Header Ads
Header Ads
Breaking News

ಮೂರು ಅಕ್ರಮ ಮರಳು ಅಡ್ಡೆಗೆ ದಾಳಿ: ತಲಪಾಡಿ ಸಸಿಹಿತ್ಲುವಿನಲ್ಲಿ ದೋಣಿಗಳು ವಶಕ್ಕೆ

ಉಳ್ಳಾಲ: ಸಮುದ್ರದಂಚಿನಿಂದ ಅಕ್ರಮವಾಗಿ ಮರಳು ದಾಸ್ತಾನಿರಿಸಲಾಗುತ್ತಿದ್ದ ಮೂರು ಅಡ್ಡೆಗಳಿಗೆ ದಾಳಿ ನಡೆಸಿರುವ ಉಳ್ಳಾಲ ಪೊಲೀಸರು 16 ದೋಣಿಗಳು ಸೇರಿದಂತೆ 30 ಲೋಡು ಮರಳುಗಳನ್ನು ವಶಕ್ಕೆ ಪಡೆದುಕೊಂಡಿರುವ ಘಟನೆ ತಲಪಾಡಿ ಗ್ರಾಮದ ಕಡೆಮೊಗರು ಜುಮಾ ಮಸೀದಿ ಸಮೀಪದ ಸಸಿಹಿತ್ಲು ಮತ್ತು ಫೆರಿ ರಸ್ತೆಯಲ್ಲಿ ನಡೆದಿದೆ. ಪ್ರಕರಣ ಸಂಬಂಧ ನಾಲ್ವರು ಆರೋಪಿಗಳು ತಲೆಮರೆಸಿಕೊಂಡಿದ್ದಾರೆ.  ತಲಪಾಡಿ ನಿವಾಸಿ ಹನೀಫ್, ಶಕೀಲ್, ರಘುನಾಥ್, ಸುಧೀರ್ ಎಂಬವರು ತಲೆಮರೆಸಿಕೊಂಡಿದ್ದಾರೆ. ಆರೋಪಿಗಳು ದೋಣಿಗಳ ಮೂಲಕ ಉಚ್ಚಿಲ ಪೆರಿಬೈಲು, ಬೆಟ್ಟಂಪಾಡಿಯ ಸಮುದ್ರ ತೀರದಿಂದ ಮರಳು ತೆಗೆದು ದೋಣಿ ಮೂಲಕ ಸಸಿಹಿತ್ಲು, ಫೆರಿ ರಸ್ತೆಯ ಮೂರು ಅಡ್ಡೆಗಳಲ್ಲಿ ದಾಸ್ತಾನು ಮಾಡಿದ್ದರು. ಅಲ್ಲಿಂದ ಪಿಕಪ್ ವಾಹನ, ಟಿಪ್ಪರ್ ಲಾರಿಗಳ ಮುಖೇನ ಕೇರಳ ಭಾಗಕ್ಕೆ ಮರಳು ಸಾಗಾಟ ನಡೆಸುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಉಳ್ಳಾಲ ಪೊಲೀಸರು ಮೂರು ಅಡ್ಡೆಗಳಿಗೆ ಏಕಕಾಲಕ್ಕೆ ದಾಳಿ ನಡೆಸಿ ನೀರಿನಲ್ಲಿ ನಿಲ್ಲಿಸಲಾಗಿದ್ದ ದೋಣಿಗಳನ್ನು ಕ್ರೇನ್ ಮೂಲಕ ಮೇಲಕ್ಕೆತ್ತಿ ವಶಕ್ಕೆ ಪಡೆದುಕೊಂಡಿದ್ದಾರೆ. ತಡವಾಗಿ ಬಂದ ಭೂ ಗಣಿ ವಿಜ್ಞಾನ ಇಲಾಖೆ: ಅಕ್ರಮ ಮರಳುಗಾರಿಕೆ ಪ್ರಕರಣವನ್ನು ಭೂಗಣಿ ವಿಜ್ಞಾನ ಇಲಾಖೆ ಬೇಧಿಸಬೇಕಿದೆ. ಆದರೆ ಉಳ್ಳಾಲದಲ್ಲಿ ಪೊಲೀಸರು ಬೆಳಗ್ಗಿನಿಂದ ಮಧ್ಯಾಹ್ನದವರೆಗೂ ದಾಳಿ ನಡೆಸಿ ಸೊತ್ತುಗಳನ್ನು ವಶಕ್ಕೆ ಪಡೆದುಕೊಳ್ಳುತ್ತಿದ್ದರೂ, ಭೂ ಗಣಿ ವಿಜ್ಞಾನ ಇಲಾಖೆಯವರು ಆಗಮಿಸಿರಲಿಲ್ಲ. ಸಂಜೆ ವೇಳೆ ಸ್ಥಳಕ್ಕಾಗಮಿಸಿದ ಇಲಾಖೆ ಸಿಬ್ಬಂದಿ ಪೊಲೀಸರು ವಶಪಡಿಸಿಕೊಂಡಿರುವ ಸೊತ್ತುಗಳನ್ನು ತಮ್ಮ ಸ್ವಾಧೀನಕ್ಕೆ ಪಡೆದುಕೊಂಡಿದ್ದಾರೆ.
ಕಡಲ್ಕೊರೆತಕ್ಕೆ ಪ್ರಮುಖ ಕಾರಣ : ಉಚ್ಚಿಲ ಸೋಮೇಶ್ವರ ಸಮುದ್ರ ತೀರದಲ್ಲಿ ಕಳೆದ ಎರಡು ವರ್ಷಗಳಿಂದ ಕಡಲ್ಕೊರೆತ ತೀವ್ರಗೊಳ್ಳುತ್ತಿದೆ. ರೆಸಾರ್ಟ್, ಮನೆಗಳು ಸಮುದ್ರಪಾಲಾಗಿವೆ . ಇದಕ್ಕೆ ಪ್ರಮುಖವಾಗಿ ಮರಳುಗಾರಿಕೆಯೂ ಕಾರಣವೆಂದು ಉಚ್ಚಿಲ ನಿವಾಸಿಗಳು ಆರೋಪಿಸಿದ್ದರು. ದಿನನಿತ್ಯ ಟನ್ ಗಟ್ಟಲೆಯಾಗಿ ಉಚ್ಚಿಲ ಎಂಡ್ ಪಾಯಿಂಟ್ ಮುಖೇನ ಮರಳುಗಾರಿಕೆ ನಡೆಸುತ್ತಿರುವುದನ್ನು ಗ್ರಾಮಸ್ಥರು ಆರೋಪಿಸುತ್ತಿದ್ದರು. ಆದರೂ ಜೀವಭಯದಿಂದ ದೂರು ನೀಡಲು ಯಾರೂ ಮುಂದಾಗುತ್ತಿರಲಿಲ್ಲ. ಇದೀಗ ಪೊಲೀಸರ ಕಾರ್‍ಯಾಚರಣೆಯಿಂದ ಕಡಲ್ಕೊರೆತದಿಂದ ಹಾನಿಗೊಳಗಾದವರು ನಿಟ್ಟುಸಿರು ಬಿಡುವಂತಾಗಿದೆ. ನೀರಿನಡಿ ದೋಣಿ ಮುಳುಗಿಸಿಟ್ಟಿರುವ ಶಂಕೆ : ಆರೋಪಿಗಳು ಹಿಂದೆಯೂ ಪೊಲೀಸ್ ದಾಳಿ ಮಾಹಿತಿ ಪಡೆದು ಮರಳುಗಾರಿಕೆ ನಡೆಸುತ್ತಿರುವ ದೋಣಿಗಳನ್ನು ನೀರಿನಲ್ಲಿ ಮುಳುಗಿಸಿ ಅಡಗಿಸಿಡುವಂತಹ ಕೆಲಸವನ್ನು ಮಾಡುತ್ತಿದ್ದರು. ಬುಧವಾರ ನಡೆದ ದಾಳಿ ವೇಳೆ ಕೆಲವು ದೋಣಿಗಳು ಮಾತ್ರ ವಶಕ್ಕೆ ಬಿದ್ದಿದ್ದು, ಇನ್ನು ಕೆಲವು ನೀರಿನಡಿ ಇಟ್ಟಿರುವ ಶಂಕೆ ಇದೆ. ದೋಣಿಗಳ ಒಳಗೆ ದೊಡ್ಡ ಗಾತ್ರದ ಕಲ್ಲುಗಳನ್ನು ಇಟ್ಟು ಕೆಳಗೆ ಕಟ್ಟಿ ಹಾಕಿ ಅಡಗಿಸಿಡುವಂತಹ ಕೆಲಸವೂ ಇಲ್ಲಿ ನಡೆಯುತ್ತಿದೆ.
ವಾಹನಗಳಿಂದ ತೊಂದರೆ : ಜನವಸತಿ ಪ್ರದೇಶವಾಗಿರುವ ತಲಪಾಡಿಯ ಕಡೆಮೊಗರು ಪ್ರದೇಶದ ಫೆರಿ ರಸ್ತೆಯಲ್ಲಿ ದಿನನಿತ್ಯ ಮರಳು ಸಾಗಾಟ ನಡೆಸುವ ವಾಹನಗಳು ಮಿತಿಮೀರಿದ ವೇಗದಿಂದ ಚಲಿಸುತ್ತಿರುತ್ತದೆ. ಮಂಗಳವಾರ ಸಂಜೆ ಕೇರಳ ಕಡೆಗೆ ಮರಳು ಕೊಂಡೊಯ್ಯುವ ಪಿಕಪ್ ವಾಹನವೊಂದು ಕಡೆಮೊಗರು ಮಸೀದಿ ಸಮೀಪವೇ ಮಗುವೊಂದಕ್ಕೆ ಅಪಘಾತ ನಡೆಸುವುದರಿಂದ ಸ್ವಲ್ಪದರಲ್ಲೇ ತಪ್ಪಿಹೋಗಿತ್ತು. ಇದರಿಂದ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದರು. ಮುಂದೆ ವಾಹನಗಳಿಂದ ಅಪಾಯ ಸಂಭವಿಸದಂತೆ ರಸ್ತೆಗೆ ಉಬ್ಬು ಕೂಡ ಬುಧವಾರದಂದೇ ಹಾಕಿದ್ದರು. ಉಳ್ಳಾಲ ಠಾಣಾಧಿಕಾರಿ ಗೋಪಿಕೃಷ್ಣ ಕೆ.ಆರ್ ನೇತೃತ್ವದಲ್ಲಿ ನಡೆದ ದಾಳಿಂiiಲ್ಲಿ ಪಿಎಸ್‌ಐಗಳಾದ ವಿನಾಯಕ ತೋರಗಲ್ ಹಾಗೂ ಗುರಪ್ಪ ಕಾಂತಿ , ಎಎಸ್ ಐಗಳಾದ ರಾಧಾಕೃಷ್ಣ, ವಿಶ್ವನಾಥ್ ರೈ ಮತ್ತು ಸಿಬ್ಬಂದಿಗಳಾದ ದಿನೇಶ್, ಮನೋಹರ್, ರಂಜಿತ್, ಲಿಂಗರಾಜ್, ಸುದರ್ಶನ್, ಪ್ರಶಾಂತ್, ಪೂರ್ವಾಚಾರ್, ರಾಮಚಂದ್ರ, ಅಶೋಕ್ ಮತ್ತಿತರರು ಉಪಸ್ಥಿತರಿದ್ದರು.

Related posts

Leave a Reply