Header Ads
Header Ads
Breaking News

ಮೂಡುಬಿದಿರೆ ಮಾರುಕಟ್ಟೆ ಟೆಂಡರ್ ಪ್ರಕ್ರಿಯೆ ಪೂರ್ಣ, ಪುರಸಭಾಧಿವೇಶನದಲ್ಲಿ ಸದಸ್ಯರ ಗಮನಕ್ಕೆ ತಂದ ಮುಖ್ಯಾಧಿಕಾರಿ


ಖಾಸಗಿ ಸಹಭಾಗಿತ್ವದಲ್ಲಿ ಮೂಡುಬಿದಿರೆಯಲ್ಲಿ ಸುಸಜ್ಜಿತ ಮಾರುಕಟ್ಟೆ ನಿರ್ಮಿಸಲು ಇ-ಪ್ರೊಕ್ಯೂರ್‌ಮೆಂಟ್ ಮುಖಾಂತರ ಟೆಂಡರ್ ಆಹ್ವಾನಿಸಿದ್ದು, ಅದರಲ್ಲಿ ಅತೀ ಹೆಚ್ಚು ೧.೦೭ ಕೋಟಿ ವಾರ್ಷಿಕ ಲೀಸ್ ಬಾಡಿಗೆ ನೀಡಲು ರಮಾಂಶಿ ಇನ್ಫ್ರಾಸ್ಟ್ರಕ್ಚರ್ ಕಂಪೆನಿಯು ಅರ್ಹರಾಗಿದ್ದು, ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದೆ ಎಂದು ಪುರಸಭಾ ಮುಖ್ಯಾಧಿಕಾರಿ ಶೀನ ನಾಯ್ಕ್ ತಿಳಿಸಿದರು.
ಕಸ ವಿಲೇವಾರಿ, ನೀರಿನ ಸದ್ಬಳಕೆ, ನೀರಾವರಿ ವ್ಯವಸ್ಥೆಯ ಕುರಿತು ಮಕ್ಕಳಲ್ಲಿ ಜಾಗೃತಿ ಮೂಡಿಸುವ ನಿಟ್ಟನಲ್ಲಿ ೫,೬,೭ನೇ ತರಗತಿಯ ಪಠ್ಯದಲ್ಲಿ ಪಾಠವಾಗಿ ಬೋಧನೆ ಮಾಡುವಂತೆ ಪ್ರಧಾನ ಮಂತ್ರಿ, ರಾಜ್ಯದ ಮುಖ್ಯಮಂತ್ರಿ, ಶಿಕ್ಷಣ ಸಚಿವರಿಗೆ ಮನವಿ ಸಲ್ಲಿಸುವಂತೆ ನಿರ್ಣಯ ತೆಗೆದುಕೊಳ್ಳಬೇಕು. ಕೇರಳದಲ್ಲಿ ಮೊಬೈಲ್ ಟವರ್‌ಗಳು ಬಿದ್ದು ದೊಡ್ಡ ಅನಾಹುತಗಳಾಗಿವೆ. ಮುನ್ನೆಚರಿಕೆ ಕ್ರಮವಾಗಿ ಮೂಡುಬಿದಿರೆ ಸ್ವರಾಜ್ಯ ಮೈದಾನದಲ್ಲಿರುವ ಟವರ್‌ಗೆ ಪೈಂಟ್ ಮಾಡುವುದು, ಸರಿಯಾದ ರೀತಿಯಲ್ಲಿ ನಿರ್ವಹಣೆ ಮಾಡುವಂತೆ ಬಿ‌ಎಸ್‌ಎನ್‌ಎಲ್‌ನವರಿಗೆ ಮನವಿ ಮಾಡಬೇಕು. ಮುಂದಿನ ೫೦ ವರ್ಷಗಳ ಮೂಡುಬಿದಿರೆ ಅಭಿವೃದ್ಧಿ ಕಾರ್ಯಗಳನ್ನು ಮುಂದಿಟ್ಟುಕೊಂಡು, ಒಂದು ಸಮಿತಿಯನ್ನು ರಚಿಸುವುದು ಉತ್ತಮ ಎಂದು ಪುರಸಭಾ ಹಿರಿಯ ಸದಸ್ಯ ಪಿಕೆ ಥೋಮಸ್ ಸಭೆಯಲ್ಲಿ ಸಲಹೆ ನೀಡಿದರು.
ಕೋಟೆಬಾಗಿಲಿನಲ್ಲಿರುವ ಟಿಪ್ಪು ಸುಲ್ತಾನ್ ಕಾಲದ ಐತಿಹಾಸಿಕ ಕೋಟೆಯನ್ನು ಕೆಡವಿ ಮನೆ ಹಾಗೂ ಫ್ಲ್ಯಾಟ್‌ಗಳು ನಿರ್ಮಾಣಗೊಂಡರೂ ಪುರಸಭಾ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಜಿಲ್ಲಾಧಿಕಾರಿಯವರಿಗೆ ಮನವಿ ಮಾಡಿದರೂ ಯಾವುದೇ ಸ್ಪಂದನೆಯಿಲ್ಲ. ಪುರಸಭೆ ಅಥವಾ ಜಿಲ್ಲಾಧಿಕಾರಿಯವರು ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಜಿಲ್ಲಾಧಿಕಾರಿ ಕಚೇರಿಯ ಎದುರು ಹೋರಾಟ ನಡೆಸುತ್ತೇವೆ ಎಂದು ಪುರಸಭಾ ಸದಸ್ಯೆ ರಮಣಿ ಅವರು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ವಿದ್ಯಾಗಿರಿಯಿಂದ ಮೂಡುಬಿದಿರೆ ಬಸ್ ನಿಲ್ದಾಣದವರೆಗೆ ಡಿವೈಡರ್ ನಿರ್ಮಾಣ, ಜೈ ಪೇಟೆಯ ವಾರ್ಡ್ ನಂ. ೯ರಲ್ಲಿ ಸಾವಿರ ಕಂಬದ ಬಸದಿ ಬಳಿಯ ಕೊಂಡೆ ಸ್ಟ್ರಿಟ್, ಶೆಟ್ರ ಬಸದಿ ರಸ್ತೆಗಳ ಬದಿಗೆ ಕಾಂಕ್ರೀಟು ಚರಂಡಿ ರಚನೆ, ಜೈನ ಬಸದಿ ರಸ್ತೆ ವಾರ್ಡ್ ಸಂಖ್ಯೆ ೧೦ರಲ್ಲಿ ಕಾಂಕ್ರೀಟು ಚರಂಡಿಗೆ ಕಾಂಕ್ರೀಟು ಸ್ಲಾಬ್ ಅಳವಡಿಸುವುದು, ವಾರ್ಡ್ ನಂ.೯ರಲ್ಲಿ ಅಮ್ಮನವರ ಬಸಸದಿಯ ಪ್ರದೇಶದ ರಸ್ತೆ ಇಕ್ಕೆಲಗಳಿಗೆ ಇಂಟರ್‌ಲಾಕ್ ಅಳವಡಿಕೆ, ಶ್ರೀ ಮಹಾವೀರ ಕಾಲೇಜಿನಿಂದ ರೋಟರಿ ಶಾಲೆಯವರೆಗೆ ಡಬ್ಬಲ್ ರೋಡ್ ರಚನೆ ಸಹಿತ ವಿವಿಧ ಕಾಮಗಾರಿಗಳಿಗೆ ಶ್ರವಣಬೆಳಗೊಳ ಮಹಾಮಸ್ತಾಕಾಭಿಷೇಕ ವಿಶೇಷ ಅನುದಾನದಲ್ಲಿ ಹಣ ಮಂಜೂರು ಮಾಡುವಂತೆ ಮಹಾಮಸ್ತಾಕಾಭಿಷೇಕ ಸಮಿತಿಯ ಸಹ ಅಧ್ಯಕ್ಷ ಕೆ. ಅಭಯಚಂದ್ರ ಜೈನ್ ಹಾಹೂ ಡಿಸಿಗೆ ಮನವಿ ಮಾಡಲು ಪುರಸಭೆಯಿಂದ ಸೂಕ್ತ ನಿರ್ಣಯ ತೆಗೆದುಕೊಳ್ಳಬೇಕೆಂದು ಬಾಹುಬಲಿ ಪ್ರಸಾದ್ ಸಲಹೆ ನೀಡಿದರು.
ಘನತ್ಯಾಜ್ಯ ಘಟಕದ ಕಾರ್ಮಿಕರಿಗೆ ಸಕಾಲದಲ್ಲಿ ಸಂಬಳ ಆಗುತ್ತಿಲ್ಲ. ಅವರ ಸಂಬಳದ ವಿವರದ ದಾಖಲೆಯನ್ನು ತೋರಿಸಿ ಎಂದು ಸದಸ್ಯ ಹನೀಫ್ ಹಾಗೂ ಪ್ರೇಮ ಸಾಲ್ಯಾನ್ ಒತ್ತಾಯಿಸಿದರು. ಮನೆಗಳಿಗೆ ಕಟ್ಟಡ ಸಂಖ್ಯೆ ಫಲಕ ಅಳವಡಿಸುವುದೆಂದು ಚರ್ಚಿಸಲಾಯಿತು. ಪುರಸಭಾ ಬಯಲು ಶೌಚ ಮುಕ್ತವಾಗಿಸುವ ನಿಟ್ಟಿನಲ್ಲಿ ಯಾವೆಲ್ಲ ವಾರ್ಡಿನಲ್ಲಿ ಶೌಚಾಲಯಗಳಿಲ್ಲ ಎನ್ನುವುದನ್ನು ಆಳ್ವಾಸ್ ಸಮಾಜ ಕಾರ್ಯ ವಿಭಾಗದ ವಿದ್ಯಾರ್ಥಿಗಳು ಸರ್ವೇ ನಡೆಸಿದ್ದಾರೆ. ಈಗ ವಿದ್ಯಾರ್ಥಿಗಳಿಗೆ ಪರೀಕ್ಷೆಯಿರುವುದರಿಂದ ಈ ಕೆಲಸ ಸ್ಥಗಿತಗೊಂಡಿದೆ. ಎನ್‌ಜಿ‌ಒ ಒಂದನ್ನು ಈ ಕುರಿತು ಸಂಪರ್ಕಿಸಿದರು ಯಾವುದೇ ಪ್ರಯೋಜನವಾಗಿಲ್ಲ ಎಂದು ಪರಿಸರ ಅಧಿಕಾರಿ ಶಿಲ್ಪಾ ಪ್ರಸ್ತಾಪಿಸಿದರು. ಪುರಸಭಾ ಸದಸ್ಯರೇ ಈ ಕುರಿತು ಸರ್ವೇ ನಡೆಸಿಕೊಡಬಹುದೆಂದು ಪುರಸಭಾ ಸದಸ್ಯ ಬಾಹುಬಲಿ ಪ್ರಸಾದ್ ಸಲಹೆ ನೀಡಿದರು.
ಮೂಡುಬಿದಿರೆಯಲ್ಲಿ ವಿಶೇಷವಾಗಿ ಇರುವ ಜೀವ ವೈವಿಧ್ಯ ಬಗ್ಗೆ ಗುರುತಿಸಿ ದಾಖಲಿಸುವಂತೆ ಜೀವ ವೈವಿಧ್ಯ ಸಮಿತಿ ರಚನೆ ಮಾಡುವಂತೆ ಕರ್ನಾಟಕ ಜೀವ ವೈವಿಧ್ಯ ಮಂಡಳಿ ಇಲಾಖೆಯಿಂದ ಬಂದಿರುವ ಪತ್ರವನ್ನು ಪರಿಸರ ಅಧಿಕಾರಿ ಶಿಲ್ಪಾ ಓದಿದರು. ಕರ್ನಾಟಕ ರಾಜ್ಯ ಮಕ್ಕಳ ರಕ್ಷಣಾ ನೀತಿ ೨೦೧೬ರನ್ವಯ ಪುರಸಭಾ ಮಟ್ಟದಲ್ಲಿ ಹಾಗೂ ವಾರ್ಡ್ ಮಟ್ಟದಲ್ಲಿ ಸಮಿತಿಯನ್ನು ರಚಿಸುವ ಬಗ್ಗೆ ಸಭೆಯಲ್ಲಿ ಪ್ರಸ್ತಾಪಿಸಲಾಯಿತು. ನೀರು, ಬೀದಿ ದೀಪ ಇತ್ಯಾದಿ ಮಾತುಕತೆ ಕೂಡ ನಡೆದವು.

Related posts

Leave a Reply