಿರ್ತಾಡಿ, ಪಡುಮಾರ್ನಾಡು, ಕಲ್ಲಮುಂಡ್ಕೂರು, ಹೊಸಬೆಟ್ಟು, ನೆಲ್ಲಿಕಾರು ಗ್ರಾಮ ಪಂಚಾಯಿತಿಗಳ ಅಧ್ಯಕ್ಷ-ಉಪಾಧ್ಯಕ್ಷರು ಆಯ್ಕೆಯಾಗಿದ್ದಾರೆ.
ಶಿರ್ತಾಡಿ ಪಂಚಾಯಿತಿ ಚುನಾವಣೆಯಲ್ಲಿ ಕಾಂಗ್ರೆಸ್ 7 ಹಾಗೂ ಬಿಜೆಪಿ 7 ಸ್ಥಾನಗಳನ್ನು ಗೆದ್ದ ಸಮಬಲ ಸಾಧಿಸಿದ್ದರೆ ಪಡುಕೊಣಾಜೆ ಕ್ಷೇತ್ರದಿಂದ ಪಕ್ಷೇತರರಾಗಿ ಸ್ಪರ್ಧಿಸಿ ಆಯ್ಕೆಯಾದ ಸಂತೋಷ್ ಕೋಟ್ಯಾನ್ ಮತ ನಿರ್ಣಾಯಕವಾಗಿತ್ತು. ಸಂತೋಷ್ ಕೋಟ್ಯಾನ್ಗೆ ಅಧ್ಯಕ್ಷ ಸ್ಥಾನದ ಭರವಸೆಯನ್ನು ಕಾಂಗ್ರೆಸ್ ನೀಡಿದ್ದರಿಂದ ಅವರು ಕಾಂಗ್ರೆಸ್ ಬೆಂಬಲ ಪಡೆದು ಒಂದು ಮತದ ಅಂತರದಿಂದ ಗೆದ್ದು ಅಧ್ಯಕ್ಷರಾಗಿದ್ದಾರೆ. ಪರಿಶಿಷ್ಟ ಪಂಗಡ ಮೀಸಲು ಅಭ್ಯರ್ಥಿ ಕಾಂಗ್ರೆಸ್ನಲ್ಲಿ ಇಲ್ಲದಿದ್ದುದರಿಂದ ಬಿಜೆಪಿಯ ಶಶಿಕಲಾ ಉಪಾಧ್ಯಕ್ಷರಾಗಿ ಅವಿರೋಧ ಆಯ್ಕೆಯಾದರು.
18 ಸದಸ್ಯ ಬಲವಿರುವ ಪಡುಮಾರ್ನಾಡು ಪಂಚಾಯಿತಿ ಅಧ್ಯಕ್ಷ ಚುನಾವಣೆಯಲ್ಲಿ ಬಿಜೆಪಿಯ ಸಿ.ಎಸ್ ಕಲ್ಯಾಣಿ ಅವರು ಕಾಂಗ್ರೆಸ್ನ ಪ್ರಮೀಳ ಜೆ ಅವರ ವಿರುದ್ಧ 10-8 ಮತಗಳ ಅಂತರದಲ್ಲಿ ಜಯಗಳಿಸಿದರು. ಉಪಾಧ್ಯಕ್ಷ ಸ್ಥಾನ ಚುನಾವಣೆಯಲ್ಲಿ ಕಾಂಗ್ರೆಸ್ನ ಅಭಿನಂದನ್ ಬಲ್ಲಾಳ್ ಮತ್ತು ಬಿಜೆಪಿಯ ಶ್ರೀನಾಥ್ ಸುವರ್ಣ ತಲಾ 9 ಮತಗಳನ್ನು ಪಡೆದು ಫಲಿತಾಂಶ ಟೈ ಆಯಿತು. ನಂತರ ಚೀಟಿ ಎತ್ತಿದಾಗ ಅಭಿನಂದನ್ ಬಲ್ಲಾಳ್ಗೆ ಅದೃಷ್ಟ ಒಲಿಯಿತು.
16 ಸದಸ್ಯ ಸ್ಥಾನಗಳನ್ನು ಹೊಂದಿರುವ ಕಲ್ಲಮುಂಡ್ಕೂರು ಪಂಚಾಯಿತಿನಲ್ಲಿ ಬಿಜೆಪಿಯ ಕೇಶವ ಪೂಜಾರಿ ಅಧ್ಯಕ್ಷರಾಗಿ ಹಾಗೂ ಅದೇ ಪಕ್ಷದ ಕಲ್ಯಾಣಿ ಉಪಾಧ್ಯಕ್ಷರಾಗಿ ಚುನಾಯಿತರಾದರು.
ಹೊಸಬೆಟ್ಟು ಗ್ರಾಮ ಪಂಚಾಯಿತಿಯಲ್ಲಿ ಕಾಂಗ್ರೆಸ್ನ ಮೀನಾಕ್ಷಿ ಅಧ್ಯಕ್ಷರಾಗಿ ಹಾಗೂ ಅದೇ ಪಕ್ಷದ ರೆಕ್ಸಾನ್ ಪಿಂಟೊ ಅವರು ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ನೆಲ್ಲಿಕಾರು ಪಂಚಾಯಿತಿಯ ಅಧ್ಯಕ್ಷೆಯಾಗಿ ಬಿಜೆಪಿಯ ಸುಶೀಲಾ, ಉಪಾಧ್ಯಕ್ಷರಾಗಿ ಪಕ್ಷೇತರ ಅಭ್ಯರ್ಥಿ ಶಶಿಧರ್ ಆಯ್ಕೆಯಾಗಿದ್ದಾರೆ.