Breaking News

ಮೂಡುಬಿದಿರೆ ಸಾವಿರ ಕಂಬ ಬಸದಿಗೆ ಜಿಲ್ಲಾಧಿಕಾರಿ ಭೇಟಿ, ಜೈನ ಮಠಕ್ಕೆ ಮೂಲ ಸೌಕರ್ಯ ಒದಗಿಸಲು ಪರಿಶೀಲನೆ

ಶ್ರವಣಬೆಳಗೊಳದಲ್ಲಿ ನಡೆಯುವ ಮಹಾಮಸ್ತಕಾಭಿಷೇಕದ ಹಿನ್ನೆಲೆಯಲ್ಲಿ ಯಾತ್ರಾರ್ಥಿಗಳ ಅನುಕೂಲಕ್ಕೆ ಇತಿಹಾಸ ಪ್ರಸಿದ್ಧ ಸಾವಿರ ಕಂಬದ ಬಸದಿ ಹಾಗೂ ಜೈನ ಮಠಕ್ಕೆ ಮೂಲ ಸೌಕರ್‍ಯಗಳನ್ನು ಒದಗಿಸುವ ನಿಟ್ಟಿನಲ್ಲಿ ದಕ ಜಿಲ್ಲಾಧಿಕಾರಿ ವಿವಿಧ ಇಲಾಖಾಧಿಕಾರಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಸಾವಿರ ಕಂಬದ ಬಸದಿಯ ಪ್ರಾಂಗಣಕ್ಕೆ ಹಾಸುಕಲ್ಲು ಹಾಸುವುದು, ಆಧುನಿಕ ತಂತ್ರಜ್ಞಾನದ ವಿದುದ್ದೀಪ ಅಳವಡಿಕೆ, ಸೋಲಾರ್ ದೀಪ, ಕುಡಿಯುವ ನೀರಿನ ಸೌಲಭ್ಯ, ಶೌಚಾಲಯ, ವಾಹನ ನಿಲುಗಡೆ ಇನ್ನಿತರ ಮೂಲ ಸೌಕರ್‍ಯಗಳನ್ನು ಒದಗಿಸುವ ಬಗ್ಗೆ ಜಿಲ್ಲಾಧಿಕಾರಿ ಅವರು ಜೈನ ಮಠದ ಭಟ್ಟಾರಕ ಚಾರುಕೀರ್ತಿ ಸ್ವಾಮೀಜಿ ಮತ್ತು ಶಾಸಕ ಅಭಯಚಂದ್ರ ಜೈನ್ ಜತೆ ಚರ್ಚಿಸಿದರು. ಶೌಚಾಲಯ ಮತ್ತು ವಾಹನ ನಿಲುಗಡೆಗೆ ಮಠದ ವತಿಯಿಂದ ಸ್ಥಳಾವಕಾಶ ನೀಡುವುದಾಗಿ ಸ್ವಾಮೀಜಿ ಜಿಲ್ಲಾಧಿಕಾರಿಗಳವರಿಗೆ ತಿಳಿಸಿದರು.
ಪ್ರವಾಸಿಗರನ್ನು ಆಕರ್ಷಿಸಲು ಸಾವಿರ ಕಂಬದ ಬಸದಿಗೆ ಹೊಸ ತಂತ್ರಜ್ಞಾನದ ವಿದ್ಯುದ್ದೀಪ ಅಳವಡಿಸುವಂತೆ ಇದೇ ಸಂದರ್ಭ ಜಿಲ್ಲಾಧಿಕಾರಿ ಅಧಿಕಾರಿಗಳಿಗೆ ಸೂಚಿಸಿದರು. ಈ ಬಗ್ಗೆ ೧೫ ದಿನಗಳೊಳಗೆ ತನಗೆ ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಈ ಎಲ್ಲಾ ಮೂಲ ಸೌಕರ್‍ಯಗಳಿಗೆ ಸರಕಾರದಿಂದ ರೂ. ೧ ಕೋಟಿ ವೆಚ್ಚದ ಅನುದಾನ ಬಿಡುಗಡೆಗೆ ಪ್ರಯತ್ನಿಸುವುದಾಗಿ ತಿಳಿಸಿದರು. ತಹಶಿಲ್ದಾರ್ ಮುಹಮ್ಮದ್ ಇಸಾಕ್, ಧಾರ್ಮಿಕ ದತ್ತಿ ಇಲಾಖೆಯ ಸಹಾಯಕ ಆಯುಕ್ತೆ ಪ್ರಮೀಳ, ಪ್ರಾಚ್ಯವಸ್ತು ಇಲಾಖೆಯ ಅಧಿಕಾರಿ ಧನಲಕ್ಷ್ಮಿ, ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ಉದಯ ಕುಮಾರ್ ಶೆಟ್ಟಿ, ಇಂಟ್ಯಾಕ್ ಸಂಸ್ಥೆಯ ರವೀಂದ್ರ, ಮೂಡಾ ಅಧ್ಯಕ್ಷ ಸುರೇಶ್ ಪ್ರಭು, ಪುರಸಭೆ ಮುಖ್ಯಾಧಿಕಾರಿ ಶೀನ ನಾಯಕ್, ಬಸದಿ ಮೊಕ್ತೇಸರ ಆನಡ್ಕ ದಿನೇಶ್ ಕುಮಾರ್, ಪಟ್ಣಶೆಟ್ಟಿ ಸುಧೇಶ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು

Related posts

Leave a Reply