Header Ads
Header Ads
Breaking News

ರಾಯಿ ಮಹಾಲಿಂಗೇಶ್ವರ ದೇವಳದ ವಾರ್ಷಿಕ ಜಾತ್ರಾ ಮಹೋತ್ಸವ ಪರಧರ್ಮ ನಿಂದಿಸುವವರು ಚಾರಿತ್ರ್ಯದ ಬಗ್ಗೆ ಅರಿತುಕೊಂಡಿರಬೇಕು ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಅಭಿಪ್ರಾಯ

ಬಂಟ್ವಾಳ: ಸನಾತನ ಹಿಂದೂ ಧರ್ಮಕ್ಕೆ ಪರಧರ್ಮ ಸಹಿಷ್ಣುತೆಯಿಂದಾಗಿ ಜಗತ್ತಿನಲ್ಲಿ ಹೆಚ್ಚಿನ ಗೌರವ ದೊರೆತಿದ್ದು, ಪ್ರಸಕ್ತ ಕೇವಲ ಭಾಷಣಕ್ಕೆ ಸೀಮಿತಗೊಂಡ ಸರ್ವೇ ಜನೋ ಸುಖಿನೋ ಭವಂತು ಮತ್ತು ವಸುದೈವ ಕುಟುಂಬಕಂ ಬಗ್ಗೆ ಮಾತನಾಡಿ ಬಳಿಕ ಪರಧರ್ಮ ನಿಂದಿಸುವ ಮಂದಿ ವೈಯಕ್ತಿಕ ಚಾರಿತ್ರ್ಯ ಬಗ್ಗೆಯೂ ಅರಿತುಕೊಂಡಿರಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಹೇಳಿದ್ದಾರೆ. ರಾಯಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರಾ ಮಹೋತ್ಸವ ಪ್ರಯುಕ್ತ ಬುಧವಾರ ಸಂಜೆ ಏರ್ಪಡಿಸಿದ್ದ ಧಾರ್ಮಿಕ ಸಭೆ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. 

ಧಾರ್ಮಿಕ ಸಭೆಯಲ್ಲಿ ಹಿಂಸೆಗೆ ಪ್ರಚೋದನೆ ಸಲ್ಲದು ಎಂದು ಹೇಳಿದ ಅವರು ಯತಿಗಳು ಮನುಷ್ಯರಿಗಿಂತ ಅತೀತರಾಗಿ ಶಿಷ್ಟಾಚಾರ ಮೀರಬಾರದು ಎಂದರು. ಜಿಲ್ಲೆಯ ನೈಜ ಪೀಠಾಧಿಪತಿ ಸುಬ್ರಹ್ಮಣ್ಯ ವಿದ್ಯಾಪ್ರಸನ್ನತೀರ್ಥ ಸ್ವಾಮೀಜಿ ಇತರರಿಗೆ ಮಾದರಿಯಾಗಿದ್ದು, ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರು ಲಕ್ಷದೀಪೋತ್ಸವದಲ್ಲಿ ನೈಜ ಸನಾತನ ಹಿಂದೂ ಧರ್ಮದ ಸಂದೇಶ ಸಾರುತ್ತಿದ್ದಾರೆ ಎಂದು ಹೇಳಿದರು.
ಸುಬ್ರಹ್ಮಣ್ಯ ಮಠ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಆಶೀರ್ವಚನ ನೀಡಿ, ಭಕ್ತರು ನಿರ್ಮಲ ಮನಸ್ಸು ಮತ್ತು ನಿಷ್ಕಲ್ಮಶ ಭಕ್ತಿಯಿಂದ ಧಾರ್ಮಿಕ ಕ್ಷೇತ್ರಗಳಿಗೆ ತೆರಳಿದಾಗ ದೇವರು ತ್ವರಿತವಾಗಿ ಒಲಿಯುತ್ತಾರೆ ಎಂದರು. ಧಾರ್ಮಿಕ ಕ್ಷೇತ್ರಗಳಲ್ಲಿ ಧಾರ್ಮಿಕ ಮತ್ತು ಆಧ್ಯಾತ್ಮಿಕ ಚಿಂತನೆಗಳಿಗೆ ಹೆಚ್ಚಿನ ಒತ್ತು ನೀಡಬೇಕು ಎಂದರು.
ಇದೇ ವೇಳೆ ದೇವಸ್ಥಾನ ಸಂಪರ್ಕ ರಸ್ತೆಗೆ ಡಾಂಬರೀಕರಣ ಮತ್ತು ಸೇತುವೆ ನಿರ್ಮಾಣ ಕಾಮಗಾರಿಗೆ ಅನುದಾನ ಒದಗಿಸಿದ ಸಚಿವ ರೈ ಅವರನ್ನು ಸನ್ಮಾನಿಸಲಾಯಿತು.ತಂತ್ರಿ ನಡ್ವಂತಾಡಿ ಬಾಲಕೃಷ್ಣ ಪಾಂಗಣ್ಣಾಯ, ಜಿಲ್ಲಾ ಪಂಚಾಯಿತಿ ಸದಸ್ಯರಾದ ಚಂದ್ರಪ್ರಕಾಶ ಶೆಟ್ಟಿ, ಬಿ.ಪದ್ಮಶೇಖರ ಜೈನ್, ಅಕ್ರಮ ಸಕ್ರಮ ಸಮಿತಿ ಅಧ್ಯಕ್ಷ ಕೆ.ಮಾಯಿಲಪ್ಪ ಸಾಲ್ಯಾನ್, ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಸುಧೀರ್ ಕುಮಾರ್ ಶೆಟ್ಟಿ ಮತ್ತಿತರ ಗಣ್ಯರು ಹಾಜರಿದ್ದರು.