Header Ads
Header Ads
Breaking News

ರಕ್ತದಾನ ಮಾಡಿ ಮಾದರಿಯಾದ ಕಾರ್ಕಳದ ವೈದ್ಯರು

ವೈದ್ಯರೇ ರಕ್ತದಾನ ಶಿಬಿರ ಆಯೋಜಿಸಿ ರಕ್ತದಾನ ಮಾಡುವ ಮೂಲಕ ಮಾದರಿಯಾದ ಕಾರ್ಯ ಕಾರ್ಕಳದಲ್ಲಿ ನಡೆಯಿತು. ಎಸ್‌ವಿಟಿ ಸಭಾಂಗಣದಲ್ಲಿ ಆಯೋಜಿಸಿದ ಶಿಬಿರದಲ್ಲಿ ಸರಕಾರಿ ಹಾಗೂ ಖಾಸಗಿ ವೈದ್ಯರು, ಆರೋಗ್ಯ ಸಹಾಯಕ, ಸಹಾಯಕಿಯರು, ದಾದಿಯರು, ಆರೋಗ್ಯ ಇಲಾಖಾ ಸಿಬ್ಬಂದಿ ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಿ ಎಲ್ಲರ ಮೆಚ್ಚುಗೆಗೆ ಪಾತ್ರರಾದರು. ವಿವಿಧ ಸಂಘ-ಸಂಸ್ಥೆಯವರು, ಸಾರ್ವಜನಿಕರೂ ರಕ್ತದಾನ ಮಾಡುವ ಮೂಲಕ ವೈದ್ಯರ ಕಾರ್ಯಕ್ಕೆ ಸಾಥ್ ನೀಡಿದರು.

ಕಾರ್ಕಳ ನರ್ಸಿಂಗ್ ಹೋಂನ ಆಡಳಿತ ನಿರ್ದೇಶಕ ಬಿ.ಎಂ. ಕಿಣಿ ದೀಪ ಬೆಳಗಿಸಿ ಶಿಬಿರವನ್ನು ಉದ್ಘಾಟಿಸಿದರು. ಭಾರತೀಯ ವೈದ್ಯಕೀಯ ಸಂಘ ಕಾರ್ಕಳ ಇದರ ಅಧ್ಯಕ್ಷ ಡಾ| ಜ್ಞಾನೇಶ್ ಕಾಮತ್ ಮಾತನಾಡಿ, ರಕ್ತದಾನ ದಾನಗಳಲ್ಲೇ ಶ್ರೇಷ್ಠ ದಾನ. ರಕ್ತದಾನದ ಮಹತ್ವ ಅರಿತು ಆರೋಗ್ಯವಂತ ವ್ಯಕ್ತಿಗಳು ರಕ್ತದಾನ ಮಾಡಲು ಮುಂದಾಗಬೇಕು. ನಿಯಮಿತವಾಗಿ ರಕ್ತದಾನ ಮಾಡುವುದರಿಂದ ಆರೋಗ್ಯ ವೃದ್ಧಿಸುವುದು ಎಂದರು.

ಶ್ರೀ ಭುವನೇಂದ್ರ ಕಾಲೇಜಿನ ಪ್ರಾಂಶುಪಾಲ ಡಾ| ಮಂಜುನಾಥ ಕೋಟ್ಯಾನ್ ಮಾತನಾಡಿ, ರಕ್ತ ಜೀವ ನೀಡಿದರೆ, ವಿದ್ಯೆ ಜೀವನ ನೀಡುವುದು. ರಕ್ತದಾನ, ವಿದ್ಯಾದಾನ ದಾನಗಳಲ್ಲೇ ಹೆಚ್ಚು ಮಹತ್ವ ಪಡೆದಿದೆ ಎಂದು ಬಣ್ಣಿಸಿದರು. ಎಸ್‌ವಿಟಿ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಕೆ.ಪಿ. ಶೆಣೈ, ಎನ್‌ಹೆಚ್ ಗುತ್ತಿಗೆದಾರರ ಸಂಘದ ಅಧ್ಯಕ್ಷ ಮಂಜುನಾಥ್ ಶುಭಹಾರೈಸಿದರು. ಭಾರತೀಯ ರೆಡ್ ಕ್ರಾಸ್ ಸೊಸೈಟಿ ಅಧ್ಯಕ್ಷ ಡಾ| ಕೆ.ಆರ್. ಜೋಶಿ ಅಧ್ಯಕ್ಷತೆ ವಹಿಸಿದ್ದರು. ಐಎಂಎ ಪ್ರಶಸ್ತಿ ವಿಜೇತ ಡಾ| ಸುರೇಶ್ ಕುಡ್ವಾ, ಡಾ| ಶರಣ್, ರೆಡ್ ಕ್ರಾಸ್ ಸೊಸೈಟಿಯ ಉಪಾಧ್ಯಕ್ಷ ಶೇಖರ್ ಹೆಚ್. ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *