Breaking News

ಮೂರೇ ವರುಷದಲ್ಲಿ ಸೋರುತ್ತಿರುವ ಮಾಡು, ಕಲ್ಲೇರಿ ಕ್ವಾರ್ಟರ್ಸ್ ಅಂಗನವಾಡಿ ಬಿರುಕು

ಬೆಳ್ತಂಗಡಿ ತಾಲೂಕಿನ ಕಲ್ಲೇರಿ ಕ್ವಾರ್ಟರ್ಸ್ ಬಳಿ ಇರುವ ಅಂಗನವಾಡಿ ಕೇಂದ್ರ ಕಟ್ಟಡದ ಮಹಡಿ ಬಿರುಕು ಬಿಟ್ಟಿದ್ದು ನಿರಂತರ ಮಳೆಯಿಂದಾಗಿ ಅಂಗನವಾಡಿ ಕೇಂದ್ರದೊಳಗೆ ನೀರು ತುಂಬಿಕೊಂಡಿದೆ.
ಕಳೆದ ಮೂರು ವರ್ಷಗಳ ಹಿಂದೆ ನಿರ್ಮಾಣವಾದ ಈ ಕಟ್ಟಡ ಪ್ರಥಮ ವರ್ಷದ ಮಳೆಗೆ ನೀರು ಸೋರುತ್ತಿತ್ತು. ಇಲಾಖೆ ಗಮನಕ್ಕೆ ಬಂದರೂ ಕೈ ಕಟ್ಟಿ ಕೂತಿದ್ದು ಈಗ ಸೋರುವಿಕೆ ಹೆಚ್ಚಾಗಿದ್ದು ಮಕ್ಕಳು ಒದ್ದೆಯಾಗಿ ಕೂರುವಂತಾಗಿದೆ. ಕಲ್ಲೇರಿ ಕ್ವಾರ್ಟರ್ಸ್ ಅಂಗನವಾಡಿ ಕೇಂದ್ರ ೨೦೧೧ರಲ್ಲಿ ನಿರ್ಮಾಣಗೊಂಡಿದ್ದು ೨೦೧೪ರಲ್ಲಿ ತಾಲೂಕು ಪಂಚಾಯತ್ ಅನುದಾನದಲ್ಲಿ ಹೆಚ್ಚುವರಿ ಕಟ್ಟಡ ನಿರ್ಮಾಣವಾಯಿತು. ಕಟ್ಟಡ ನಿರ್ಮಾಣ ಮಾಡಿದ ವರ್ಷವೇ ಸೋರಲು ಪ್ರಾರಂಭವಾಗಿದ್ದು ಗ್ರಾ.ಪಂ., ತಾ.ಪಂ. ಮತ್ತು ಸಿಡಿಪಿ‌ಓ ಅಧಿಕಾರಿಗಳಿಗೆ ಮನವಿ ಮಾಡಲಾಗಿತ್ತು. ಆದರೆ ಯಾರು ಕೂಡ ಇತ್ತ ಗಮನ ಹರಿಸದೆ ಹಾಗೆ ಬಿಟ್ಟು ನಿರ್ಲಕ್ಷ್ಯ ತೋರಿದ್ದು ನೀರಿನ ಸೋರುವಿಕೆ ಪ್ರಮಾಣ ಹೆಚ್ಚಾಗಲು ಕಾರಣವಾಗಿದೆ.
ಕಟ್ಟಡ ಬಿರುಕು ಬಿಟ್ಟ ಜಾಗದಿಂದ ನೀರು ಸೋರುತ್ತಿದ್ದು ಇದರಿಂದ ಕಟ್ಟಡದ ಗೋಡೆಗೂ ಅಪಾರ ಹಾನಿಯಾಗಿದೆ. ಇದೇ ರೀತಿ ಗೋಡೆಗೆ ನೀರು ಬೀಳುತ್ತಿದ್ದರೆ ಗೋಡೆಯು ಗುಣಮಟ್ಟವನ್ನು ಕಳೆದುಕೊಂಡು ಕುಸಿಯುವ ಭೀತಿ ಕೂಡ ಎದುರಾಗಬಹುದು ಎನ್ನುತ್ತಾರೆ ಹೆತ್ತವರು. ಮಕ್ಕಳ ಊಟದ ಕೊಠಡಿ ನೀರಿನಿಂದ ತುಂಬಿಹೋಗಿದ್ದು ಆಹಾರ ಶೇಖರಣೆಗೆ ಕೂಡ ಜಾಗವಿಲ್ಲದಾಗಿದೆ.

Related posts

Leave a Reply