Header Ads
Breaking News

ರಾಷ್ಟ್ರೀಯ ಶಿಕ್ಷಣ ನೀತಿ ಕುರಿತು ಎಸ್.ಡಿ.ಎಂ ವಿದ್ಯಾರ್ಥಿ ವಿಚಾರ ಸಂಕಿರಣ

ಉಜಿರೆ, ಮಾ.15: ಹೊಸ ಕಾಲದ ಅಗತ್ಯಗಳಿಗೆ ಅನುಗುಣವಾಗಿ ಶೈಕ್ಷಣಿಕ ವಲಯವನ್ನು ಪುನರ್‍ರೂಪಿಸುವ ನೆಲೆಯಲ್ಲಿ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಚಿಕಿತ್ಸಕ ದೃಷ್ಟಿಕೋನದೊಂದಿಗೆ ಗ್ರಹಿಸಿ ಅನುಷ್ಠಾನಗೊಳಿಸಬೇಕು ಎಂದು ತುಮಕೂರು ವಿಶ್ವವಿದ್ಯಾಲಯದ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಪ್ರೊ.ರವೀಂದ್ರಕುಮಾರ್ ಬಿ. ಅಭಿಪ್ರಾಯಪಟ್ಟರು.

ರಾಷ್ಟ್ರೀಯ ಶಿಕ್ಷಣ ನೀತಿ – 2020ರ ಕುರಿತು ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರ ಮತ್ತು ಐಕ್ಯೂಎಸಿ (ಪರಾಮರ್ಶ್) ಸಹಯೋಗದಲ್ಲಿ ಸೋಮವಾರ ಏರ್ಪಟ್ಟ ಒಂದು ದಿನದ ರಾಜ್ಯಮಟ್ಟದ ವಿದ್ಯಾರ್ಥಿ ವಿಚಾರ ಸಂಕಿರಣ ಉದ್ಘಾಟನಾ ಸಮಾರಂಭದಲ್ಲಿ ಅವರು ಪ್ರಧಾನ ಆಶಯ ಚಿಂತನೆಗಳನ್ನು ಪ್ರಸ್ತುತಪಡಿಸಿ ಮಾತನಾಡಿದರು.
ರಾಷ್ಟ್ರೀಯ ಶಿಕ್ಷಣ ನೀತಿಯು ವಿವಿಧ ಹಂತಗಳಲ್ಲಿ ವಿದ್ಯಾರ್ಥಿಗಳ ಶೈಕ್ಷಣಿಕ ಸಾಮಥ್ರ್ಯಕ್ಕೆ ಹೊಸ ಆಯಾಮ ನೀಡುವ ಉದ್ದೇಶ ಹೊಂದಿದೆ. ವಿವಿಧ ಹಂತಗಳಲ್ಲಿ ಅಧ್ಯಯನನಿರತ ವಿದ್ಯಾರ್ಥಿಗಳು ಕಲಿಕೆಯ ಮೂಲಕ ಪಡೆದುಕೊಂಡ ಜ್ಞಾನವನ್ನು ವೃತ್ತಿಪರವಾಗಿ ಬಳಸಿಕೊಳ್ಳುವ ಕೌಶಲ್ಯಯುತ ಬಗೆಗಳನ್ನು ಕಾಣಿಸುತ್ತದೆ. ಈ ದೃಷ್ಟಿಯಿಂದ ರಾಷ್ಟ್ರೀಯ ಶಿಕ್ಷಣ ನೀತಿ ಮಹತ್ವದ್ದು ಎಂದು ತಿಳಿಸಿದರು.
ಮುಖ್ಯ ಅತಿಥಿಯಾಗಿದ್ದ ಹಂಪಿ ವಿಶ್ವವಿದ್ಯಾಲಯದ ಪ್ರಸಾರಾಂಗ ನಿರ್ದೇಶಕ ಪ್ರೊ.ಪ್ರಶಾಂತ್ ಎಚ್.ಡಿ ಶೈಕ್ಷಣಿಕ ನೀತಿಗಳನ್ನು ಚಿಕಿತ್ಸಕ ದೃಷ್ಟಿಕೋನದೊಂದಿಗೆ ವಿಶ್ಲೇಷಿಸಿದಾಗ ಶಿಕ್ಷಣ ವಲಯದಲ್ಲಿ ಆಮೂಲಾಗ್ರ ಬದಲಾವಣೆಗೆ ಬೇಕಾದ ರಚನಾತ್ಮಕ ಮಾರ್ಗದರ್ಶಿ ಸೂತ್ರಗಳನ್ನು ಹೊಳೆಸಿಕೊಳ್ಳುವುದಕ್ಕೆ ಸಾಧ್ಯವಾಗುತ್ತದೆ ಎಂದರು.
ವಿವಿಧ ಹಂತಗಳಲ್ಲಿ ಕಾರ್ಯೋನ್ಮುಖರಾದ ಶಿಕ್ಷಕರು ಮತ್ತು ಅಧ್ಯಯನನಿರತ ವಿದ್ಯಾರ್ಥಿಗಳು ಶಿಕ್ಷಣ ನೀತಿಯನ್ನು ಭಿನ್ನವಾಗಿ ಗ್ರಹಿಸಬೇಕು. ಆ ಗ್ರಹಿಕೆಯ ನೆರವಿನೊಂದಿಗೆ ಕಲಿಕೆಯ ಸಾಧ್ಯತೆಗಳನ್ನು ವಿಸ್ತರಿಸುವುದಕ್ಕೆ ಪ್ರಯತ್ನಿಸಬೇಕು. ಇದರಿಂದ ಶಿಕ್ಷಣ ವಲಯದಲ್ಲಿ ಮಹತ್ವದ ಸುಧಾರಣೆಯ ಹೆಜ್ಜೆಗಳನ್ನಿರಿಸಬಹುದು ಎಂದು ಹೇಳಿದರು.
ಶಿಕ್ಷಣ ನೀತಿಯನ್ನು ರೂಪುಗೊಳಿಸುವ ಮತ್ತು ಅನುಷ್ಠಾನದ ಹಂತದಲ್ಲಿ ಸಮಗ್ರ ತಿಳುವಳಿಕೆ ಅಗತ್ಯವಾಗುತ್ತದೆ. ಈ ತಿಳುವಳಿಕೆಯು ಇಡೀ ಪ್ರಾಯೋಗಿಕ ಸಮಸ್ಯೆಗಳು ಎದುರಾದಾಗ ಆ ಕ್ಷಣಕ್ಕೆ ಪರಿಹಾರ ಕಂಡುಕೊಳ್ಳುವುದಕ್ಕೆ ನೆರವಾಗುತ್ತದೆ. ಕಲಿಕೆಯಲ್ಲಿ ಪ್ರಮುಖ ಪಾತ್ರವಹಿಸುವ ಶಿಕ್ಷಕರು ಸಮಗ್ರ ತಿಳುವಳಿಕೆ ಮತ್ತು ಚಿಕಿತ್ಸಕ ದೃಷ್ಟಿಕೋನದೊಂದಿಗೆ ಕಾರ್ಯೋನ್ಮುಖವಾಗಬೇಕು ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಎಸ್.ಡಿ.ಎಂ ಕಾಲೇಜಿನ ಪ್ರಾಂಶುಪಾಲರಾದ ಡಾ.ಸತೀಶ್ಚಂದ್ರ ಎಸ್ ಅವರು ರಾಷ್ಟ್ರೀಯ ಶಿಕ್ಷಣ ನೀತಿಯ ಮೂಲಕ ಜ್ಞಾನಾರ್ಜನೆಯ ಕ್ರಮಗಳಲ್ಲಿ ವ್ಯಾಪಕವಾದ ಬದಲಾವಣೆಯನ್ನು ನೆಲೆಗೊಳಿಸುವ ಅಗತ್ಯವಿದೆ ಎಂದರು.
ಇಂಗ್ಲಿಷ್ ವಿಭಾಗದ ಮುಖ್ಯಸ್ಥರು, ಐಕ್ಯೂಎಸಿ(ಪರಾಮರ್ಶ್) ಸಂಯೋಜಕರಾದ ಡಾ.ಶಂಕರನಾರಾಯಣ ಅವರು ರಾಷ್ಟ್ರೀಯ ಶಿಕ್ಷಣ ನೀತಿಯ ಸ್ವರೂಪವನ್ನು ಪರಿಚಯಿಸಿ ವಿಶ್ಲೇಷಿಸಿದರು. ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರದ ಡೀನ್ ಡಾ.ಪಿ.ವಿಶ್ವನಾಥ, ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ.ಜಯಕುಮಾರ್ ಶೆಟ್ಟಿ, ಸಹಾಯಕ ಪ್ರಾಧ್ಯಾಪಕ ಡಾ.ಗಣರಾಜ್ ಇಂಗ್ಲಿಷ್ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ.ಮಂಜುಶ್ರೀ ಉಪಸ್ಥಿತರಿದ್ದರು. ಪ್ರಣವ್ ಎಂ.ಎಚ್. ಸ್ವಾಗತಿಸಿದರು. ರಾಗ ರವೀಶ್ ಹೆಗ್ಡೆ ಕಾರ್ಯಕ್ರಮ ನಿರೂಪಿಸಿದರು. ಶಿನ್ಸ್ ಪಿ ಆ್ಯಂಥೋನಿ ವಂದಿಸಿದರು.

Related posts

Leave a Reply

Your email address will not be published. Required fields are marked *