
ಮಂಗಳೂರು: ಭಾರತೀಯ ರೆಡ್ಕ್ರಾಸ್ ಸಂಸ್ಥೆ ದಕ್ಷಿಣ ಕನ್ನಡ ಜಿಲ್ಲಾ ಘಟಕ ವತಿಯಿಂದ ರಕ್ತ ಸಂಗ್ರಹ ಅಭಿಯಾನ ಜ.13ರಂದು ಆರಂಭಗೊಳ್ಳಲಿದೆ. ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸಹಕಾರದೊಂದಿಗೆ ನಡೆಯಲಿರುವ ರಕ್ತ ಸಂಗ್ರಹ ಅಭಿಯಾನಕ್ಕೆ ಲೇಡ್ ಹಿಲ್ನ ಪತ್ರಿಕಾಭವನದ ಮುಂಭಾಗದಲ್ಲಿ ದ.ಕ.ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ ಚಾಲನೆ ನೀಡಲಿರುವರು ಎಂದು ಸಿಎ ಶಾಂತರಾಮ್ ಶೆಟ್ಟಿ ತಿಳಿಸಿದರು.
ಅವರು ಮಂಗಳೂರಿನ ಪ್ರೆಸ್ಕ್ಲಬ್ನಲ್ಲಿ ಸುದ್ದಿಗೋಷ್ಟಿ ನಡೆಸಿ ಮಾಹಿತಿ ನೀಡಿದರು. ರಕ್ತಸಂಗ್ರಹ ಮತ್ತು ರಕ್ತದಾನದ ಬಗ್ಗೆ ಜಾಗೃತಿ ಅಭಿಯಾನ ಜ.16ರ ತನಕ ನಡೆಯಲಿದೆ. ರಕ್ತ ಸಂಗ್ರಹಕ್ಕೆ ರೆಡ್ ಕ್ರಾಸ್ ರೋಟರಿ ಬಸ್ ನಗರದಾದ್ಯಂತ ಸಂಚರಿಲಿದ್ದು, ಈ ಬಸ್ನಲ್ಲಿ ಒಮ್ಮೆಲೆ ಮೂವರಿಗೆ ರಕ್ತದಾನಕ್ಕೆ ವ್ಯವಸ್ಥೆ ಇದೆ. ಸರ್ಕಾರಿ ಲೇಡಿಗೋಶನ್ ಆಸ್ಪತ್ರೆಯ ಆವರಣದಲ್ಲಿರುವ ರೆಡ್ಕ್ರಾಸ್ ರಕ್ತನಿಧಿ ದಿನದ 24 ತಾಸು ನಿರಂತರವಾಗಿ ರೋಗಿಗಳ ರಕ್ತದ ಅಗತ್ಯತೆಯನ್ನು ಪೂರೈಸುವುದರೊಂದಿಗೆ ಅವರ ಜೀವ ಉಳಿಸುವ ಸೇವೆಯಲ್ಲಿ ನಿರತವಾಗಿದೆ. ನುರಿತ ವೈದ್ಯರು, ಅನುಭವಿ ಮತ್ತು ನಿಷ್ಠಾವಂತ ತಂತ್ರಜ್ಞರು ಹಾಗೂ ಸಿಬ್ಬಂದಿಗಳ ಪರಿಶ್ರಮದಿಂದ ಈ ರೆಡ್ಕ್ರಾಸ್ ರಕ್ತನಿಧಿ ಕಾರ್ಯ ನಿರ್ವಹಿಸುತ್ತಿದೆ. ರಕ್ತದಾನಕ್ಕೆ ಯುವ ಜನಂಗವನ್ನು ಪ್ರೇರೇಪಿಸುವ, ರಕ್ತ ಸಂಗ್ರಹಿಸುವ, ಪರೀಕ್ಷಿಸುವ ಮತ್ತು ವಿತರಿಸುವ ಕಾರ್ಯದಲ್ಲಿ ಇದು ತೊಡಗಿಕೊಂಡಿದೆ. ನಮ್ಮ ರೆಡ್ಕ್ರಾಸ್ ರಕ್ತನಿಧಿಯ ಅಪರಿಮಿತ ಸೇವೆಯನ್ನು ಪರಿಗಣಿಸಿ ಕರ್ನಾಟಕ ರಾಜ್ಯದ ಗೌರವಾನ್ವಿತ ರಾಜ್ಯಪಾಲರು ಪ್ರಶಸ್ತಿಯನ್ನು ನೀಡಿದ್ದಾರೆ ಎಂದು ಹೇಳಿದರು.
ಸುದ್ದಿಗೋಷ್ಟಿಯಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಗೌರವ ಕಾರ್ಯದರ್ಶಿ ಎಸ್.ಎ. ಪ್ರಭಾಕರ ಶರ್ಮಾ, ಸದಸ್ಯರಾದ ಬಿ.ರವೀಂದ್ರ ಶೆಟ್ಟಿ, ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಶ್ರೀನಿವಾಸ್ ನಾಯಕ್ ಇಂದಾಜೆ, ಪ್ರಧಾನ ಕಾರ್ಯದರ್ಶಿ, ಇಬ್ರಾಹಿಂ ಅಡ್ಕಸ್ಥಳ ಉಪಸ್ಥಿತರಿದ್ದರು.