Breaking News

ಮೊಗಪ್ಪೆ ಕೆರೆ ಕಾಯಕಲ್ಪಕ್ಕಾಗಿ ಕೈ ಜೋಡಿಸಿದ ನಾಡು, ಹತ್ತು ಎಕರೆ ವಿಸ್ತೀರ್ಣದ ಕೆರೆಯ ಹೂಳೆತ್ತುವ ಕಾರ್ಯ


ಒಂದು ಕಾಲದಲ್ಲಿ ಇಡೀ ನಾಡಿಗೆ ಜೀವಜಲ ನೀಡಿದ್ದ ಆದರೆ ಇಂದು ವಿನಾಶದಂಚಿನಲ್ಲಿರುವ ಬೆಳ್ಳಾರೆ ಸಮೀಪದ ನೆಟ್ಟಾರಿನ ಮೊಗಪ್ಪೆ ಕೆರೆಗೆ ಕಾಯಕಲ್ಪ ನೀಡಲು ನಾಡು ಒಟ್ಟಾಗಿದೆ. ಕಳೆದ ಕೆಲವು ವರ್ಷಗಳಿಂದ ನೀರಿನ ಸಮಸ್ಯೆ ಕಾಣಿಸಿಕೊಂಡು ಜನರಲ್ಲಿ ಆತಂಕ ಸೃಷ್ಟಿಯಾಗಿದ್ದು, ಈ ಬಗ್ಗೆ ಸಾರ್ವಜನಿಕರೇ ನೀರಿನ ಸಂರಕ್ಷಣೆ ಬಗ್ಗೆ ಹೆಚ್ಚಿನ ಉಲವು ತೋರಿಸುತ್ತಿರುವುದು ಗಮನಾರ್ಹವಾದ ಬೆಳವಣಿಗೆ.
ಬೆಳ್ಳಾರೆ ಸಮೀಪದ ನೆಟ್ಟಾರಿನ ಮೊಗಪ್ಪೆಯಲ್ಲಿ ಸುಮಾರು ೧೦ ಎಕರೆ ವಿಸ್ತೀರ್ಣದಲ್ಲಿ ವಿಶಾಲವಾಗಿ ಹರಡಿ ೫ ಗ್ರಾಮಗಳಿಗೆ ನಿರಂತರ ನೀರು ಒದಗಿಸಬಲ್ಲ ಜಲ ಸಂಪತ್ತಿನ ಆಗರವಾಗಿತ್ತು. ಹಲವಾರು ವರ್ಷಗಳಿಂದ ಸಾವಿರಾರು ಎಕರೆ ಕೃಷಿ ಭೂಮಿಗಳಿಗೆ ನೀರುಣಿಸುತ್ತಿದ್ದ ಈ ಕೆರೆ ಈಗ ಸೂಕ್ತ ನಿರ್ವಹಣೆ ಇಲ್ಲದೇ ಶೋಚನಿಯ ಸ್ಥಿತಿಯಲ್ಲಿದೆ. ಹತ್ತು ಎಕರೆ ವಿಸ್ತೀರ್ಣ ಕೆರೆಯ ಸುಮಾರು ೭೫% ಭಾಗ ಮಣ್ಣು, ಕೆಸರು, ಹೂಳು ತುಂಬಿ ಕೊಂಡಿದೆ. ಮಳೆಗಾಲದಲ್ಲಿ ನೀರು ತುಂಬಿ ತುಳುಕಿ ತನ್ನ ಅಭರ್ಗ ಜಲ ಸಂಪತ್ತಿನಿಂದ ಮೆರೆಯುವ ಕೆರೆ ಬೇಸಿಗೆ ಬಂದೊಡನೆ ನಿರ್ವಹಣೆ ಮತ್ತು ಸಂರಕ್ಷಣೆ ಇಲ್ಲದೆ ಬರಡಾಡುತ್ತದೆ.
ಶತಮಾನದ ಹಿನ್ನೆಲೆಯಿರುವ ಈ ಕೆರೆ ಹಿಂದೆ ನೆಟ್ಟಾರು, ಬೆಳ್ಳಾರೆ, ಪೆರುವಾಜೆ ಗ್ರಾಮ ಮತ್ತು ಸುತ್ತಮುತ್ತಣ ಪ್ರದೇಶಗಳಿಗೆ ಸಮೃದ್ದ ನೀರು ಒದಗಿಸುತ್ತಿತ್ತು. ಆದರೆ ಇಂದು ಕೆರೆಯ ಮೇಲ್ಭಾಗದ ಗುಡ್ಡ ಪ್ರದೇಶದಿಂದ ಮಳೆ ನೀರಿಗೆ ಹರಿದು ಬರುವ ಮಣ್ಣು ಕೆರೆಗೆ ಸೇರಿ ಹೂಳು ತುಂಬಿ ಕೊಂಡಿದೆ. ದಾಖಲೆಯಲ್ಲಿ ಕೆರೆ ೧೦.೦೨ ಎಕರೆ ವಿಸ್ತೀರ್ಣ ಇದ್ದರೂ ಇಂದು ಕೆಲವೇ ಎಕರೆಯಾಗಿ ಸಂಕುಚಿತಗೊಂಡಿದೆ.
ಜಲಕ್ಷಾಮ, ಬಲಗಾಲ ಮನೆಯಂಗಳಕ್ಕೆ ಕಾಲಿರಿಸುತ್ತಿರುವಾಗ ಎಚ್ಚೆತ್ತುಕೊಂಡಿರುವ ಜನತೆ ಕೆರೆಯ ಕಯಕಲ್ಪಕ್ಕೆ ಸಂಕಲ್ಪ ಮಾಡಿದೆ. ಕರೆಯಲ್ಲಿ ತುಂಬಿಕೊಂಡಿರುವ ಹೂಳನ್ನು ಎತ್ತಿ ಅಭಿವೃದ್ದಿಪಡಿಸಿ ಜಲ ಇಂಗಿಸುವ ಮತ್ತು ನೀರನ್ನು ನಾಡಿಗೆ ಹರಿಸುವುದರ ಜತೆಗೆ ಚಿಕ್ಕದೊಂದು ಪ್ರವಾಸಿ ತಾಣವನ್ನಾಗಿ ಮಾಡುವ ಮಹತ್ವಾಕಾಂಕ್ಷೆ ಗ್ರಾಮಸ್ಥರದ್ದು. ಅದಕ್ಕಾಗಿ ನಾಗರಿಕರು, ಜನಪ್ರತಿನಿಧಿಗಳು, ವಿವಿಧ ಸಂಘ ಸಂಸ್ಥೆಗಳು, ಸರಕಾರಿ ಇಲಾಖೆಗಳ ಸಹಯೋಗದಲ್ಲಿ ಕೆರೆ ಅಭಿವೃದ್ದಿ ಪಡಿಸಿ ನೀರಿನ ಸದ್ಬಳಕೆಗೆ ಚಿಂತನೆ ನಡೆಸಲಾಗಿದೆ. ಕೆರೆಯ ಹೂಳೆತ್ತಿ ಅಭಿವೃದ್ದಿಪಡಿಸಲು ೭೫೦ ಗಂಟೆ ಕೆಲಸ ಬೇಕಾಗಬಹುದು ಎಂದು ಅಂದಾಜಿಸಲಾಗಿದೆ. ಸಂಘ ಸಂಸ್ಥೆಗಳು, ಸಾರ್ವಜನಿಕರು ತಮ್ಮ ಲಭ್ಯ ಸಮಯವನ್ನು ಕೆರೆಯ ಅಭಿವೃದ್ದಿಗಾಗಿ ಮೀಸಲಿಟ್ಟಿದ್ದಾರೆ. ಅಲ್ಲದೇ ಸಾರ್ವಜನಿಕರ ಸಹಭಾಗಿತ್ವದಲ್ಲಿ ಹೊಳೆತ್ತುವುದರ ಜತೆಗೆ ಗ್ರಾಪಂ, ತಾಪಂ, ಜಿಪಂ, ಶಾಸಕ, ಸಚಿವ ಹಾಗೂ ಸಂಸದರ ನಿಧಿಗಳಿಂದ ಅನುದಾನ ಪಡೆದು ತಡೆಗೋಡೆ ನಿರ್ಮಾಣ, ಗಿಡ ನೆಡುವ ಕಾರ್ಯಕ್ರಮ ಮತ್ತಿತರ ಅಭಿವೃದ್ಧಿ ಕೈಗೊಂಡು ಕೆರೆಯನ್ನು ಪುನರುಜ್ಜೀವನಗೊಳಿಸಿ ಪ್ರವಾಸಿ ತಾಣವನ್ನಾಗಿ ರೋಪಿಸುವ ಯೋಜನೆ ರೂಪಿಸಲಾಗಿದೆ.
ಕೆರೆಯ ಹೂಳನ್ನು ತೆಗೆಯುವ ಕಾರ್ಯ ಆರಂಭವಾಗಿದ್ದು ಈಗಾಗಲೇ ಸುಮಾರು ೭ ಅಡಿ ಆಳದಲ್ಲಿ ನೀರು ಜಿನುಗಲಾರಂಭಿಸಿದೆ. ಸಾಕಷ್ಟು ನೀರು ಲಭ್ಯವಾದಲ್ಲಿ ಮುಂದೆ ಬೆಳ್ಳಾರೆ, ಪೆರುವಾಜೆ ಪರಿಸರಕ್ಕೆ ಕುಡಿಯುವ ನೀರಿನ ಯೋಜನೆಗೆ ಬಳಸಿಕೊಳ್ಳಲು ಸಾಧ್ಯವಿದೆ. ಮಳೆಗಾಲದಲ್ಲಿ ಬಿದ್ದ ನಿರು ಹರಿದು ಹೋಗದಂತೆ ತಡೆ ಹಿಡಿದು ಇಂತಹ ಕೆರೆಗಳಲ್ಲಿ ಸಂಗ್ರಹ ಮಾಡಿದರೆ ಬೇಸಿಗೆಯಲ್ಲಿ ನೀರಿನ ಸಮಸ್ಯೆ ಬರಲಾರದು.

Related posts

Leave a Reply