Header Ads
Breaking News

ರಾತ್ರೋರಾತ್ರಿ ಜಾರ್ಖಂಡ್‍ಗೆ ಹೊರಟುನಿಂತ ವಲಸೆ ಕಾರ್ಮಿಕರು

ಮಂಗಳೂರಿನಲ್ಲಿ ಅದೇಷ್ಟೋ ಮಂದಿ ವಲಸೆ ಕಾರ್ಮಿಕರಿದ್ದು, ಲಾಕ್ ಡೌನ್ ಆದ ಬಳಿಕ ಅವರ ಸ್ಥಿತಿ ಅತಂತ್ರವಾಗಿದೆ. ರಾತ್ರೋರಾತ್ರಿ ಜಾರ್ಖಂಡ್ ವಲಸೆ ಕಾರ್ಮಿಕರು ಹೊರಟು ನಿಂತಿದ್ದರು. ಮಂಗಳೂರಿನಿಂದ ಕಾಲ್ನಡಿಗೆಯಲ್ಲೇ ತೆರಳಲು ಆರಂಭಿಸಿದ್ದ ಕಾರ್ಮಿಕರನ್ನು ಅಧಿಕಾರಿಗಳು ಮತ್ತು ಪೊಲೀಸರು ಮನವೊಲಿಸಲು ಹರಸಾಹಸಪಟ್ಟರು. ಮಧ್ಯರಾತ್ರಿಯವರೆಗೂ ಮನವೊಲಿಕೆಯ ಪ್ರಯತ್ನ ನಡೆಸಿದ್ದರು. ಕೊನೆಗೆ ಜಿಲ್ಲಾ ಎಸ್ಪಿಯವರು ಮನವೊಲಿಸಿ ಬಂಟ್ವಾಳದ ಬಂಟರ ಭವನದಲ್ಲಿ ತಾತ್ಕಾಲಿಕವಾಗಿ ಉಳಿಯುವಂತೆ ಮಾಡುವಲ್ಲಿ ಯಶಸ್ವಿಯಾದರು.ಲಾಕ್‍ಡೌನ್‍ನಿಂದ ಮಂಗಳೂರಿನ ವಿವಿಧ ಭಾಗಗಳಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಜಾಖರ್ಂಡ್ ರಾಜ್ಯದ ಸುಮಾರು ಒಂದೂವರೆ ಸಾವಿರಕ್ಕೂ ಅಧಿಕ ಕಾರ್ಮಿಕರು ಮಂಗಳೂರಿನಿಂದ ಕಾಲ್ನಡಿಗೆಯಲ್ಲಿ ತಮ್ಮ ರಾಜ್ಯಕ್ಕೆ ತೆರಲುವುದಾಗಿ ಮಂಗಳವಾರ ರಾತ್ರಿ 9 ಗಂಟೆಯ ಸುಮಾರಿಗೆ ಹೊರಟ್ಟಿದ್ದರು. ಈ ಬಗ್ಗೆ ವಿಷಯ ತಿಳಿದ ಅಧಿಕಾರಿಗಳು ಮಾರ್ಗ ಮಧ್ಯೆ ಕಾರ್ಮಿಕರನ್ನು ತಡೆದು ಮನವೊಲಿಸಲು ಶತ ಪ್ರಯತ್ನ ಪಟ್ಟರೂ ಅಧಿಕಾರಿಗಳ ಮಾತುಗಳನ್ನು ಲೆಕ್ಕಿಸದೆ ತಮ್ಮ ಪ್ರಯಾಣವನ್ನು ಮುಂದುವರಿಸಿದರು.ಮಂಗಳೂರು ನಗರದಿಂದ ಮಂಗಳೂರು – ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ತಮ್ಮ ಮಕ್ಕಳು, ಮಹಿಳೆಯರು ಹಾಗೂ ತಮ್ಮ ಬಟ್ಟೆಬರೆಗಳನ್ನು ಗಂಟುಮೂಟೆ ಕಟ್ಟಿ ಹೊರಟ ಕಾರ್ಮಿಕರನ್ನು ಮಾರ್ಗ ಮಧ್ಯೆ ವಿವಿಧೆಡೆ ತಡೆದು ನಿಲ್ಲಿಸಿದ ಅಧಿಕಾರಿಗಳು, ಮೂರು ದಿನ ಇಲ್ಲೇ ಇರಿ. ಬಳಿಕ ನಿಮ್ಮನ್ನು ಊರಿಗೆ ತಲುಪಿಸಲು ರೈಲಿನ ವ್ಯವಸ್ಥೆ ಮಾಡುತ್ತೇವೆ. ಅಲ್ಲಿಯವರೆಗೆ ಊಟ, ತಿಂಡಿಯ ವ್ಯವಸ್ಥೆಯೂ ಮಾಡುತ್ತೇವೆ ಎಂದು ಮನವೊಲಿಸಿದರು.

ಆದರೆ ಕಾರ್ಮಿಕರು ಯಾರ ಮಾತನ್ನೂ ಲೆಕ್ಕಿಸದೆ ತಮ್ಮ ಪ್ರಯಾಣವನ್ನು ಮುಂದುವರಿಸಿದರು.ಕೊನೆಗೆ ಮಂಗಳೂರು ಕಮಿಷನರೇಟ್ ವ್ಯಾಪ್ತಿ ಮುಗಿದು ಜಿಲ್ಲಾ ಪೊಲೀಸ್  ವರಿಷ್ಟಧಿಕಾರಿಯ ವ್ಯಾಪ್ತಿಯ ಗಡಿಯಾದ ಆರ್ಕುಲದಲ್ಲಿ ಜಿಲ್ಲಾ ಪೊಲೀಸ್ ವರಿಷ್ಟಧಿಕಾರಿ ನೇತೃತ್ವದಲ್ಲಿ ಪೊಲೀಸರು ಕಾರ್ಮಿಕರ ಮನವೊಲಿಸಲು ಪ್ರಯತ್ನಿಸಿದರು. ಆರಂಭದಲ್ಲಿ ಯಾರ ಮಾತಿಗೂ ಜಗ್ಗದ ಕಾರ್ಮಿಕರು ಕೊನೆಗೆ ಬ್ರಹ್ಮರಕೊಟ್ಲು ಟೋಲ್‍ಗೇಟ್ ಸಮೀಪದಲ್ಲಿರುವ ಬಂಟರ ಭವನದಲ್ಲಿ ಉಳಿದುಕೊಳ್ಳಲು ಎಸ್ಪಿ ಮಾಡಿದ ಮನವಿಗೆ ತಲೆಯಾಡಿಸಿದರು.ಕಾರ್ಮಿಕರು ನಡೆದುಕೊಂಡು ಬರುವ ವಿಷಯ ತಿಳಿದ ಕೆಲವರು ಕಾರ್ಮಿಕರಿಗೆ ಫರಂಗಿಪೇಟೆ ಮತ್ತು ತುಂಬೆಯಲ್ಲಿ ಹಣ್ಣು, ಕುಡಿಯುವ ನೀರಿನ ವ್ಯವಸ್ಥೆ ಮಾಡಿದರು. ಸುಮಾರು 20 ಕಿಲೋ ಮೀಟರ್ ನಡೆದುಕೊಂಡು ಬಂದ ಕಾರ್ಮಿಕರು ಆದಾಗಲೇ ಸುಸ್ತಾಗಿದ್ದರು. ಆದರೂ ತಮ್ಮ ಪ್ರಯಾಣವನ್ನು ಮುಂದುವರಿಸಿಕೊಂಡು ಬಂಟರ ಭವನದ ಬಳಿಗೆ ರಾತ್ರಿ 2 ಗಂಟೆಯ ಸುಮಾರಿಗೆ ಬಂದ ಕಾರ್ಮಿಕರನ್ನು ಪೊಲೀಸರು ಹಾಗೂ ತುಂಬೆ, ಫರಂಗಿಪೇಟೆಯಲ್ಲಿ ನೀರು, ಮುಸುಂಬಿಯನ್ನು ಹಂಚಿದ ಯುವಕರು ಮನವೊಲಿಸಿ ಕೊನೆಗೂ ಬಂಟರ ಭವನಕ್ಕೆ ತೆರಲುವಂತೆ ಮಾಡುವಲ್ಲಿ ಯಶಸ್ವಿಯಾದರು. ಈ ವೇಳೆಯೂ ಕೆಲವು ಕಾರ್ಮಿಕರು ತಮ್ಮ ಪ್ರಯಾಣವನ್ನು ಮುಂದುವರಿಸಲು ಮುಂದಾದರು. ಅವರನ್ನು ಹರಸಾಹಸ ಪಟ್ಟು ಭವನಕ್ಕೆ ತೆರಳುವಂತೆ ಮಾಡಲಾಯಿತು.ಬಂಟರ ಭವನದಲ್ಲಿ ಮಂಗಳೂರು ಶಾಸಕ ವೇದವ್ಯಾಸ್ ಕಾಮತ್ ನೇತೃತ್ವದಲ್ಲಿ ಕಾರ್ಮಿಕರಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತು. ಊಟದ ಬಳಿಕ, ನಿಮ್ಮನ್ನು ಮೂರು ದಿನಗಳ ಬಳಿಕ ನಿಮ್ಮ ಊರಿಗೆ ತಲುಪಿಸುವ ವ್ಯವಸ್ಥೆ ಮಾಡುತ್ತೇವೆ. ಅಲ್ಲಿಯ ವರೆಗೆ ಇಲ್ಲಿಯೇ ತಂಗಿರಿ. ಊಟ, ತಿಂಡಿಯ ವ್ಯವಸ್ಥೆಯನ್ನು ನಾವು ಮಾಡುತ್ತೇವೆ ಎಂದು ಮನವೊಲಿಸಿದರು. ಈ ವೇಳೆಯೂ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು. ಬಳಿಕ ಕಾರ್ಮಿಕರು ಭವನದ ಪಾರ್ಕಿಂಗ್‍ನಲ್ಲಿ ವಿಶ್ರಾಂತಿ ಪಡೆದು ನಿದ್ದೆಗೆ ಜಾರಿದರು.

Related posts

Leave a Reply

Your email address will not be published. Required fields are marked *