Header Ads
Header Ads
Header Ads
Breaking News

ಮೂಡುಬಿದಿರೆ ಹೆದ್ದಾರಿ ದುರಸ್ಥಿ ಪಡಿಸದಿದ್ದರೆ ಸಂಚಾರ ಬಂದ್ ಅಕ್ಟೋಬರ್ 10 ರೊಳಗೆ ಸಂಚಾರ ಬಂದ್, ಪಾದಯಾತ್ರೆ ಮೂಡಬಿದರೆಯಲ್ಲಿ ಐವನ್ ಡಿಸೋಜಾ ಎಚ್ಚರಿಕೆ

ಮೂಡುಬಿದಿರೆ: ಮಂಗಳೂರು – ಸೋಲಾಪುರಕ್ಕೆ ಹೋಗುವ ರಾಷ್ಟ್ರೀಯ ಹೆದ್ದಾರಿಯ ಮೂಡುಬಿದಿರೆ ರಸ್ತೆ ಹೊಂಡ ಗುಂಡಿಗಳೆದ್ದಿದ್ದು ವಾಹನ ಸಂಚಾರಕ್ಕೆ ಆಯೋಗ್ಯವಾಗಿದೆ. ಅ. 10 ರೊಳಗೆ ದುರಸ್ಥಿಪಡಿಸದಿದ್ದಲ್ಲಿ ರಸ್ತೆ ಸಂಚಾರ ಬಂದ್ ನಡೆಸಿ ವಿವಿಧ ಸಂಘಟನೆಗಳ ಸಹಯೋಗದೊಂದಿದೆ ಮೂಡುಬಿದಿರೆಯಿಂದ ಮಂಗಳೂರಿಗೆ ಪಾದಯಾತ್ರೆ ನಡೆಸುವುದಾಗಿ ವಿಧಾನ ಪರಿಷತ್ ಮುಖ್ಯ ಸಚೇತಕ ಐವನ್ ಡಿಸೋಜ ಹೇಳಿದರು.

ಅವರು ಮಂಗಳವಾರದಂದು ಮೂಡುಬಿದಿರೆಯಲ್ಲಿರುವ ಅವರ ಕಛೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ರಾಷ್ಟ್ರೀಯ ಹೆದ್ದಾರಿ ಯೋಜನೆಂiiನ್ನು ಜಾರಿಗೊಳಿಸಲು ನಿರ್ಧರಿಸಿದ್ದು ಕಾಮಗಾರಿಯ ಯೋಜನೆ ಅನೇಕ ವರ್ಷಗಳಿಂದ ನೆನೆಗುದಿಗೆ ಬಿದ್ದಿದೆ. ಚತುಷ್ಪಥ ರಸ್ತೆ ನಿರ್ಮಾಣ ಯೋಜನೆಯಡಿ ರಸ್ತೆಯು ಯಾವ ದಿಕ್ಕಿನಲ್ಲಿ ಸಾಗಬೇಕು ಎಂಬ ಬಗ್ಗೆ ಇನ್ನೂ ಸ್ಪಷ್ಟ ತೀರ್ಮಾನ ಕೈಗೊಂಡಿಲ್ಲ. ಭೂ ಸ್ವಾಧೀನ ಪ್ರಕ್ರಿಯೆಯು ಕೈಗೊಂಡಿಲ್ಲ. ಹಾದು ಹೋಗುವ ಮಾರ್ಗದ ಕುರಿತು ಅಧಿಕಾರಿಗಳು ಮಾರ್ಗದ ಸ್ಥೂಲ ನಕಾಶೆಯನ್ನು ತಯಾರಿಸಿದ್ದರೂ ಬಿಜೆಪಿ ನಾಯಕರು ಅವರಿಗೆ ಸಂಬಂಧ ಪಟ್ಟವರ ಜಾಗವನ್ನು ಉಳಿಸಲು ಅಧಿಕಾರಿಗಳ ಮೇಲೆ ಒತ್ತಡ ಹೇರಿ ಆಗಾಗ ಮಾರ್ಗದ ಪಥವನ್ನು ಬದಲಾಯಿಸುತ್ತಿದ್ದಾರೆ. ನೇರ ಉತ್ತಮ ಮಾರ್ಗವನ್ನು ರಚಿಸುವ ದೂರದೃಷ್ಟಿಯೂ ಇಲ್ಲ. ಸ್ಪಷ್ಟ ಮಾರ್ಗದ ಪಥವನ್ನು ಗುರುತಿಸಿ ಭೂ ಸ್ವಾಧೀನ ಪ್ರಕ್ರಿಯೆ ಮುಗಿಸಲು ಇನ್ನೂ ಒಂದು ವರ್ಷ ಸಮಯಾವಕಾಶ ಬೇಕೆಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಈ ರಸ್ತೆಯನ್ನು ಸದ್ಯ ಸುಗಮ ಸಂಚಾರಕ್ಕೆ ಯೋಗ್ಯವಾಗುವ ನಿಟ್ಟಿನಲ್ಲಿ ನಿರ್ಮಾಣ ಮಾಡಲು 18 ಕೋಟಿ ರೂ. ಅಗತ್ಯವಿದ್ದು ಕೇಂದ್ರ ಸರ್ಕಾರ ಕೂಡಲೇ ಹಣ ಬಿಡುಗಡೆಗೊಳಿಸಬೇಕು. ಈ ಕುರಿತು ಭೂ ಸಾರಿಗೆ ಸಚಿವ ನಿತಿನ್ ಗಡ್ಕರಿ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ನಿರ್ದೇಶಕರಿಗೆ ಪತ್ರ ಬರೆದಿರುವುದಾಗಿ ಅವರು ತಿಳಿಸಿದರು.

ಈ ಹೆದ್ದಾರಿ ಯೋಜನೆಯ ಕಾಮಗಾರಿ ವಿಳಂಬಕ್ಕೆ ಯುಪಿ‌ಎ ಸರ್ಕಾರವೇ ಕಾರಣವೆಂಬ ಸಂಸದೆ ಶೋಭಾ ಕರಂದ್ಲಾಜೆಯವರ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿದ ಅವರು ಮಂಗಳೂರು ಲೋಕಸಭಾ ಕ್ಷೇತ್ರವನ್ನು ಕಳೆದ 25 ವರ್ಷಗಳಿಂದ ಬಿಜೆಪಿ ಸಂಸದರೆ ಪ್ರತಿನಿಧಿಸುತ್ತಿದ್ದಾರೆ. ಡಿ.ವಿ. ಸದಾನಂದ ಗೌಡರು ರಾಜ್ಯದಲ್ಲಿ ಮುಖ್ಯ ಮಂತ್ರಿಯಾಗಿ ಕೇಂದ್ರದಲ್ಲಿ ಸಚಿವರಾಗಿದ್ದರು. ಶೋಭಾ ಕರಂದ್ಲಾಜೆ ಈ ಹಿಂದೆ ರಾಜ್ಯ ಸಂಪುಟದಲ್ಲಿ ಸಚಿವರಾಗಿ ಪ್ರಸ್ತುತ ಸಂಸದರಾಗಿದ್ದಾರೆ. ಇಷ್ಟೆಲ್ಲಾ ಪ್ರಭಾವಿ ನಾಯಕರು ಯಾಕೆ ಹೆದ್ದಾರಿ ಕಾಮಗಾರಿ ನಡೆಸಲು ಆಸಕ್ತಿ ತೋರಿಲ್ಲ ಎಂದು ಅವರು ಪ್ರಶ್ನಿಸಿದರು. ಪತ್ರಿಕಾಗೋಷ್ಠಿಯಲ್ಲಿ ಜಿ.ಪಂ ಮಾಜಿ ಸದಸ್ಯ ಲಾಜರಸ್ ಡಿಕೋಸ್ತ, ಕೆ.ಪಿ.ಸಿಸಿ ಸದಸ್ಯ ಗುರುರಾಜ್, ಮುಖಂಡರುಗಳಾದ ಬಾಲದತ್ತ್ ಆಳ್ವ, ವಿಶ್ವನಾಥ್ ಶೆಟ್ಟಿ, ಗೋಪಿನಾಥ್ ಪಡಂಗ, ಮೈಯದಿ, ಸಾಹುಲ್ ಹಮೀದ್, ಹರೀಶ್ ಪಿ. ರಿಚರ್ಡ್, ನವಾಜ್ ಬೂನಡ್ಕ,ಶಶಿಕಾಂತ್ ಶೆಟ್ಟಿ, ವಿಲ್ಫೆಡ್ ಮೆಂಡೊನ್ಸಾ ಮತ್ತಿತರರು ಉಪಸ್ಥಿತರಿದ್ದರು.

ಮೂಡುಬಿದಿರೆ ವಿಧಾನ ಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಶಾಸಕ ಕೆ. ಅಭಯಚಂದ್ರ ಜೈನ್ ಅವರು ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಈಗಾಗಲೇ ಘೋಷಿಸಿದ್ದಾರೆ. ಹೀಗಾಗಿ ಈ ಕ್ಷೇತ್ರದಲ್ಲಿ ಸ್ಪರ್ಧಿಸಲು ನಾನು ಆಸಕ್ತನಾಗಿದ್ದೇನೆ ಮತ್ತು ಇಲ್ಲಿಂದಲೇ ಶಾಸಕನಾಗಿ ಆಯ್ಕೆಯಾಗಬೇಕೆಂಬುದು ನನ್ನ ಬಯಕೆಯಾಗಿದೆ. ಅಂತಿಮವಾಗಿ ಚುನಾವಣೆಗೆ ಸ್ಪರ್ಧಿಸಲು ಅಭ್ಯರ್ಥಿಯನ್ನು ಆಯ್ಕೆ ಮಾಡುವುದು ಹೈಕಮಾಂಡ್‌ಗೆ ಬಿಟ್ಟಿದ್ದು ಎಂದು ಅವರು ಸ್ಪರ್ಧಿಸುವ ಕುರಿತ ಊಹಾಪೋಹಗಳಿಗೆ ತೆರೆ ಎಳೆದರು.

Related posts

Leave a Reply