Header Ads
Header Ads
Breaking News

ರಾಜಕೀಯ ಮೇಲಾಟದ ನಡುವೆ ಬೆಳವಣಿಗೆ: ಬಿ.ಸಿ.ರೋಡ್-ಅಡ್ಡಹೊಳೆ ಕಾಮಗಾರಿ ಮತ್ತೆ ಆರಂಭ

 

ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75 ರ ಅಭಿವೃದ್ಧಿ ಕಾಮಗಾರಿಗೆ ಮತ್ತೆ ಆರಂಭಗೊಂಡಿದೆ. ಕಳೆದ ಒಂದು ತಿಂಗಳಿನಿಂದ ಸ್ಥಗಿತಗೊಂಡಿದ್ದ ಕಾಮಗಾರಿಯನ್ನು ಇದೀಗ ಗುತ್ತಿಗೆ ವಹಿಸಿಕೊಂಡಿರುವ ಕಂಪನಿಯು ಆರಂಭಿಸಿದೆ. ಈ ನಡುವೆ ಕಾಮಗಾರಿ ಸ್ಥಗಿತದ ವಿಚಾರವನ್ನೇ ರಾಜಕೀಯವಾಗಿ ಬಳಸಿಕೊಳ್ಳಲೂ ಪಕ್ಷಗಳು ಪ್ರಯತ್ನಿಸಿವೆ. ಕಾಮಗಾರಿ ಸ್ಥಗಿತಗೊಳ್ಳಲು ಕೇಂದ್ರ ಸರಕಾರದ ನೀತಿ ಕಾರಣ ಎಂದು ಆರೋಪಿಸಿ ಪಾದಯಾತ್ರೆ ಪ್ರತಿಭಟನೆಯನ್ನು ಕಾಂಗ್ರೇಸ್ ಪಕ್ಷ ಈಗಾಗಲೇ ಮಾಡಿದೆ. ಈ ನಡುವೆ ಕಾಂಗ್ರೇಸ್ ಪಾದಯಾತ್ರೆಗೆ ಹೆದ್ದಾರಿ ಕಾಮಗಾರಿಯ ಗುತ್ತಿಗೆ ಪಡೆದ ಕಂಪನಿಯಿಂದ ಹಣ ಪಡೆದಿದೆ ಎನ್ನುವ ಆರೋಪವೂ ವ್ಯಕ್ತವಾಗತೊಡಗಿದೆ.

ಬಂದರು ನಗರಿ ಮಂಗಳೂರು ಹಾಗೂ ರಾಜ್ಯ ರಾಜಧಾನಿ ಬೆಂಗಳೂರನ್ನು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 75 ರ ಅಭಿವೃದ್ಧೀಕರಣ ಕಾಮಗಾರಿ ಈಗಾಗಲೇ ಆರಂಭಗೊಂಡಿದೆ. ಈ ಹೆದ್ದಾರಿಯನ್ನು ಚತುಷ್ಪಥ ರಸ್ತೆಯಾಗಿ ನಿರ್ಮಾಣ ಮಾಡುವ ಕಾಮಗಾರಿಯ ಗುತ್ತಿಗೆಯನ್ನು ಎಲ್ ಎಂಡ್ ಟಿ ಕಂಪನಿಯು ವಹಿಸಿಕೊಂಡಿದೆ. ಬಿ.ಸಿ.ರೋಡ್ ನಿಂದ ಅಡ್ಡಹೊಳೆ ವರೆಗೆ ಈ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದ್ದು, ಗುತ್ತಿಗೆದಾರ ಕಂಪನಿಯು ರಸ್ತೆಯ ಅಗಲೀಕರಣಕ್ಕಾಗಿ ರಸ್ತೆಯ ಇಕ್ಕೆಲಗಳನ್ನು ಅಗೆಯುವ ಪ್ರಕ್ರಿಯೆಯನ್ನೂ ಆರಂಭಿಸಿದೆ. ಆದರೆ ಕೆಲವು ಕಡೆಗಳಲ್ಲಿ ರಸ್ತೆಗೆ ಬೇಕಾದ ಜಾಗವನ್ನು ರಾಜ್ಯ ಸರಕಾರ ಒತ್ತುವರಿ ಮಾಡುವಲ್ಲಿ ವಿಳಂಬ ವಹಿಸಿದ ಕಾರಣ ಹಾಗೂ ಅರಣ್ಯ ಪ್ರದೇಶದಲ್ಲಿ ಅರಣ್ಯ ಇಲಾಖೆಯ ಅನುಮತಿಯ ಸಮಸ್ಯೆಯಿಂದಾಗಿ ಕಾಮಗಾರಿಯನ್ನು ಸಮರ್ಪಕವಾಗಿ ಮುಂದುವರಿಸಲಾಗದ ಹಿನ್ನಲೆಯಲ್ಲಿ ಕಂಪನಿಯು ಏಕಾಏಕಿ ರಸ್ತೆ ಕಾಮಗಾರಿಯನ್ನು ನಿಲ್ಲಿಸಿತ್ತು.

ಈ ನಡುವೆ ಕಾಮಗಾರಿ ವಿಳಂಬ ಹಾಗೂ ರಸ್ತೆಯ ಇಕ್ಕೆಲಗಳನ್ನು ಅಗೆದು ಹಾಕಿರುವುದರಿಂದ ವಾಹನ ಸಂಚಾರಕ್ಕೆ ತೊಂದರೆಯಾಗುತ್ತಿದೆ ಎಂದು ಆರೋಪಿಸಿ ಕಾಂಗ್ರೇಸ್ ಪಕ್ಷ ಇತ್ತೀಚೆಗೆ ನೆಲ್ಯಾಡಿಯಿಂದ ಬಿ.ಸಿ.ರೋಡ್ ವರೆಗೆ ಪಾದಯಾತ್ರೆಯನ್ನೂ ಹಮ್ಮಿಕೊಂಡಿತ್ತು. ಅದರಲ್ಲೂ ಮುಖ್ಯವಾಗಿ ಮಂಗಳೂರು ಸಂಸದ ನಳಿನ್ ಕುಮಾರ್ ಕಟೀಲ್ ವೈಫಲ್ಯವಾಗಿದ್ದಾರೆ ಎನ್ನುವುದನ್ನು ಬಿಂಬಿಸುವುದಕ್ಕೋಸ್ಕರವೇ ಈ ಪಾದಯಾತ್ರೆಯನ್ನು ಕೈಗೊಳ್ಳಲಾಗಿತ್ತು. ಆದರೆ ಇದೀಗ ಈ ಪಾದಯಾತ್ರೆಗಾಗಿ ಕಾಂಗ್ರೇಸ್ ಪಕ್ಷ ಗುತ್ತಿಗೆದಾರ ಕಂಪನಿಯಿಂದ ಹಣ ಪಡೆದುಕೊಂಡಿದೆ ಎನ್ನುವ ಆರೋಪವನ್ನು ಮಂಗಳೂರು ಸಂಸದ ನಳಿನ್ ಕುಮಾರ್ ಕಟೀಲ್ ಮಾಡಿದ್ದಾರೆ.

ಒಂದು ತಿಂಗಳ ಕಾಲ ರಸ್ತೆಯ ಕಾಮಗಾರಿಯನ್ನು ಕಂಪನಿ ನಿಲ್ಲಿಸಿದ್ದ ಹಿನ್ನಲೆಯಲ್ಲಿ ಕಂಪನಿಯ ಕಾಮಗಾರಿಯನ್ನು ಬಿಟ್ಟು ಜಾಗ ಖಾಲಿ ಮಾಡುತ್ತಿದೆ ಎನ್ನುವ ಆರೋಪವನ್ನೂ ಮಾಡಲಾಗುತ್ತಿತ್ತು. ಆದರೆ ಇದೀಗ ಕಂಪನಿಯ ಮತ್ತೆ ಕಾಮಗಾರಿಯನ್ನು ಕೈಗೆತ್ತಿಕೊಂಡಿದ್ದು,  ಗುಂಡಿ ಬಿದ್ದ ರಸ್ತೆಯನ್ನು ದುರಸ್ತಿ ಪಡಿಸುವ ಕಾಮಗಾರಿಯನ್ನು ನಡೆಸುತ್ತಿದೆ. ಅಲ್ಲದೆ ಭೂ ಒತ್ತುವರಿ ಹಾಗೂ ಅರಣ್ಯ ಇಲಾಖೆಯ ಅನುಮತಿಯನ್ನೂ ಪಡೆದುಕೊಳ್ಳಲಾಗಿದೆ. ಉಪ್ಪಿನಂಗಡಿ ಹಾಗೂ ಬಂಟ್ವಾಳದಲ್ಲಿ ಎರಡು ದೊಡ್ಡ ಸೇತುವೆ ಹಾಗೂ ಎರಡು ಕಡೆಗಳಲ್ಲಿ ರಸ್ತೆ ಮೇಲ್ಸೇತುವೆ ಕಾಮಗಾರಿಯನ್ನು ತುರ್ತಾಗಿ ನಿರ್ವಹಿಸಲು ತೀರ್ಮಾನಿಸಿದೆ.

ಒಟ್ಟಿನಲ್ಲಿ ಕಾರಣಾಂತರಗಳಿಂದ ಸ್ಥಗಿತಗೊಂಡಿದ್ದ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಆರಂಭಿಸಿದ್ದಾರೆ. ಆರೋಪ ಪ್ರತ್ಯಾರೋಪಗಳ ನಡುವೆಯು ಸಂಸದ ನಳಿನ ಕುಮಾರ್ ಕಟೀಲ್ ಅವರು, ಶೀಘ್ರ ರಸ್ತೆ ಕಾಮಗಾರಿ ನಡೆಸಿ ಪೂರ್ಣಗೊಳಿಸುವ ಭರವಸೆ ನೀಡಿದ್ದಾರೆ.

Related posts

Leave a Reply