Header Ads
Breaking News

ರಾಸಾಯನಿಕ ನೀರು ಹರಿದು ಮೀನುಗಳ ಮಾರಣಹೋಮ : ಯುಪಿಸಿಎಲ್ ಕಂಪನಿಯ ವಿರುದ್ಧ ಮತ್ತೆ ಮೀನುಗಾರರು ಗರಂ

ವಿವಾದಿತ ಯುಪಿಸಿಎಲ್ ಕಂಪನಿಯ ವಿರುದ್ಧ ಮತ್ತೆ ಮೀನುಗಾರರು ಗುಡುಗಿದ್ದು, ಕಂಪನಿಯ ನಿರ್ಲಕ್ಷ್ಯದಿಂದಾಗಿ ರಾಸಾಯನಿಕ ತ್ಯಾಜ್ಯ ಮಳೆ ನೀರಿನೊಂದಿಗೆ ಕಾಮಿನಿ ಹೊಳೆ ಸೇರಿದ್ದು, ಮೀನುಗಳ ಮಾರಣ ಹೋಮ ನಡೆದಿದೆ. ಈ ಬಗ್ಗೆ ಸಂಬಂಧಪಟ್ಟ ಇಲಾಖೆಗಳು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಮೀನುಗಾರ ಮುಖಂಡ ಸುಧಾಕರ್ ಕರ್ಕೇರ ಗುಡುಗಿದ್ದಾರೆ.

ಕಾಮಿನಿ ನದಿ ನೀರು ಕಲುಷಿತಗೊಂಡು ಸಂಭವಿಸಿರುವ ಸಹಸ್ರಾರು ಮೀನುಗಳ ಸಾವು ಮತ್ತು ಸಾರ್ವಜನಿಕರ ಬಾವಿ ನೀರು ಹಾಳಾಗಿರುವ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳುವ ಉದ್ದೇಶದೊಂದಿಗೆ ಹೆಜಮಾಡಿ ಮುಟ್ಟಳಿವೆ ಪ್ರದೇಶಕ್ಕೆ ವಿವಿಧ ಇಲಾಖಾಧಿಕಾರಿಗಳು ಭೇಟಿ ನೀಡಿದ ಸಂದರ್ಭ ಮಾತನಾಡಿದರು.

ಪಡುಬಿದ್ರಿ-ಹೆಜಮಾಡಿ ಗಡಿಭಾಗದಲ್ಲಿ ಪ್ರಕೃತಿಗೆ ವಿರುದ್ಧವಾಗಿ ಮುಟ್ಟಳಿವೆಯಲ್ಲಿ ನಿರ್ಮಿಸಲಾಗಿರುವ 80ಲಕ್ಷ ರೂ. ಗಳ ಸೇತುವೆ ಹಾಗೂ ಸಮುದ್ರ ಮತ್ತು ನದಿಗಳಿಗೆ ಅಡ್ಡಲಾಗಿ ನಿರ್ಮಿಸಲಾಗಿರುವ ರಸ್ತೆಗಳಿಂದಾಗಿ ಕಾಮಿನಿ ನದಿ ನೀರು ಒಂದು ಬದಿಯಲ್ಲಿ ಹರಿಯದೇ ಶೇಖರಣೆಯಾಗಿತ್ತು. ಹಾಗಾಗಿ ಅಲ್ಲಿ ಮೀನುಗಳಿಗೆ ಆಮ್ಲಜನಕವು ಕಡಿಮೆಯಾಗಿ ಸತ್ತಿರುವ ಸಂಭವವೂ ಇದೆ ಎಂದು ಅಧಿಕಾರಿಗಳಿಗೆ ವಿವರಿಸಿದರು.

ಜನರ ಅಭಿಪ್ರಾಯಗಳನ್ನು ಸಂಗ್ರಹಿಸಿದ ಅಧಿಕಾರಿಗಳು ಸಮುದ್ರ ಸೇರುತ್ತಿದ್ದ ಅಳಿವೆ ನೀರು, ಮುಟ್ಟಳಿವೆ ಪ್ರದೇಶದಲ್ಲಿ ಶೇಖರಣೆಗೊಂಡು ಪಾಚಿ ಸಹಿತವಾಗಿರುವ ಕಾಮಿನಿ ನದಿ ನೀರು, ಮೀನುಗಳ ಸಾವಿಗೆ ಕಾರಣವಾಗಿರುವ ಕಪ್ಪು ವರ್ಣಕ್ಕೆ ತಿರುಗಿರುವ ನದಿ ನೀರಿನ ಮಾದರಿಗಳನ್ನು ಪರಿಸರ ಮತ್ತು ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳ ಕಚೇರಿಗೆ ಮತ್ತು ಸತ್ತ ಮೀನುಗಳ ಸಹಿತ ವಿವಿದೆಡೆಗಳ ನೀರಿನ ಮಾದರಿಗಳನ್ನೂ ಸಾಗರ ಮೀನುಗಾರಿಕಾ ಸಂಶೋಧನಾ ಕೇಂದ್ರಗಳ ಪರಿಶೀಲನೆಗಾಗಿ ಈ ಅಧಿಕಾರಿಗಳು ಸಂಗ್ರಹಿಸಿ ಒಯ್ದರು. ಅದರೊಂದಿಗೆ ಈಚೆಗಷ್ಟೇ ಮಳೆ ನೀರಿನ ಹರಿವಿಗಾಗಿ ಮಣ್ಣನ್ನು ತೆರವುಗೊಳಿಸಲಾಗಿರುವ ರಾಷ್ಟ್ರೀಯ ಹೆದ್ದಾರಿ 66ರ ಎರ್ಮಾಳು ಕಲ್ಸಂಕ ಪ್ರದೇಶ, ಯುಪಿಸಿಎಲ್ ಸ್ಥಾವರದೊಳಗಿನ ಕಲ್ಲಿದ್ದಲು ಶೇಖರಣಾ ಯಾರ್ಡ್, ಎರ್ಮಾಳಿನ ಪಂಪಿಂಗ್ ಸ್ಟೇಶನ್, ಪಡುಬಿದ್ರಿ ಕಾಮಿನಿ ನದಿ ತೀರದ ಬಾವಿ ಪ್ರದೇಶಗಳಿಗೆ ತೆರಳಿ ಅಲ್ಲಿನ ನೀರಿನ ಮಾದರಿಗಳನ್ನು ಪರಿಶೀಲನೆಗಾಗಿ ಕೊಂಡೊಯ್ದರು.

ಸಮಸ್ಯೆಯ ಬಗ್ಗೆ ಅರಿವಾಗಿದೆ. ಹಾಗಾಗಿ ಕೇಂದ್ರೀಯ ಸಾಗರ ಮೀನುಗಾರಿಕಾ ಸಂಶೋಧನಾ ಕೇಂದ್ರದ ಅಧಿಕಾರಿ ಹಾಗೂ ಪರಿಸರ ಇಲಾಖಾ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿದ್ದು ಪರಿಶೀಲಿಸಲಾಗಿದೆ. ಎಂದು ಮೀನುಗಾರಿಕಾ ಇಲಾಖೆ ಉಪ ನಿರ್ದೇಶಕ ಪಾಶ್ರ್ವನಾಥ್ ಹೇಳಿದರು.

ಯುಪಿಸಿಎಲ್ ಕಲ್ಲಿದ್ದಲು ಶೇಖರಣೆಯ ಯಾರ್ಡ್‍ನಿಂದ ಹೊರ ಬಿಡಲಾಗುತ್ತಿರುವ ನೀರಿನ ಮೂಲಕ ಕಲ್ಲಿದ್ದಲು ಸಮುದ್ರವನ್ನು ಸೇರುತ್ತಿದ್ದು ಅದರಿಂದಾಗಿ ಮೀನುಗಳು ಸಾಯುವಂತಾದವು ಎಂಬುದನ್ನು ಸಾರ್ವಜನಿಕರು ದೂರಿಕೊಂಡಿದ್ದಾರೆ. ಪರಿಶೀಲನೆಗೆ ನೀರಿನ ಮಾದರಿಗಳನ್ನು ಸಂಗ್ರಹಿಸಿದ್ದೇವೆ. ಇವುಗಳನ್ನು ಸುರತ್ಕಲ್‍ನ ಎನ್‍ಐಟಿಕೆಗೆ ರವಾನಿಸಲಾಗುವುದು. ಅಲ್ಲಿಂದ ಪರೀಕ್ಷಾ ವರದಿ ಬಂದ ಬಳಿಕ ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಉಡುಪಿ ಜಿಲ್ಲಾ ಪರಿಸರ ಅಧಿಕಾರಿ ಡಾ.ಎಚ್. ಲಕ್ಷ್ಮೀಕಾಂತ್ ಹೇಳಿದ್ದಾರೆ.

ಈ ಸಂದರ್ಭ ಅವರ ಮಾತಿಗೆ ಆಕ್ಷೇಪ ವ್ಯಕ್ತ ಪಡಿಸಿದ ಮೀನುಗಾರರು ಸಮಸ್ಯೆ ಯಾವುದರಿಂದ ಆಗಿದ್ದರೂ ಅಂತಿಮವಾಗಿ ಈ ಹಿಂದಿನಂತೆ ಯುಪಿಸಿಎಲ್ ಕಂಪನಿಯ ಪರ ನಿಮ್ಮ ವರದಿ ಸಿದ್ಧವಾಗಿ ಹೊರ ಬರುತ್ತದೆ ಎಂದಾಗ ಅಧಿಕಾರಿಗಳ ಮುಖ ಇಂಗು ತಿಂದ ಮಂಗನಂತ್ತಾಗಿತ್ತು.

Related posts

Leave a Reply

Your email address will not be published. Required fields are marked *