Header Ads
Breaking News

ಲಾಕ್ ಡೌನ್ ನಲ್ಲಾದ ಪರಿಚಯ ಕೊಲೆಯಲ್ಲಿ ಅಂತ್ಯ-ಪತ್ನಿ ಸಹಿತ ಆಕೆಯ ಸ್ನೇಹಿತನ ಬಂಧನ

ಮಂಜೇಶ್ವರ: ಕೊಲೆಗೈದು ಕುಂಜತ್ತೂರು ಪದವು ರಸ್ತೆ ಬದಿಗೆಸೆದ ಪತ್ನಿ ಹಾಗೂ ಆಕೆಯ ಸ್ನೇಹಿತನನ್ನು ಮಂಜೇಶ್ವರ ಪೊಲೀಸರು ಬಂಧಿಸಿದ್ದಾರೆ. ಕರ್ನಾಟಕ ಗದಗ ನಿವಾಸಿ ಹನುಮಂತಪ್ಪ ಕುಂಜತ್ತೂರು ಪದವು ರಸ್ತೆ ಬದಿಯಲ್ಲಿ ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಬಳಿಕ ಪೊಲೀಸರು ನಡೆಸಿದ ತನಿಖೆಯಲ್ಲಿ ಇದೊಂದು ಕೊಲೆ ಎಂದು ಸಾಬೀತಾಗಿ ಪತ್ನಿ ಭಾಗ್ಯಶ್ರೀ (26) ಹಾಗೂ ಆಕೆಯ ಪ್ರಿಯಕರ ಅಲ್ಲಾಸಾಬ್ (23)ನನ್ನು ಬಂಧಿಸಿದ್ದಾರೆ.

ನವಂಬರ್ ಐದರಂದು ಮುಂಜಾನೆ ಎರಡು ಗಂಟೆಗೆ ಹನುಮಂತ ಮಂಗಳೂರಿನ ಹೋಟೆಲ್‌ನಲ್ಲಿ ಕೆಲಸ ಮುಗಿಸಿ ಮನೆಗೆ ಬಂದಾಗ ಪತ್ನಿ ಜೊತೆ ಅಲ್ಲಾ ಪಾಷಾ ಇರುವುದು ಕಂಡು ಬಂದಿದೆ. ಈ ಸಂದರ್ಭದಲ್ಲಿ ವಾಗ್ವಾದ ನಡೆದು ಹೊಡೆದಾಟಕ್ಕೆ ಕಾರಣವಾಗಿದೆ. ಈ ಸಂದರ್ಭದಲ್ಲಿ ಹನುಮಂತನನ್ನು ಇಬ್ಬರು ಸೇರಿ ಉಸಿರುಗಟ್ಟಿಸಿ ಕೊಲೆಗೈದಿದ್ದಾರೆ. ಬಳಿಕ ಅಲ್ಲಾ ಪಾಷಾ ತನ್ನ ಬೈಕ್‌ನಲ್ಲಿ ಮೃತದೇಹವನ್ನು ಕಟ್ಟಿಕೊಂಡೊಯ್ದಿದ್ದು, ಭಾಗ್ಯಶ್ರೀ ಸ್ಕೂಟರ್‌ನಲ್ಲಿ ಹಿಂಬಾಲಿಸಿದ್ದಾಳೆ. ಮೃತದೇಹವನ್ನು ಕುಂಜತ್ತೂರು ಪದವಿನಲ್ಲಿ ರಸ್ತೆಯಲ್ಲಿ ಎಸೆದು ಸ್ಕೂಟರ್ ಮಗುಚಿ ಹಾಕಿ ಅಲ್ಲಿಂದ ಬೈಕ್‌ನಲ್ಲಿ ಮನೆಗೆ ಮರಳಿದ್ದಾರೆ. ಅಪಘಾತ ಎಂದು ಬಿಂಬಿಸಲು ಯತ್ನಿಸಿದ್ದರು.ಬೆಳಿಗ್ಗೆ ಪರಿಸರವಾಸಿಗಳು ಘಟನೆಯನ್ನು ಕಂಡು ಮಂಜೇಶ್ವರ ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕಾಗಮಿಸಿದ ಪೊಲೀಸರು ಅಪಘಾತ ಎಂದು ನಂಬಿದ್ದರು. ಆದರೆ ಪರಿಸರವಾಸಿಗಳು ಸಂಶಯ ವ್ಯಕ್ತಪಡಿಸಿದ್ದರಿಂದ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕಣ್ಣೂರು ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಕೊಂಡೊಯ್ಯಲಾಗಿತ್ತು.
ಹನುಮಂತನ ಕುಟುಂಬ ಹಲವು ವರ್ಷಗಳಿಂದ ತಲಪಾಡಿಯ ದೇವಿಪುರದಲ್ಲಿ ವಾಸವಾಗಿದ್ದು, ವಿಕಲಚೇತನರಾಗಿದ್ದ ಹನುಮಂತ ಕೊಡಿಯಾಲ್‌ಬೈಲ್‌ನ ಹೋಟೆಲ್‌ವೊಂದರಲ್ಲಿ ದುಡಿಯುತ್ತಿದ್ದನು. ಅಲ್ಲಾ ಪಾಷಾ ಜೆಸಿಬಿ ಚಾಲಕನಾಗಿ ಕೆಲಸ ನಿರ್ವಹಿಸುತ್ತಿದ್ದನು.
ವರದಿ: ರೆಹಮಾನ್ ಮಂಜೇಶ್ವರ

Related posts

Leave a Reply

Your email address will not be published. Required fields are marked *