

ಮಂಗಳೂರು , ಮಾ. 24 : ಪುತ್ತೂರಿನ 62 ವರ್ಷದ ಗಂಗಾಧರ್ ಎಂಬವರು ಸ್ಥಳೀಯ 22 ವರ್ಷದ ವಿಧವೆ ಮುಸ್ಲಿಮ್ ಮಹಿಳೆಯನ್ನು ಮದುವೆಯಾಗಿರುವ ಪ್ರಕರಣವನ್ನು ಲವ್ ಜಿಹಾದ್ ಎಂಬುದಾಗಿ ಆರೋಪಿಸುತ್ತಿರುವ ವಿಶ್ವ ಹಿಂದೂ ಪರಿಷತ್ನ ಮುಖಂಡರ ಹೇಳಿಕೆಗೆ ಡಿ.ವೈ.ಎಫ್.ಐ ಮುಖಂಡ ಮುನೀರ್ ಕಾಟಿಪಳ್ಳ ಅವರು ಸವಾಲು ಹಾಕಿದ್ದಾರೆ, ಇದೊಂದು ವಂಚನೆಯ ಮರು ಮದುವೆ ಪ್ರಕರಣವಾಗಿದ್ದು, ಲವ್ ಜಿಹಾದ್ ಎಂದು ಆರೋಪಿಸುವವರು ಸೂಕ್ತ ದಾಖಲೆಯೊಂದಿಗೆ ಚರ್ಚೆಗೆ ಬನ್ನಿ ಎಂದು ಮುನೀರ್ ಕಾಟಿಪಳ್ಳ ಅವರು ಸವಾಲು ಹಾಕಿದ್ದಾರೆ.
ಗಂಗಾಧರ್ ಅವರು ಈಗಾಗಲೇ ಐದು ಮದುವೆಯಾಗಿದ್ದು, ಇದರಲ್ಲಿ ಹಿಂದು ಹಾಗೂ ಮುಸ್ಲಿಂ ಧರ್ಮದ ಮಹಿಳೆಯರು ವಂಚನೆಗೆ ಒಳಗಾಗಿದ್ದಾರೆ. ಈಗಾಗಲೇ ಈ ಬಗ್ಗೆ ಪ್ರಕರಣ ದಾಖಲಾಗಿದೆ. ಗಂಗಾಧರ್ ಅವರನ್ನು ಮದುವೆಯಾಗಿರುವ ಪುತ್ತೂರಿನ ಮುಸ್ಲಿಂ ಮಹಿಳೆಯು ಮದುವೆ ಬ್ರೋಕರ್ಗಳ ವಂಚನೆಗೆ ಸಿಲುಕಿ ಮೋಸ ಹೋಗಿದ್ದಾಳೆ. ಈ ಮಹಿಳೆಯ ಗಂಡ ಅಪಘಾತದಲ್ಲಿ ಮೃತಪಟ್ಟಿದ್ದು, 9 ವರ್ಷದ ಮಗನೊಂದಿಗೆ ವಾಸ ಮಾಡುತ್ತಿದ್ದಾರೆ. ಕಡು ಬಡತನದ ಈ ಮಹಿಳೆ ಮಗನನ್ನು ಬೀಡಿ ಕಟ್ಟಿಸಿ , ತಾನು ಬೀಡಿ ಕಟ್ಟಿಕೊಂಡು ಬಾಡಿಗೆ ಮನೆಯಲ್ಲಿ ಜೀವನ ಸಾಗಿಸುತ್ತಿದ್ದಾಳೆ , ಈಕೆಯ ಬದುಕಿಗೆ ಆಸರೆಯಾಗುವ ಆಸೆ ತೋರಿಸಿ ಬ್ರೋಕರ್ಗಳು ಗಂಗಾಧರ್ ಅವರನ್ನು ಈಕೆಗೆ ಮದುವೆ ಮಾಡಿದ್ದಾರೆ ಎಂದು ಮುನೀರ್ ಕಾಟಿಪಳ್ಳ ಆರೋಪಿಸಿದ್ದಾರೆ.
ಮದುವೆ ಬ್ರೋಕರ್ಗಳು ತಮ್ಮ ಕಮಿಷನ್ ಆಸೆಗಾಗಿ ಬಾಡಿಗೆ ಮೌಲವಿಗಳನ್ನು ಕರೆತಂದು ವಿಧವೆ ಮುಸ್ಲಿಂ ಮಹಿಳೆಯನ್ನು ಗಂಗಾಧರ್ ಗೆ ಮದುವೆ ಮಾಡಿಸಿದ್ದಾರೆ. ಮದುವೆ ಬಳಿಕ ತಿಂಗಳುಗಳ ಕಾಲ ಆಕೆಯ ಜೊತೆಗಿದ್ದ ಗಂಗಾಧರ್ ಆಕೆಯನ್ನು ದೈಹಿಕವಾಗಿ ಬಳಸಿಕೊಂಡು , ಕೊನೆಗೆ ಬಲವಂತದ ಅಬಾರ್ಷನ್ ಮಾಡಿ , ದೈಹಿಕ ಹಿಂಸೆ ನೀಡಿ ಓಡಿಸಿದ್ದಾನೆ ಎಂದು ಮುನೀರ್ ಕಾಟಿಪಳ್ಳ ಆರೋಪಿಸಿದ್ದಾರೆ.
ವಂಚಿತ ಮಹಿಳೆ ಹಾಗೂ ಆಕೆಯ 9 ವರ್ಷದ ಮಗ ಇಂದು ಡಿ.ವೈ.ಎಫ್.ಐ ಕಚೇರಿಗೆ ಭೇಟಿ ನೀಡಿ ತನಗೆ ಆಗಿರುವ ಅನ್ಯಾಯವನ್ನು ಹೇಳಿಕೊಂಡಿದ್ದು , ಮದುವೆಯ ಸಲುವಾಗಿ ಗಂಗಾಧರ್ ತಾನು ಮುಸ್ಲಿಮ್ ಧರ್ಮಕ್ಕೆ ಮತಾಂತರವಾಗುವುದಾಗಿ ನಂಬಿಸಿದ್ದಾನೆ ಎಂದು ಮಹಿಳೆ ದೂರಿಕೊಂಡಿದ್ದಾಳೆ ಎಂದು ಎ ಮುನೀರ್ ಕಾಟಿಪಳ್ಳ ಹೇಳಿದ್ದಾರೆ. ಲವ್ ಜಿಹಾದ್ ಎಂದು ಆರೋಪಿಸುವ ವಿವಿಧ ಸಂಘಟನೆಯವರು ಮದುವೆ ವಂಚಕ ಗಂಗಾಧರ್ ನ ವಿರುದ್ಧ ಕ್ರಮ ಆಗ್ರಹಿಸಿ , ಮಹಿಳೆಯರಿಗೆ ಗಂಗಾಧರ್ ಮಾಡಿರುವ ವಂಚನೆಯನ್ನು ಬಯಲಿಗೆ ತರಲಿ ಎಂದು ಮುನೀರ್ ಕಾಟಿಪಳ್ಳ ಆಗ್ರಹಿಸಿದ್ದಾರೆ.