
ನವದೆಹಲಿ, ಜ. 12: ಮಂಗಳವಾರ ಮೂರು ಕೃಷಿ ಕಾಯ್ದೆಗಳ ಜಾರಿಯನ್ನು ಪ್ರಶ್ನಿಸಿ ಮತ್ತು ದೆಹಲಿಯಲ್ಲಿ ಗಡಿಯಲ್ಲಿ ರೈತ ಹೋರಾಟದ ಹಿನ್ನೆಲೆಯಲ್ಲಿ ಸಲ್ಲಿಸಲಾಗಿದ್ದ ಅರ್ಜಿ ವಿಚಾರಣೆ ನಡೆಸಿದ ಎಸ್. ಎ. ಬೋಬ್ಡೆ ನೇತೃತ್ವದ ಸುಪ್ರೀಂ ಕೋರ್ಟ್ ನ್ಯಾಯಪೀಠ, ಮುಂದಿನ ಆದೇಶದವರೆಗೆ ಮೂರು ಕಾಯ್ದೆಗಳ ಜಾರಿಯನ್ನು ಅಮಾನತುಗೊಳಿಸಲು ಸೂಚಿಸಿದ್ದು, ತಜ್ಞರ ಸಮಿತಿ ರಚಿಸಿದೆ.
ನ್ಯಾಯಮೂರ್ತಿ ಎಸ್.ಎ. ಬೋಬ್ಡೆ, ಎ.ಎಸ್. ಬೋಪಣ್ಣ ಹಾಗೂ ವಿ. ರಾಮಸುಬ್ರಮಣ್ಯನ್ ನೇತೃತ್ವದ ಪೀಠವು ಸರ್ಕಾರ ಹಾಗೂ ರೈತರ ನಡುವಿನ ಬೇಡಿಕೆ ತಕರಾರು ತಿಳಿದು ವರದಿ ಸಲ್ಲಿಸಲು ಸಮಿತಿ ರಚಿಸಿದ್ದು ಇದರಲ್ಲಿ, ಕೃಷಿ ಆರ್ಥಿಕ ತಜ್ಞ ಅಶೋಕ ಗುಲಾಟಿ, ಆಲ್ ಇಂಡಿಯಾ ಕೋ ಆರ್ಡಿನೇಷನ್ ಕಮಿಟಿಯ ಮತ್ತು ಭಾರತೀಯ ಕಿಸಾನ್ ಯೂನಿಯನ್ನ ಅಧ್ಯಕ್ಷ ಭೂಪಿಂದರ್ ಸಿಂಘ್ ಮಾನ್, ದಕ್ಷಿಣ ಏಷ್ಯಾದ ಅಂತಾರಾಷ್ಟ್ರೀಯ ಆಹಾರ ನೀತಿ ನಿರ್ದೇಶಕ ಪ್ರಮೋದ್ ಕುಮಾರ್ ಜೋಶಿ, ಶೇತ್ಕರಿ ಸಂಘಟನೆಯ ಅನಿಲ್ ಘನ್ವತ್ ಸದಸ್ಯರಾಗಿರುತ್ತಾರೆ ಎಂದು ಸುಪ್ರೀಂ ಕೋರ್ಟ್ ತಿಳಿಸಿದೆ.
ಈ ತಜ್ಞರ ಸಮಿತಿಯು ನ್ಯಾಯಾಲಯಕ್ಕೆ ವರದಿ ಸಲ್ಲಿಸುತ್ತದೆ. ಇದು ಯಾರನ್ನು ಶಿಕ್ಷಿಸುವುದಿಲ್ಲ ಅಥವಾ ಆದೇಶಗಳನ್ನು ಹೊರಡಿಸುವುದಿಲ್ಲ. ಸಂಘಟನೆಗಳ ಅಭಿಪ್ರಾಯಗಳನ್ನು ಸಂಗ್ರಹಿಸಿ ರೈತ ಹೋರಾಟದ ಬಗ್ಗೆ ಸ್ಪಷ್ಟಚಿತ್ರಣ ಪಡೆಯುವುದು ಇದರ ಉದ್ದೇಶವಾಗಿದೆ. ಯಾರಿಗೆ ನಿಜವಾದ ಕಾಳಜಿ ಇರುವವರು ಸಮಿತಿಯ ಮುಂದೆ ಹೋಗುತ್ತಾರೆ. ಸಮಿತಿಯೊಂದಿಗೆ ಸಹಕರಿಸಿದ ರೈತರ ವಾದವನ್ನು ಆಲಿಸುವುದಿಲ್ಲ” ಎಂದು ನ್ಯಾಯಪೀಠ ಹೇಳಿದೆ.
ನಿನ್ನೆ ಇದೇ ವಿಷಯವಾಗಿ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿ ಬೋಬ್ಡೆ ನೇತೃತ್ವದ ಪೀಠವು ಕೇಂದ್ರ ಸರ್ಕಾರವನ್ನು ಕೃಷಿ ಕಾಯ್ದೆಗಳನ್ನು ಅಮಾನತಿನಲ್ಲಿಡುವ ವಿಚಾರವಾಗಿ ತರಾಟೆಗೆ ತೆಗೆದುಕೊಂಡಿತ್ತು. ವಾದ ಪ್ರತಿವಾದಗಳನ್ನು ಆಲಿಸಿದ್ದ ಪೀಠವು ಯಾವುದೇ ತೀರ್ಪು ನೀಡದೆ ಕಲಾಪ ಮುಂದೂಡಿತ್ತು. ಈ ಸಂಬಂಧ ಸೋಮವಾರ ರಾತ್ರಿ ಪತ್ರಿಕಾ ಹೇಳಿಕೆ ನೀಡಿದ ಸಂಯುಕ್ತ ಕಿಸಾನ್ ಮೋರ್ಚಾ, ಒಂದು ವೇಳೆ ಸುಪ್ರೀಂ ಕೋರ್ಟ್ ಸಮಿತಿ ರಚಿಸಿದರೆ, ನಾವು ಅದರ ಕಾರ್ಯಕಲಾಪಗಳಲ್ಲಿ ಭಾಗಿಯಾಗುವುದಿಲ್ಲ ಎಂದು ಸ್ಪಷ್ಟವಾಗಿ ತಿಳಿಸಿತ್ತು. ಇಂದಿನ ಕಲಾಪದ ಬಳಿಕ ಸುಪ್ರೀಂ ಕೋರ್ಟ್ ಸಮಿತಿ ರಚಿಸಿ, ರೈತರು ಸಹಕರಿಸಬೇಕು ಎಂದು ಹೇಳಿರುವುದು ಕುತೂಹಲಕ್ಕೆ ಕಾರಣವಾಗಿದೆ.
ಇನ್ನೊಂದು ಅರ್ಜಿ ವಿಚಾರಣೆಯಲ್ಲಿ ದೆಹಲಿಪೊಲೀಸ್ರು ಜ 26ರ ರೈತರ ಟ್ರ್ಯಾಕ್ಟರ್ ಮಾರ್ಚ್ಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಹೋರಾಟ ನಿರತ ರೈತ ಸಂಘಟನೆಗಳಿಗೆ ಜ. 26ರ ಹೋರಾಟ ಸ್ವರೂಪ ಏನು ಎಂಬ ಬಗ್ಗೆ ವಿವರಗಳನ್ನು ಕೇಳಿ ನೋಟಿಸ್ ನೀಡಿದೆ.