Header Ads
Header Ads
Header Ads
Breaking News

ರೈತನಿಗೆ ಬೆಲೆ ಸಿಕ್ಕಾಗ ಅಭಿವೃದ್ಧಿ ಪಥದತ್ತ ಸಾಗಲು ಸಾಧ್ಯ ಸಹಕಾರಿ ಸಂಘಗಳು ಕಾರ್ಯೋನ್ಮುಖವಾಗಿದೆ ಕಲ್ಲಡ್ಕ ಡಾ. ಪ್ರಭಾಕರ್ ಭಟ್ ಹೇಳಿಕೆ

ಬಂಟ್ವಾಳ: ದೇಶಕ್ಕೆ ಅನ್ನ ಕೊಡುವ ರೈತನಿಗೆ ಬೆಲೆ ಸಿಕ್ಕಾಗ ಅಭಿವೃದ್ಧಿ ಪಥದತ್ತ ಸಾಗಲು ಸಾಧ್ಯ. ಈ ಹಿನ್ನೆಲೆಯಲ್ಲಿ ಜನರ ಬಳಿಗೆ ವ್ಯವಸ್ಥೆ ತೆರಳುವ ಪರಿಕಲ್ಪನೆ ಇಂದು ಹೆಚ್ಚು ಜನಪ್ರಿಯವಾಗುತ್ತಿದ್ದು, ಸಹಕಾರಿ ಸಂಘಗಳು ಈ ದಿಸೆಯಲ್ಲಿ ಕಾರ್ಯೋನ್ಮುಖವಾಗಿವೆ ಎಂದು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಕಲ್ಲಡ್ಕ ಡಾ. ಪ್ರಭಾಕರ ಭಟ್ ಹೇಳಿದರು.

ಬೋಳಂತೂರಿನಲ್ಲಿ ಬುಧವಾರ ಬೆಳಗ್ಗೆ ಕಲ್ಲಡ್ಕ ರೈತರ ಸೇವಾ ಸಹಕಾರಿ ಸಂಘದ ನೂತನ ಎರಡನೇ ಶಾಖೆಯನ್ನು ಉದ್ಘಾಟಿಸಿ ಅವರು ಮಾತನಾಡಿ, ಜನರಿಗೆ ಸುಲಭವಾಗುವಂತೆ ವ್ಯವಸ್ಥೆಯನ್ನು ಒದಗಿಸಬೇಕು. ರೈತ ಸಶಕ್ತನಾದರೆ ದೇಶ ಸುಭಿಕ್ಷವಾಗಲು ಸಾಧ್ಯ, ಅಂತ್ಯೋದಯದಲ್ಲಿರುವ ಜನಸಾಮಾನ್ಯನಿಗೆ ಯಾವುದೇ ಯೋಜನೆಗಳು ತಲುಪಿದಾಗ ರಾಷ್ಟ್ರದ ಉದ್ದಾರ ಸಾಧ್ಯ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿ, ಸಾಲಪತ್ರ ವಿತರಿಸಿ ಮಾತನಾಡಿದ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಡಾ. ಎಂ.ಎನ್. ರಾಜೇಂದ್ರ ಕುಮಾರ್ ಸಹಕಾರಿ ಸಂಘಗಳು ಕೇವಲ ಠೇವಣಿ, ಸಾಲ ವಿತರಣೆ ,ವಸೂಲಾತಿಗೆ ಮಾತ್ರ ಸೀಮಿತವಾಗದೆ ಕಷ್ಟ, ಸುಖಗಳಿಗೂ ಸ್ಪಂದಿಸಬೇಕು. ಈ ನಿಟ್ಟಿನಲ್ಲಿ ಕಲ್ಲಡ್ಕ ರೈತರ ಸೇವಾ ಸಹಕಾರಿ ಸಂಘ ಶ್ಳಾಘನೀಯ ಸೇವೆ ನೀಡುತ್ತಿದೆ ಎಂದು ಅಭಿನಂದಿಸಿದರು. ಸಂಘವು ಇಟ್ಟಿರುವ ಬೇಡಿಕೆಗೆ ಶೀಘ್ರವಾಗಿ ಸ್ಪಂದಿಸುವ ಭರವಸೆ ನೀಡಿದರಲ್ಲದೆ ಈ ಶಾಖೆ ಐದು ಗ್ರಾಮಗಳಲ್ಲೂ ಶಾಖೆಯನ್ನು ತೆರಯಲಿ ಎಂದು ಅಶಯ ವ್ಯಕ್ತ ಪಡಿಸಿದರು. ಕಲ್ಲಡ್ಕ ರೈತರ ಸೇವಾ ಸಹಕಾರಿ ಸಂಘ ಕ್ಯಾಶ್‌ಲೆಸ್ ವ್ಯವಹಾರ ಮೂಲಕ ಜಿಲ್ಲೆಯಲ್ಲೇ ಗಮನ ಸೆಳೆದಿದೆ. ಈ ಸಂಘದ ಕಂಪ್ಯೂಟರ್ ಖರೀದಿಗೆ 1 ಲಕ್ಷ ರೂವನ್ನು ಡಿಸಿಸಿ ಬ್ಯಾಂಕ್ ನೀಡಲಿದ್ದು, ಸ್ವಸಹಾಯ ಗುಂಪುಗಳ ಪ್ರೇರಕರನ್ನು ಒದಗಿಸುತ್ತೇವೆ. ಹೊಸ ಯೋಜನೆಗಳಿಗೆ ಅಗತ್ಯ ಬೇಡಿಕೆ ಪೂರೈಸಲು ಬದ್ಧ ಎಂದು ರಾಜೇಂದ್ರ ಕುಮಾರ್ ಹೇಳಿದರು.

ಕ್ಯಾಂಪ್ಕೋ ಅಧ್ಯಕ್ಷ ಎಸ್.ಆರ್.ಸತೀಶ್ಚಂದ್ರ ಎಸ್‌ಸಿಡಿಸಿಸಿ ಬ್ಯಾಂಕ್ ನಿರ್ದೇಶಕ ರಾಜಾರಾಮ ಭಟ್, ಟಿ.ಜಿ, ಬೋಳಂತೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷ ಚಂದ್ರಶೇಖರ ರೈ ಮಾತನಾಡಿದರು. ಮಾಜಿ ಶಾಸಕ, ಕಲ್ಲಡ್ಕ ರೈ.ಸೇ.ಸ.ಸ.ನಿ ಅಧ್ಯಕ್ಷ ಕೆ.ಪದ್ಮನಾಭ ಕೊಟ್ಟಾರಿ ಪ್ರಾಸ್ತಾವಿಕವಾಗಿ ಮಾತನಾಡಿ, ಸಂಘದ ಕಾರ್ಯ ವ್ಯಾಪ್ತಿಯು ಗೋಳ್ತಮಜಲು, ಅಮ್ಟೂರು , ಬಾಳ್ತಿಲ, ವೀರಕಂಭ, ಬೋಳಂತೂರು ಗ್ರಾಮಗಳು ಸೇರಿದಂತೆ ಒಟ್ಟು ೫ ಗ್ರಾಮ ವ್ಯಾಪ್ತಿಯನ್ನು ಒಳಗೊಂಡಿದೆ. ಪ್ರಸ್ತುತ ಪ್ರಧಾನ ಕಛೇರಿಯನ್ನು ಕಲ್ಲಡ್ಕದಲ್ಲಿ ಹಾಗೂ ಶಾಖೆಯನ್ನು ವೀರಕಂಭದಲ್ಲಿ ಹೊಂದಿರುತ್ತದೆ ಎಂದರು.

ಮಂಗಳೂರು ಉಪವಿಭಾಗದ ಸಹಕಾರ ಸಂಘಗಳ ಸಹಾಯಕ ನಿಬಂಧಕ ಮಂಜುನಾಥ ಸಿಂಗ್, ಎಪಿ‌ಎಂಸಿ ಸದಸ್ಯ ನೇಮಿರಾಜ ರೈ ಮತ್ತಿತರರು ಉಪಸ್ಥಿತರಿದ್ದರು. ಇದೇ ಸಂದರ್ಭ ಸಾಲಪತ್ರ, ಠೇವಣಿಪತ್ರಗಳನ್ನು ವಿತರಿಸಲಾಯಿತು. ಇದೇ ಸಂದರ್ಭ ಅರ್ಹ ಫಲಾನುಭವಿಗಳಿಗೆ ಸಂಘದ ವತಿಯಿಂದ ಉಚಿತ ಕನ್ನಡ ವಿತರಣೆ ನಡೆಯಿತು.

Related posts

Leave a Reply