Header Ads
Header Ads
Header Ads
Breaking News

ರಾಜ್ಯದಲ್ಲಿ ಪಾನ ನಿಷೇಧ ಜಾರಿಗೆ ಆಗ್ರಹ ಮದ್ಯವ್ಯಸನ ಮುಕ್ತಗೊಳಿಸುವ ವ್ಯಕ್ತಿಗಳಿಗೆ ಪ್ರಶಸ್ತಿ ಪುತ್ತೂರಿನಲ್ಲಿ ಡಾ.ವೀರೇಂದ್ರ ಹೆಗ್ಗಡೆ ಹೇಳಿಕೆ

ಪುತ್ತೂರು; ರಾಜ್ಯದಲ್ಲಿ ಪಾನನಿಷೇಧ ಜಾರಿಯಾಗಬೇಕು. ಈ ನಿಟ್ಟಿನಲ್ಲಿ ಮದ್ಯ ವ್ಯಸನದಿಂದ ಜನತೆಯನ್ನು ಮುಕ್ತಗೊಳಿಸುವ ವ್ಯಕ್ತಿಗಳಿಗೆ ’ಜಾಗೃತಿ ಮಿತ್ರ’ ಹಾಗೂ ’ಜಾಗೃತಿ ಅಣ್ಣ’ ಪ್ರಶಸ್ತಿ ನೀಡುವುದಾಗಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವಿರೇಂದ್ರ ಹೆಗ್ಗಡೆ ಘೋಷಿಸಿದರು.

ಅವರು ಪುತ್ತೂರು ಪುರಭವನದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಪುತ್ತೂರು ಹಾಗೂ ಪ್ರಗತಿಬಂಧು ಸ್ವಸಹಾಯ ಸಂಘಗಳ ಒಕ್ಕೂಟ ವತಿಯಿಂದ ಗಾಂಧಿ ಜಯಂತಿ ಪ್ರಯುಕ್ತ ನಡೆದ ಜನಜಾಗೃತಿ ಸಮಾವೇಶ ಹಾಗೂ ನವಜೀವನ ಸಮಿತಿ ಸದಸ್ಯರುಗಳ ಅಭಿನಂದನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಅಮಲು ಎನ್ನುವುದು ಆಕರ್ಷಣೆಯಾಗಿದೆ. 25 ಜನರನ್ನು ಹಾಗೂ 50 ಮಂದಿಯನ್ನು ಮದ್ಯಮುಕ್ತಗೊಳಿಸುವ ವ್ಯಕ್ತಿಗಳಿಗೆ ಪ್ರಶಸ್ತಿ ನೀಡಲಾಗುವುದು. ರಾಜ್ಯದಲ್ಲಿ ಮದ್ಯದಂಗಡಿ ಮುಕ್ತ ಗ್ರಾಮಗಳು ಹೆಚ್ಚಾಗುತ್ತಿರುವದು ಹೆಮ್ಮೆಯ ವಿಚಾರವಾಗಿದೆ. ಇಂತಹ ಗ್ರಾಮಗಳನ್ನು ಗುರುತಿಸುವ ಕೆಲಸಗಳನ್ನು ನಡೆಯಬೇಕು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಹಾಗೂ ಜನಜಾಗೃತಿ ವೇದಿಕೆಯಡಿಯಲ್ಲಿ ಇದನ್ನು ಮಾಡುವುದಾಗಿ ತಿಳಿಸಿದರು.

ರಾಜ್ಯದಲ್ಲಿ ಸುಮಾರು 40 ಲಕ್ಷ ಮಂದಿ ಸದಸ್ಯರು ಧರ್ಮಸ್ಥಳದ ಯೋಜನೆಯಡಿ ಕೆಲಸ ಮಾಡುತ್ತಿದ್ದಾರೆ. ಗಾಂಧಿ ಕಂಡ ಪಾನಮುಕ್ತ ಸಮಾಜ ನಿರ್ಮಾಣ ಮಾಡಲು ಪ್ರಯತ್ನ ಮಾಡುತ್ತಿದ್ದಾರೆ. ಮನಪರಿವರ್ತನೆಯಾದರೆ ಮಾತ್ರ ಈ ಪಾನಮುಕ್ತ ಸಮಾಜ ನಿರ್ಮಾಣವಾಗಲು ಸಾಧ್ಯವಾಗುತ್ತದೆ. ಇದನ್ನು ರಾಜ್ಯದಾದ್ಯಂತ ನಡೆಸಲು ಯೋಜನೆ ರೂಪಿಸಲಾಗಿದೆ ಎಂದವರು ಹೇಳಿದರು.
ಗಾಂಧಿ ಕಂಡ ಸ್ವಚ್ಛ ಭಾರತ ಹಾಗೂ ಮದ್ಯಮುಕ್ತ ಸಮಾಜಕ್ಕಾಗಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಹಾಗೂ ಜನಜಾಗೃತಿ ವೇದಿಕೆ ನಿರಂತರವಾಗಿ ಶ್ರಮ ಪಡುತ್ತಿವೆ. 1128 ಮದ್ಯವ್ಯಸನ ಮುಕ್ತ ಶಿಬಿರಗಳನ್ನು ರಾಜ್ಯದ ವಿವಿದೆಡೆ ನಡೆಸಲಾಗಿದೆ. ಇದೀಗ ಬಹಿರಂಗವಾಗಿ ಮದ್ಯಪಾನ ನಡೆಸುವವರ ಸಂಖ್ಯೆ ವಿರಳವಾಗುತ್ತಿದೆ. ಬಹಿರಂಗವಾಗಿ ಮದ್ಯಪಾನ ಮಾಡಬಾರದು ಎಂಬ ಪ್ರಜ್ಞೆ ಜನತೆಯಲ್ಲಿ ಉಂಟಾಗಿರುವುದು ನಿಜಕ್ಕೂ ಖುಷಿ ನೀಡಿದೆ ಎಂದವರು ಹೇಳಿದರು.

ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಒಡಿಯೂರು ಗುರುದೇವದತ್ತ ಸಂಸ್ಥಾನದ ಗುರುದೇವಾನಂದ ಸ್ವಾಮೀಜಿ ಮಾತನಾಡಿ, ರಾಜ್ಯದ ಲಕ್ಷಾಂತರ ಮಂದಿಯ ಬದುಕಿಗೆ ’ಬೊಲ್ಪು’ ನೀಡಿದ ಹಿರಿಮೆ ಧರ್ಮಸ್ಥಳದ ಡಾ.ವೀರೇಂದ್ರ ಹೆಗ್ಗಡೆಯವರಿಗಿದೆ. ಅವರು ಯೋಜನೆಗಳ ಮೂಲಕ ಮನ ಜಾಗೃತಿ ಹಾಗೂ ಜನಜಾಗೃತಿ ನಡೆಸುತ್ತಿದ್ದಾರೆ. ಇದೊಂದು ಆಂದೋಲನ. ಇದಕ್ಕೆ ಎಲ್ಲರ ಬೆಂಬಲವೂ ಬೇಕು. ರಾಜ್ಯದಲ್ಲಿ ಪಾನನಿಷೇಧ ಜಾರಿಯಾಗುವ ಮೂಲಕ ಮತ್ತಷ್ಟು ಜನ ಹೊಸ ಬದುಕು ಕಂಡುಕೊಳ್ಳುವಂತಾಗಬೇಕು. ಬದುಕಿನಲ್ಲಿ ಪಾರದರ್ಶಕತ್ವ ಇರಬೇಕು.ಇದಕ್ಕೆ ಧರ್ಮದ ಅರಿವಿರಬೇಕು. ಮೊದಲು ಮನಸ್ಸು ಜಾಗೃತಿಗೊಳ್ಳಬೇಕಾಗಿದೆ. ಕೃಷಿ ಪರಂಪರೆ ಹಾಗೂ ಋಷಿ ಪರಂಪರೆ ಯನ್ನು ನಡೆಸುತ್ತಿರುವ ಡಾ,ಹೆಗ್ಗಡೆಯವರ ವಿಶ್ವಮಾನ್ಯ ಮಾನವಧರ್ಮದ ಪರಿಕಲ್ಪನೆ ದೂರದರ್ಶಿತ್ವವನ್ನು ಹೊಂದಿದೆ ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ಶಾಸಕಿ ಶಕುಂತಳಾ ಶೆಟ್ಟಿ ಮಾತನಾಡಿ, ಮದ್ಯಪಾನದಿಂದ ದೂರವಾಗಿ ಹೊಸ ಬದುಕು ಕಟ್ಟಿಕೊಳ್ಳುವ ಮೂಲಕ ಈ ಬದುಕು ನೀಡಿದ ಧರ್ಮಸ್ಥಳ ಯೋಜನೆಗೆ ಚಿರ‌ಋಣಿಗಳಾಗಿರಬೇಕು. ಸರಕಾರ ಮಾಡಬೇಕಾದ ಕಾರ್ಯಗಳನ್ನು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮಾಡುತ್ತಿದೆ. ಈ ಸಮಾವೇಶದ ಮೂಲಕ ನಡೆಸಿದ ರಾಜ್ಯದಲ್ಲಿ ಪಾನನಿಷೇಧ ಜಾರಿಯಾಗಬೇಕು. ಮುಂದಿನ ಚುನಾವಣೆ ಮದ್ಯಮುಕ್ತ ಚುನಾವಣೆಯಾಗಬೇಕು ಎಂಬ ಹಕ್ಕೊತ್ತಾಯ ಮಂಡನೆಯನ್ನು ವಾರದೊಳಗೆ ಮುಖ್ಯಮಂತ್ರಿ ಸಿದ್ಧರಾಮಯ್ಯರವರಿಗೆ ತಲುಪಿಸುವುದಾಗಿ ಅವರು ಹೇಳಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಜನಜಾಗೃತಿ ವೇದಿಕೆಯ ರಾಜ್ಯಾಧ್ಯಕ್ಷ ಸತೀಶ್ ಹೊನ್ನವಳ್ಳಿ, ತಾಪಂ ಅಧ್ಯಕ್ಷೆ ಭವಾನಿ ಚಿದಾನಂದ, ನಗರಸಭಾ ಅಧ್ಯಕ್ಷೆ ಜಯಂತಿ ಬಲ್ನಾಡು, ಮದ್ಯಪಾನ ಸಂಯಮ ಮಂಡಳಿ ಸದಸ್ಯ ಭಾಸ್ಕರ ಕೋಡಿಂಬಾಳ, ಪುಡಾ ಅಧ್ಯಕ್ಷ ಕೌಶಲ್ ಪ್ರಸಾದ್ ಶೆಟ್ಟಿ ಭಾಗವಹಿಸಿದ್ದರು. ವೇದಿಕೆಯಲ್ಲಿ ಜನಜಾಗೃತಿ ವೇದಿಕೆಯ ವಲಯಾಧ್ಯಕ್ಷ ಪ್ರಶಾಂತ್ ಮುರ, ಪ್ರಗತಿಬಂಧು,ಸ್ವಸಹಾಯ ಕೇಂದ್ರ ಒಕ್ಕೂಟದ ಅಧ್ಯಕ್ಷ ರಾಮಣ್ಣ ಗೌಡ ಗುಂಡೋಲೆ, ಶಶಿಕುಮಾರ್ ಬಾಲ್ಯೊಟ್ಟು, ಸಾಜ ರಾಧಾಕೃಷ್ಣ ಆಳ್ವ, ಅರುಣ್ ಕುಮಾರ್ ಪುತ್ತಿಲ, ನಿರ್ದೇಶಕ ಸೀತಾರಾಮ ಶೆಟ್ಟಿ ಮೊದಲಾದವರು ಉಪಸ್ಥಿರಿದ್ದರು.

ಜನಜಾಗೃತಿ ವೇದಿಕೆಯ ತಾಲೂಕು ಅಧ್ಯಕ್ಷ ಪದ್ಮನಾಭ ಶೆಟ್ಟಿ ಸ್ವಾಗತಿಸಿದರು. ನಿರ್ದೇಶಕ ವಿವೇಕ್ ಪಾಸ್ ಹಕ್ಕೊತ್ತಾಯ ಮಂಡಿಸಿದರು. ಧ.ಯೋಜನೆಯ ಯೋಜನಾಧಿಕಾರಿ ಧರ್ಣಪ್ಪ ಮೂಲ್ಯ ವಂದಿಸಿದರು. ಲೋಕೇಶ್ ಬೆತ್ತೋಡಿ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದ ಮುನ್ನ ಪುತ್ತೂರು ಮಹಾಲಿಂಗೇಶ್ವರ ದೇವಳ ಬಳಿಯಿಂದ ಜಾಗೃತಿ ಜಾಥಾ ನಡೆಸಲಾಯಿತು. ಮದ್ಯಮುಕ್ತರಿಗೆ ಪ್ರಮಾಣಪತ್ರ ಹಾಗೂ ನವಜೀವನ ಸದಸ್ಯರಿಗೆ ಗುಲಾಬಿ ಹೂ ನೀಡಿ ಅಭಿನಂದಿಸಲಾಯಿತು.

ನೋಟಿಗೆ ಬೆಲೆ ಇಲ್ಲ. ಗಾಂಧಿ ಪೋಟೊ ಇರುವ ಕಾರಣ ಈ ನೋಟಿಗೆ ಬೆಲೆ ಬಂದಿದೆ. ಇಲ್ಲದಿದ್ದರೆ ಯಾವ ನೋಟಿಗೂ ಬೆಲೆಯೇ ಇರುತ್ತಿರಲಿಲ್ಲ. ಗಾಂಧಿ ಕಂಡ ಸ್ವಚ್ಛತೆಗಾಗಿ ’ಎಸ್‌ಎಂಎಸ್’ ಮೂಲಕ ಅಭಿಯಾನವೊಂದನ್ನು ನಡೆಸಿದ್ದೇವೆ. 37 ಲಕ್ಷ ಫೋನ್ ಗಳಿಗೆ ಈ ಮಾಹಿತಿ ಕಳುಹಿಸಲಾಗಿದೆ. ಎಲ್ಲಾ ಕಡೆಗಳಿಂದಲೂ ಪೂರಕ ಸ್ಪಂಧನೆ ಸಿಕ್ಕಿದೆ. ದೇಶದ ಪ್ರಧಾನ ಮಂತ್ರಿಯವರೂ ವೈಯುಕ್ತಿಕವಾಗಿ ಪತ್ರ ಬರೆದು ಸ್ವಚ್ಛತೆಯ ನೇತೃತ್ವ ವಹಿಸಿಕೊಳ್ಳಿ ಎಂದಿದ್ದರು. ಪಾನಮುಕ್ತ ಹಾಗೂ ಸ್ವಚ್ಛ ಸಮಾಜಕ್ಕಾಗಿ ನಿರಂತರವಾಗಿ ಕೆಲಸ ಮಾಡುವುದಾಗಿ ಡಾ.ವೀರೇಂದ್ರ ಹೆಗ್ಗಡೆ ಹೇಳಿದರು.

Related posts

Leave a Reply