Header Ads
Header Ads
Breaking News

ಮೂಡುಬಿದಿರೆ ಘನತ್ಯಾಜ್ಯ ಘಟಕಕ್ಕೆ ಹೆಚ್ಚುವರಿ ಜಾಗ: ಪೌರಾಡಳಿತ ಸಚಿವ ಈಶ್ವರ ಖಂಡ್ರೆ ಭರವಸೆ

 

ಮೂಡುಬಿದಿರೆ: ಪುರಸಭೆಯವರ ಬೇಡಿಕೆಯನ್ನು ಪರಿಗಣಿಸಿ ಮೂಡುಬಿದಿರೆ ಘನತ್ಯಾಜ್ಯ ಘಟಕಕ್ಕೆ ಹೆಚ್ಚುವರಿ ೯ ಎಕರೆ ಜಾಗವನ್ನು ಒದಗಿಸುವಲ್ಲಿ ಸರ್ಕಾರ ಗಮನ ತರಲಾಗುವುದು. ಈಗಿರುವ ಘನತ್ಯಾಜ್ಯ ಘಟಕದ ಸುತ್ತಮುತ್ತಲಿರುವ ಸರ್ಕಾರಿ ಜಾಗ ಡೀಮ್ಡ್ ಫಾರೆಸ್ಟ್‌ಗೆ ಬರುವುದರಿಂದ ಜಿಲ್ಲಾಧಿಕಾರಿಯವರ ಜೊತೆ ಸಮಾಲೋಚಿಸಿ ಮುಂದುವರಿಯುವುದು. ಇಲ್ಲವೇ ಇದಕ್ಕೆ ಪರ್ಯಾಯವಾಗಿ ಇತರ ಕಡೆಗಳಲ್ಲಿ ಸರ್ಕಾರಿ ಜಾಗಗಳು ಲಭ್ಯವಿದ್ದರೆ ಘನತ್ಯಾಜ್ಯ ಘಟಕಕ್ಕೆ ಹೆಚ್ಚುವರಿ ಜಾಗ ಮಂಜೂರು ಮಾಡಲು ಪ್ರಯತ್ನಿಸಲಾಗುವುದು ಎಂದು ರಾಜ್ಯ ಪೌರಾಡಳಿತ ಸಚಿವ ಈಶ್ವರ ಖಂಡ್ರೆ ಭರವಸೆ ನೀಡಿದರು.
ಕರಿಂಜೆಯಲ್ಲಿರುವ ಘನತ್ಯಾಜ್ಯ ಘಟಕಕ್ಕೆ ಭೇಟಿ ನೀಡಿ, ಬಯೋಗ್ಯಾಸ್ ವ್ಯವಸ್ಥೆ ಚಾಲನೆ ನೀಡಿ ಮಾತನಾಡಿದರು.
ಘನತ್ಯಾಜ್ಯದ ಕಾರ್ಯವೈಖರಿಯನ್ನು ವೀಕ್ಷಿಸಿ ಹಾಗೂ ಅಧಿಕಾರಿಗಳಿಂದ ಮಾಹಿತಿ ಪಡೆದ ಅವರು ಮೂಡುಬಿದಿರೆ ಘನತ್ಯಾಜ್ಯ ಘಟಕವು ರಾಜ್ಯದಲ್ಲೇ ಮಾದರಿಯಾಗಿ ಕಾರ್ಯಾಚರಿಸುತ್ತಿದೆ ಎಂದು ಶ್ಲಾಘಿಸಿದರು.


ಮೂಡುಬಿದಿರೆ ಪುರಸಭೆಯನ್ನು ನಗರಸಭೆಯನ್ನಾಗಿ ಮೇಲ್ದರ್ಜೆಗೇರಿಸುವಂತೆ ಮೂಡುಬಿದಿರೆ ಶಾಸಕ ಕೆ.ಅಭಯಚಂದ್ರ ಜೈನ್ ಮನವಿ ಸಲ್ಲಿಸಿದರು. ನಗರಸಭೆಯಾಗಿ ಮೇಲ್ದರ್ಜೆಗೇರಿಸಲು ೨೦೧೧ರ ಜನಗಣತಿ ಪ್ರಕಾರ ೫೦ ಸಾವಿರಕ್ಕೂ ಮೇಲ್ಪಟ್ಟು ಜನಸಂಖ್ಯೆ ಇರಬೇಕು. ಆದರೆ ಇಲ್ಲಿ ೨೬ ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿರುವುದರಿಂದ ಸರ್ಕಾರ ಮಟ್ಟದಲ್ಲಿ ಅವಕಾಶವಿದ್ದಲ್ಲಿ ನಗರಸಭೆಯನ್ನಾಗಿಸುವಲ್ಲಿ ಪ್ರಯತ್ನ ಮಾಡಲಾಗುವುದು ಎಂದು ಖಂಡ್ರೆ ಭರವಸೆ ನೀಡಿದರು. ಬಯಲು ಶೌಚಾಲಯ ಮುಕ್ತವಾಗಿಸಲು ಕೇಂದ್ರ ಸರ್ಕಾರ ನೀಡುತ್ತಿರುವ ಅನುದಾನ ಸಾಕಾಗುತ್ತಿಲ್ಲ. ಶೌಚಗೃಹ ನಿರ್ಮಾಣಕ್ಕೆ ರಾಜ್ಯ ಸರ್ಕಾರವೇ ಅನುದಾನ ಭರಿಸಲಿದ್ದು, ಮೂಡುಬಿದಿರೆಯಲ್ಲಿ ಅಂತಹ ಬೇಡಿಕೆಯಿದ್ದಲ್ಲಿ ಇಲಾಖೆಯ ಗಮನಕ್ಕೆ ತನ್ನಿ ಎಂದು ತಿಳಿಸಿದರು.

ಮೂಡುಬಿದಿರೆ ಪುರಸಭಾ ಕಾರ್ಯಾಲಯ ಹಾಗೂ ಕರಿಂಜೆ ಘನತ್ಯಾಜ್ಯ ಘಟಕಕ್ಕೆ ಭೇಟಿ ನೀಡುವ ಸಂದರ್ಭ ಶಾಸಕ ಕೆ.ಅಭಯಚಂದ್ರ ಜೈನ್, ಮೂಡುಬಿದಿರೆ ಪುರಸಭಾ ಅಧ್ಯಕ್ಷೆ ಹರಿಣಾಕ್ಷಿ, ಉಪಾಧ್ಯಕ್ಷ ವಿನೋದ್ ಸೆರಾವೊ, ಸ್ಥಾಯಿ ಸಮಿತಿ ಅಧ್ಯಕ್ಷ ಕೊರಗಪ್ಪ, ಮೂಡಾ ಅಧ್ಯಕ್ಷ ಸುರೇಶ್ ಪ್ರಭು, ಪುರ ಸದಸ್ಯರಾದ ಪಿ.ಕೆ ಥೋಮಸ್, ರತ್ನಾಕರ ದೇವಾಡಿಗ, ಸುರೇಶ್ ಕೋಟ್ಯಾನ್, ಶಕುಂತಳಾ ದೇವಾಡಿಗ ಮೊದಲಾದವರಿದ್ದರು.

ವರದಿ: ಪ್ರೇಮಶ್ರೀ ಮೂಡಬಿದರೆ

Related posts

Leave a Reply