Header Ads
Breaking News

ಮೂಡುಬಿದ್ರೆ ಪುರಸಭೆಯ ಸಾಮಾನ್ಯ ಸಭೆ

ಕನವರ್ಶನ್ ಆದ ನಿವೇಶನದಲ್ಲಿ ಮನೆ ಹೊರತು ಖಾಲಿ ಬಿದ್ದಿರುವ ಜಾಗಕ್ಕೆ ಶೇ.0.2 ರಿಂದ ಶೇ. 1.5 ತೆರಿಗೆ ಏರಿಸುವ ಬಗ್ಗೆ ವಿಪಕ್ಷೀಯರು ತೀವೃ ವಿರೋಧ ವ್ಯಕ್ತ ಪಡಿಸಿದ ಘಟನೆ ಪುರಸಭೆಯ ಸಾಮಾನ್ಯ ಸಭೆಯಲ್ಲಿ ನಡೆದಿದೆ.

ಪುರಸಭಾಧ್ಯಕ್ಷ ಪ್ರಸಾದ್ ಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಕಂದಾಯ ನಿರೀಕ್ಷ ಅಶೋಕ್ ಅವರು ತೆರಿಗೆ ಏರಿಸುವ ಕ್ರಮದ ಬಗ್ಗೆ ಪ್ರಸ್ತಾಪಿಸಿದಾಗ ಕಾಂಗ್ರೆಸ್ ಬೆಂಬಲಿತ ಸದಸ್ಯ ಸುರೇಶ್ ಪ್ರಭು ಮಾತನಾಡಿ ಕೋರೋನಾದಿಂದಾಗಿ ಜನರು ಈಗಾಗಲೇ ಆರ್ಥಿಕವಾಗಿ ತತ್ತರಿಸಿ ಹೋಗಿದ್ದಾರೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಮತ್ತೆ ಹೆಚ್ಚು ತೆರಿಗೆ ವಸೂಲಿ ಮಾಡುವುದು ಸರಿಯಲ್ಲ. ಹಾಗೂ ಖಾಲಿ ಬಿದ್ದ ಜಾಗಕ್ಕೆ ತೆರಿಗೆ ವಿಧಿಸುವುದು ಸರಿಯಾದ ಕ್ರಮವಲ್ಲವೆಂದು ವಿರೋಧ ವ್ಯಕ್ತಪಡಿಸಿದರು. ವರ್ಷದ ತೆರಿಗೆ ಪುರಸಭೆ ಅಧೀನದಲ್ಲಿರುವ ಮೂರು ವಾಣಿಜ್ಯ ಸಂಕೀರ್ಣಗಳಿಂದ ರೂ.80 ಲಕ್ಷಕ್ಕೂ ಅಧಿಕ ಬಾಡಿಗೆ ಬಾಕಿ ಇರುವುದಕ್ಕೆ ಸದಸ್ಯರು ಅಕ್ರೋಶ ವ್ಯಕ್ತಪಡಿಸಿದರು. ವಾಣಿಜ್ಯ ಸಂಕೀರ್ಣಗಳ ಅಂಗಡಿ ಬಾಡಿಗೆಗಳು ಪುರಸಭೆಯ ಆದಾಯದ ಮುಖ್ಯ ಮೂಲ. ಆದರೆ ಒಬ್ಬೊಬ್ಬ ಬಾಡಿಗೆದಾರ ಎಂಟು-ಐದು ಲಕ್ಷ ರೂಪಾಯಿ ಬಾಡಿಗೆ ಪಾವತಿ ಮಾಡದಿದ್ದರೂ ಪುರಸಭೆಯಿಂದ ಕ್ರಮ ಕೈಗೊಳ್ಳದಿರುವುದು ಯಾಕೆ? ಎಂದು ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಇತರ ಸದಸ್ಯರು ಒತ್ತಾಯಿಸಿದರು.

ಇದಕ್ಕೆ ಉತ್ತರಿಸಿದ ಮುಖ್ಯಾಧಿಕಾರಿ ಇಂದು ಎಂ., ಪುರಸಭೆಯ ಅಧೀನದಲ್ಲಿರುವ ಇಂದಿರಾ ಗಾಂಧಿ ವಾಣಿಜ್ಯ ಸಂಕೀರ್ಣ, ರಾಜೀವ್ ಗಾಂಧಿ ವಾಣಿಜ್ಯ ಸಂಕಿರ್ಣ ಹಾಗೂ ಕಳೆದ ಹಲವಾರು ವರ್ಷಗಳಿಂದ ಎಪಿಎಂಸಿ ಸಂಕೀರ್ಣದಲ್ಲಿ ಬಾಡಿಗೆ ಬಾಕಿ ಇರಿಸಿಕೊಂಡಿರುವ ಬಾಡಿಗೆದಾರರಿಗೆ ಮೊದಲ ಹಂತದ ನೋಟೀಸ್ ಅನ್ನು ಈಗಾಗಲೇ ನೀಡಿದ್ದೇವೆ. ಎರಡನೇ ನೋಟೀಸ್ ನೀಡಿ ವಾರದ ಗಡುವು ನೀಡುತ್ತೇವೆ. ಬಾಡಿಗೆ ಪಾವತಿ ಮಾಡದಿದ್ದಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.

ಈ ವೇಳೆ ಉಪಾಧ್ಯಕ್ಷೆ ಸುಜಾತಾ, ಪರಿಸರ ಇಂಜಿನಿಯರ್ ಶಿಲ್ಪಾ ಎಸ್., ಪುರಸಭೆ ಕಚೇರಿ ವ್ಯವಸ್ಥಾಪಕ ಗೋಪಾಲ ನಾೈಕ್, ಸದಸ್ಯರು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *