
ವಿಶ್ವ ಕ್ಯಾನ್ಸರ್ ದಿನದ ಪ್ರಯುಕ್ತ ಮೆಗಾ ಕ್ಯಾನ್ಸರ್ ಜಾಗೃತಿ ಪ್ರದರ್ಶನ ಕಾರ್ಯಕ್ರಮವು ಕದ್ರಿಯ ಎಕ್ಸ್ಬಿಶನ್ ಗ್ರೌಂಡ್ನಲ್ಲಿ ನಡೆಯಿತು. ಕೆಎಂಸಿ ಆಸ್ಪತ್ರೆ ಸಹಿತ ವಿವಿಧ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ನಡೆದ ಕಾರ್ಯಕ್ರಮದಲ್ಲಿ ಕ್ಯಾನ್ಸರ್ ಕುರಿತ ಮಾಹಿತಿಯಲ್ಲಿ ವೈದ್ಯರು ನೀಡಿದರು.
ಕೆಎಂಸಿ ಆಸ್ಪತ್ರೆಯ ಹೆಮಟಾಲಜಿ ಮತ್ತು ಆನ್ಕೋಲಜಿ ವಿಭಾಗ, ಲಯನ್ಸ್ ಮತ್ತು ಲಿಯೋ ಕ್ಲಬ್ ಕದ್ರಿ ಹಿಲ್ಸ್ ಹಾಗೂ ಲಯನ್ಸ್ ಸೇವಾ ಟ್ರಸ್ಟ್ ಇದರ ಸಹಯೋದೊಂದಿಗೆ, ಇಂಡಿಯನ್ ಮೆಡಿಕಲ್ ಅಸೋಸಿಯೇಶನ್ ಮತ್ತು ಅಸೋಸಿಯೇಶನ್ ಆಫ್ ಮೆಡಿಕಲ್ ಕನ್ಸ್ಲೆಟೆಂಟ್ ಮಂಗಳೂರು ವಿಶ್ವ ಕ್ಯಾನ್ಸರ್ ದಿನ ಪ್ರಯುಕ್ತ ಕ್ಯಾನ್ಸರ್ ಕುರಿತ ಮಾಹಿತಿ ಕಾರ್ಯಾಗಾರವನ್ನು ಮಂಗಳೂರಿನ ಕದ್ರಿಯ ಎಕ್ಸ್ಬಿಶನ್ ಗ್ರೌಂಡ್ನಲ್ಲಿ ಆಯೋಜಿಸಿದ್ದರು.
ಕಾರ್ಯಕ್ರಮವನ್ನು ಲಯನೆಸ್ ಗವರ್ನರ್ ದೇವದಾಸ್ ಭಂಡಾರಿ ಅವರು ದೀಪ ಬೆಳಗಿಸಿ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಈ ಕಾರ್ಯಕ್ರಮ ಆರೋಗ್ಯಕ್ಕೆ ಸಂಬಂಧಪಟ್ಟ ಕಾರ್ಯಕ್ರಮ ಇದಾಗಿದ್ದು ಪ್ರತಿಯೊಬ್ಬರು ಇದರ ಸದುಪಯೋಗ ಪಡೆದುಕೊಳ್ಳಿ ಎಂದು ಹೇಳಿದರು.
ಐಎಮ್ಎ ಅಧ್ಯಕ್ಷರಾದ ಡಾ. ಸಚ್ಚಿದಾನಂದ ರೈ ಅವರು ಬೆಲೂನ್ ಹಾರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಆನಂತರ ಕೆಎಂಸಿ ಆಸ್ಪತ್ರೆಯ ಡೀನ್ ಡಾ. ಎಮ್. ವೆಂಕಟ್ರಾಯ ಪ್ರಭು ಅವರು ಕ್ಯಾನ್ಸರ್ ಕುರಿತು ಮಾಹಿತಿಯನ್ನು ವಿವರಿಸುವಂತಹ ಪೋಸ್ಟರ್ಗಳನ್ನು ರಿಬ್ಬನ್ ಕತ್ತರಿಸಿ ಉದ್ಘಾಟಿಸಿದರು. ಬಳಿಕ ಅವರು, ಕ್ಯಾನ್ಸರ್ ಎಂಬ ಮಾರಕ ಕಾಯಿಲೆ ಬಗ್ಗೆ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕೆಎಂಸಿ ಆಸ್ಪತ್ರೆಯ ಮೆಡಿಕಲ್ ಸೂಪರಿಟೆಂಡೆಂಟ್ ಡಾ. ಆನಂದ್ ವೇಣುಗೋಪಾಲ್ ಅವರು ಕ್ಯಾನ್ಸರ್ ಹರಡುವ ವಿಧಾನದ ಬಗ್ಗೆ ಮಾಹಿತಿ ನೀಡಿದರು.
ಈ ಸಂದರ್ಭ ಕದ್ರಿಯ ಲಯನ್ಸ್ ಅಧ್ಯಕ್ಷೆ ಗೀತಾ ರಾವ್, ಹೆಚ್. ಆರ್. ನಾಯಕ್, ಡಾ. ಪ್ರಶಾಂತ್ ಬಿ. ಮತ್ತಿತರರು ಉಪಸ್ಥಿತರಿದ್ದರು.