

ಅಶೋಕ್ ಲೈಲ್ಯಾಂಡ್ ದೋಸ್ತ್ ಹಾಗೂ ಈಚರ್ ನಡುವೆ ಡಿಕ್ಕಿ ಸಂಭವಿಸಿ ದೋಸ್ತ್ ಚಾಲಕ ಬಂಟ್ವಾಳ ತಾಲೂಕಿನ ಮಂಚಿ ನಿವಾಸಿ ಹನೀಫ್(40ವ.) ಎಂಬವರು ಮೃತಪಟ್ಟ ಘಟನೆ ರಾಷ್ಟ್ರೀಯ ಹೆದ್ದಾರಿ 75ರ ಶಿರಾಡಿ ಗ್ರಾಮದ ಉದನೆ ಸಮೀಪ ನಡೆದಿದೆ. ಘಟನೆಯಲ್ಲಿ ಇಬ್ಬರು ಗಂಭೀರ ಗಾಯಗೊಂಡಿದ್ದಾರೆ. ಬಿ.ಸಿ.ರೋಡ್ನಿಂದ ಹಾಸನಕ್ಕೆ ಬೀಡಿ ಸಾಗಾಟ ಮಾಡುತ್ತಿದ್ದ ಅಶೋಕ್ ಲೈಲ್ಯಾಂಡ್ ದೋಸ್ತ್ ಹಾಗೂ ಚೆನ್ನರಾಯಪಟ್ಟಣದಿಂದ ಮಂಗಳೂರಿಗೆ ಸೀಯಾಳ ಸಾಗಾಟ ಮಾಡುತ್ತಿದ್ದ ಈಚರ್ ನಡುವೆ ಉದನೆ ಸಮೀಪ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಘಟನೆಯಲ್ಲಿ ಅಶೋಕ್ ಲೈಲ್ಯಾಂಡ್ ದೋಸ್ತ್ ವಾಹನದ ಚಾಲಕ, ಬಂಟ್ವಾಳ ತಾಲೂಕಿನ ಮಂಚಿ ನಿವಾಸಿ ಹನೀಫ್, ಬಂಟ್ವಾಳ ನಿವಾಸಿಗಳಾದ ಕರೀಂ, ರಫೀಕ್ ಎಂಬವರು ಗಾಯಗೊಂಡಿದ್ದರು. ಈ ಪೈಕಿ ಗಂಭೀರ ಗಾಯಗೊಂಡಿದ್ದ ಹನೀಫ್ ಮಂಗಳೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಇನ್ನಿಬ್ಬರು ಚಿಕಿತ್ಸೆ ಪಡೆಯುತ್ತಿರುವುದಾಗಿ ವರದಿಯಾಗಿದೆ.