Header Ads
Header Ads
Breaking News

ಮೊಬೈಲ್ ಎಸೆಯುವ ವಿಶಿಷ್ಟ ಸ್ಪರ್ಧೆ: ಮೊಬೈಲ್ ಎಸೆದು ಸಂಭ್ರಮಿಸಿದ ಯುವಕರು

ಇತ್ತೀಚಿನ ದಿನಗಳಲ್ಲಂತೂ ಸಾವಿರಾರು ರೂಪಾಯಿ ಖರ್ಚು ಮಾಡಿ ಅತ್ಯಾಧುನಿಕ ತಂತ್ರಜ್ಞಾನದ ಮೊಬೈಲ್ ಖರೀದಿಸಿದರೂ ಅದರಲ್ಲಿ ಒಂದಲ್ಲಾ ಒಂದು ಸಮಸ್ಯೆಗಳು ಇದ್ದೇ ಇರುತ್ತವೆ. ಅತ್ಯಂತ ತುರ್ತು ಸಂದರ್ಭಗಳಲ್ಲೇ ಕೈ ಕೊಡುವ ಈ ಮೊಬೈಲ್ ಗಳನ್ನು ಕೆಲವೊಮ್ಮೆ ಎಸೆದು ಬಿಡೋಣ ಎಂಬಂತಹ ಸಿಟ್ಟು ಬರುವುದು ಸಹಜ. ಅಂದಹಾಗೆ ಮೊಬೈಲ್ ಎಸೆಯುವುದೇ ಒಂದು ಸ್ಪರ್ಧೆಯಾದರೆ ಹೇಗೆ? ಹೌದು, ಇಂತಹುದೇ ಅಪರೂಪದ ಮೊಬೈಲ್ ಎಸೆಯುವ ವಿಶಿಷ್ಟ ಸ್ಪರ್ಧೆಯೊಂದು ನಡೆದಿದೆ. ಆ ಸ್ಪರ್ಧೆಯ ಝಲಕ್ ಇಲ್ಲಿದೆ ನೋಡಿ.ಇದು ತಂತ್ರಜ್ಞಾನದ ಯುಗ. ಹೊಸ, ಹೊಸ ತಂತ್ರಜ್ಞಾನವುಳ್ಳ ಮೊಬೈಲ್‌ಗಳು ಮಾರುಕಟ್ಟೆಗೆ ಬಂದಾಗ ಜನರು ಅದನ್ನೇ ಮೆಚ್ಚಿಕೊಂಡು ಖರೀದಿಗೆ ಮುಂದಾಗುತ್ತಾರೆ. ಇದರಿಂದ ಹಳೆಯ ಫೋನ್‌ಗಳೆಲ್ಲವೂ ಮನೆಯ ಮೂಲೆಯಲ್ಲಿ ಬೀಳುತ್ತವೆ.ಇಂತಹ ಹಳೆಯ ಮೊಬೈಲ್ ಫೋನ್‌ಗಳನ್ನು ಮರು ಬಳಕೆ ಮಾಡಿದರೆ ಹೇಗೆ? ಈ ಹಳೆಯ ಮೊಬೈಲ್‌ಗಳನ್ನೆಲ್ಲಾ ಒಂದುಗೂಡಿಸುವುದಾದರೂ ಹೇಗೆ ಎಂಬಿತ್ಯಾದಿ ಪ್ರಶ್ನೆ ಎದುರಾದಾಗ ಕುಂದಾಪುರ ತಾಲೂಕಿನ ಗ್ರಾಮೀಣ ಪ್ರದೇಶದ ಮೊಬೈಲ್ ಅಂಗಡಿಯ ಮಾಲಿಕರೊಬ್ಬರಿಗೆ ಹೊಸ ಐಡಿಯಾವೊಂದು ಹೊಳೆಯಿತು, ಅದೇ ಮೊಬೈಲ್ ಎಸೆತ ಸ್ಪರ್ಧೆ.ಮೊಬೈಲ್ ಬಳಕೆದಾರರ ಸಂಖ್ಯೆ ಹೆಚ್ಚುತ್ತಿದ್ದು, ಒಬ್ಬವ್ಯಕ್ತಿ ಕನಿಷ್ಟವೆಂದರೆ ವರ್ಷಕ್ಕೆ ಒಂದು ಮೊಬೈಲ್ ಬಳಸಿ ಎಸೆಯುತ್ತಾನೆ. ಲಕ್ಷಾಂತರ ಮಂದಿ ಹೀಗೆ ಮಾಡಿದರೆ ಉಪಯೋಗ ರಹಿತವಾದ ಲಕ್ಷಾಂತರ ಮೊಬೈಲ್ ತ್ಯಾಜ್ಯವಾಗಿ ಹೊರಬರುತ್ತದೆ. ಈ ಉಪಯೋಗರಹಿತವಾದ ಮೊಬೈಲ್ ಗಳಿಂದ ಪರಿಸರ ಮಾಲಿನ್ಯಗಳಾಗುತ್ತಿದ್ದು, ಇದರ ಬಗ್ಗೆ ಅರಿವು ಮೂಡಿಸಲು ಹಾಗೂ ಹಳೆಯ ಮೊಬೈಲ್ ಫೋನ್‌ಗಳನ್ನು ಮರುಬಳಕೆ ಮಾಡುವ ಸದುದ್ದೇಶದಿಂದ ಉಡುಪಿ ಜಿಲ್ಲೆ ಕುಂದಾಪುರ ತಾಲೂಕಿನ ಗೋಳಿಯಂಗಡಿಯ ಮೊಬೈಲ್ ಅಂಗಡಿ ಮಾಲಿಕ ರೂಪೇಶ್ ಕುಮಾರ್ ಸಾರ್ವಜನಿಕರಿಗಾಗಿ ‘ಮೊಬೈಲ್ ಫೋನ್ ಎಸೆತ ಸ್ಪರ್ಧೆ’ ಆಯೋಜಿಸಿ ಗಮನ ಸೆಳೆದಿದ್ದಾರೆ.ತೀವ್ರ ಕುತೂಹಲ ಕೆರಳಿಸಿದ್ದ ಕುಂದಾಫುರದ ಗೋಳಿಯಂಗಡಿ ಸರ್ಕಾರಿ ಪದವಿಪೂರ್ವ ಕಾಲೇಜು ಮೈದಾನದಲ್ಲಿ ಆಯೋಜಿಸಲಾಗಿದ್ದ ಮೊಬೈಲ್ ಎಸೆತ ಸ್ಪರ್ಧೆ ಭಾನುವಾರ ಮುಕ್ತಾಯಗೊಂಡಿದೆ. ಈ ಸ್ಪರ್ಧೆಯಲ್ಲಿ ೭೭. ೯೦ ಮೀಟರ್ ದೂರ ಹಳೆ ಮೊಬೈಲ್ ಎಸೆದ ಶೇಖರ್ ಸೆಟ್ಟೊಳ್ಳಿ ಪ್ರಥಮ ಸ್ಥಾನ ಪಡೆದಿದ್ದು, ಬಹುಮಾನವಾಗಿ 4ಜಿ ಸ್ಮಾರ್ಟ್ ಫೋನ್ ತಮ್ಮದಾಗಿಸಿಕೊಂಡರು.ಇನ್ನು ೭೨.೭೦ ಮೀ. ದೂರ ಎಸೆದ ರಾಜೇಶ್ ಸೆಟ್ಟೊಳ್ಳಿ ದ್ವಿತೀಯ ಸ್ಥಾನ ಪಡೆದು ಆಂಡ್ರಾಯ್ಡ್ ಫೋನ್ ಪಡೆದುಕೊಂಡರು.ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಮಾಧ್ಯಮಗಳಲ್ಲಿ ತೀವ್ರ ಪ್ರಚಾರ ಲಭಿಸಿದ್ದರಿಂದ ಉಡುಪಿ ಜಿಲ್ಲೆ ಮಾತ್ರವಲ್ಲದೆ ಹೊರ ಜಿಲ್ಲೆಗಳಿಂದಲೂ ಸ್ಪರ್ಧಾಳುಗಳು ಭಾಗವಹಿಸಿದ್ದರು. ಭಾಗವಹಿಸಿದ ಸ್ಪರ್ಧಾಳುಗಳಿಗೆ 20ರೂ. ಪ್ರವೇಶ ಶುಲ್ಕ ವಿಧಿಸಲಾಗಿತ್ತು. ಸ್ಪರ್ಧಿಗಳು ಎಸೆದ ಮೊಬೈಲ್ ಗಳನ್ನು ಅವರಿಗೆ ಹಿಂದಿರುಗಿಸದೆ ಸಂಗ್ರಹಿಸಲಾಗಿದ್ದು, ಸುಮಾರು ೨೫೦ಕ್ಕೂ ಅಧಿಕ ಹಳೆಯ ಮೊಬೈಲ್ ಫೋನ್ ಗಳು ಸಂಗ್ರಹಗೊಂಡವು.ಮೊಬೈಲ್ ಎಸೆತ ಈ ವಿಭಿನ್ನ ಸ್ಪರ್ಧೆ ಉಡುಪಿ ಜಿಲ್ಲೆಯಲ್ಲೇ ಇದು ಎರಡನೇ ಭಾರಿಗೆ ನಡೆದಿರುವುದು. ಈ ಹಿಂದೆ ಇಲ್ಲಿಯೇ ಸಮೀಪದ ಬ್ರಹ್ಮಾವರದಲ್ಲಿ ೫ ವರ್ಷಗಳ ಹಿಂದೆ ಮೊಬೈಲ್ ಎಸೆಯುವ ಸ್ಪರ್ಧೆ ಏರ್ಪಡಿಲಾಗಿತ್ತು. ದೂರದ ಫಿನ್ ಲ್ಯಾಂಡ್ ನಲ್ಲಿ ಪ್ರತಿವರ್ಷ ಮೊಬೈಲ್ ಎಸೆಯುವ ಸ್ಪರ್ಧೆ ನಡೆಯುತ್ತದೆ. 2018 ರಲ್ಲಿ ಮೊಬೈಲ್ ಎಸೆಯುವ ವಿಶ್ವಚಾಂಪಿಯನ್ ಶಿಪ್ ಕೂಡ ಫಿನ್ ಲ್ಯಾಂಡ್ ನಲ್ಲಿ ನಡೆದಿತ್ತು. ಆದರೆ ಅಲ್ಲಿ ಇದನ್ನು ಮನರಂಜನೆಯ ಭಾಗವಾಗಿ ಆಯೋಜಿಸಲಾಗುತ್ತದೆ. ಫಿನ್ ಲ್ಯಾಂಡ್ ನಲ್ಲಿ ನಡೆದಿದ್ದ ಸ್ಪರ್ಧೆಯಲ್ಲಿ101ಮೀಟರ್ ಮೊಬೈಲ್ ಎಸೆದ ದಾಖಲೆಯೂ ಇದೆ.

Related posts

Leave a Reply